ಶಿರಾ: ಸರ್ಕಾರಿ ಅನುದಾನಿತ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕನಿಗೆ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಲು ಫೋನ್ ಪೇ ಮೂಲಕ 23 ಸಾವಿರ ರೂಪಾಯಿ ಲಂಚ ಸ್ವೀಕರಿಸಿದ್ದ ಪ್ರೌಢ ಶಾಲಾ ಮುಖ್ಯ ಶಿಕ್ಷಕನನ್ನು ಲೋಕಾಯುಕ್ತ ಪೊಲೀಸರು ಬಂಧಿದ್ದಾರೆ.
ತುಮಕೂರು ಜಿಲ್ಲೆ, ಶಿರಾ ತಾಲೂಕು, ಮದಲೂರು ಗ್ರಾಮದ ಹಾವನೂರು ಗ್ರಾಮಾಂತರ ಸರ್ಕಾರಿ ಅನುದಾನಿತ ಪ್ರೌಢ ಶಾಲಾ ಮುಖ್ಯ ಶಿಕ್ಷಕ ವಿ.ನಾಗರಾಜು ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ.
ಇದೇ ಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ (ಎಸ್‌ಡಿಎ) ಕಾರ್ಯ ನಿರ್ವಹಿಸುತ್ತಿರುವ ದೂರುದಾರ ಲೋಕೇಶ ಆರ್. ಅವರ ಪತ್ನಿ ಇದೇ ಅ.4ರಂದು ಖಾಸಗಿ ಆಸ್ಪತ್ರೆಯಲ್ಲಿ ಎರಡನೇ ಮಗುವಿಗೆ ಜನಿ ನೀಡಿದ್ದಾರೆ.
ಹೆರಿಗೆಯ ಜತೆಯಲ್ಲಿಯೇ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಸಹ ಮಾಡಿಸಿದ್ದು, ಹೀಗಾಗಿ ಪತ್ನಿ ಹಾಗೂ ಮಗುವಿನ ಆರೈಕೆ ಸಲುವಾಗಿ ಸರ್ಕಾರಿ ನಿಯಮಾವಳಿಯಂತೆ ಲಭ್ಯವಿರುವ 15 ದಿನಗಳ ಪಿತೃತ್ವ ರಜೆ ಮಂಜೂರು ಮಾಡಿಕೊಡಿ ಎಂದು ಲೋಕೇಶ ಅವರು ಮುಖ್ಯ ಶಿಕ್ಷಕ ವಿ.ನಾಗರಾಜುನಲ್ಲಿ ಮನವಿ ಮಾಡಿದ್ದಾರೆ.
ಈ ರಜೆ ನೀಡಲು ನಿರಾಕರಿಸಿದ್ದಾರೆ ಬಳಿಕ ಈ 15 ರಜಾ ದಿನಗಳ ವೇತನದ ಹಣ 23,500 ರೂ.ಗಳನ್ನು ನೀಡಿದರೆ ಮಾತ್ರ ಪಿತೃತ್ವ ರಜೆ ಮಂಜೂರು ಮಾಡುವುದಾಗಿ ಹೇಳಿ ಲಂಚಕ್ಕೆ ಒತ್ತಾಯಿಸಿ ಬಳಿಕ 23 ಸಾವಿರ ರೂ. ನೀಡಿದರೆ ರಜೆ ಮಂಜೂರು ಮಾಡಿಕೊಡುವುದಾಗಿ ಹೇಳಿದ್ದಾರೆ.
ದೂರುದಾರ ಲೋಕೇಶ್ ಅವರಿಗೆ ಲಂಚ ನೀಡಲು ಇಷ್ಟವಿಲ್ಲದೇ ಅ.9ರಂದು ನಿನ್ನೆ ಗುರುವಾರ ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಬಳಿಕ ಪೊಲೀಸ್ ನಿರೀಕ್ಷಕ ಬಿ.ಮೊಹಮ್ಮದ್ ಸಲೀಂ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡರು.

ಗುರುವಾರ ಅ.9ರಂದು ಬೆಳಗ್ಗೆ 11.30ರ ಸಮಯದಲ್ಲಿ ಫೋನ್ ಫೇ ಮೂಲಕ 23,000 ಲಂಚ ಸ್ವೀಕರಿಸಿದ್ದ ನಾಗರಾಜುನನ್ನು ಮೊಹಮ್ಮದ್ ಸಲೀಂ ಹಾಗೂ ಅವರ ನೇತೃತ್ವದ ತಂಡ ಮದ್ಯಾಹ್ನ 1.15ರ ಸಮಯದಲ್ಲಿ ಬಂಧಿಸಿದ್ದಾರೆ.
ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಎ.ವಿ. ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪಾಧೀಕ್ಷಕರಾದ ಡಾ.ಕೆ.ಎಂ.ಸಂತೋಷ ಅವರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರಾದ ಬಿ.ಮೊಹಮ್ಮದ್ ಸಲೀಂ, ಕೆ.ಸುರೇಶ, ಶಿವರುದ್ರಪ್ಪ ಮೇಟಿ ಮತ್ತು ರಾಜು.ಟಿ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು, ಫೋನ್ ಪೇನಲ್ಲಿ ಲಂಚ ಸ್ವೀಕರಿಸಿದ್ದ ಮುಖ್ಯ ಶಿಕ್ಷಕನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Related
