ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಬಿ.ಎಂ. ವಿಜಯಶಂಕರ್ (59) ಇಂದು ತಮ್ಮ ಜಯನಗರದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐಎಂಎ ಹಗರಣದ 18ನೇ ಆರೋಪಿಯಾಗಿದ್ದ ಇವರನ್ನು ಕಳೆದ ವರ್ಷ ಎಸ್‌ಐಟಿ ಅಧಿಕಾರಿಗಳು ರೈಡ್ ಮಾಡಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ ಮತ್ತೆ ಅವರನ್ನು ವಿಚಾರಣೆಗೆ ಒಳಪಡಿಸಲು ಸಿಬಿಐ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು.
ಅಲ್ಲದೆ ಕಳೆದ ಮೂರು ದಿನದ ಹಿಂದೆ ವಿಜಯಶಂಕರ್ ಅವರಿಗೆ ಸಿಬಿಐನಿಂದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಬಂದಿತ್ತು. ಇದರಿಂದ ಒತ್ತಡ ಮತ್ತು ಆತಂಕಕ್ಕೆ ಒಳಗಾಗಿ ಜಯನಗರದ ಮನೆಯ ಮೊದಲನೇ ಮಹಡಿಯ ತನ್ನ ರೂಮಿಗೆ ಹೋಗಿ ಮಂಗಳವಾರ ರಾತ್ರಿ 8ಗಂಟೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಪತ್ನಿ ಮನೆಯಲ್ಲೇ ಇದ್ದರು ಎಂದು ಹೇಳಲಾಗಿದೆ.
ಈ ಹಿಂದೆ ಸೇವೆಯಿಂದ ಅಮಾನತುಗೊಂಡಿದ್ದ ಇವರನ್ನು ಕಳೆದ 20 ದಿನದ ಹಿಂದೆ ಸಕಾಲ ಯೋಜನೆ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಇಂದು ಕೂಡ ಕರ್ತವ್ಯಕ್ಕೆ ಹಾಜರಾಗಿದ್ದ ಇವರು ಐಎಂಎ ಹಗರಣ ಆರೋಪದಲ್ಲಿ ಮತ್ತೆ ಬಂಧನಕ್ಕೊಳಗಾಗುವ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಲಂಚ ಪಡೆದ ಆರೋಪವಿತ್ತು
ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿದ್ದ ಬಿ.ಎಂ.ವಿಜಯ ಶಂಕರ್ ಅವರನ್ನು 2019 ಜುಲೈ 8ರಂದು ಐಎಂಐ ಹಗರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಬೆಂಗಳೂರಿನ 1ನೇ ಸಿಸಿಎಚ್ ಕೋರ್ಟ್ ಗೆ ಹಾಜರು ಪಡಿಸಲಾಗಿತ್ತು. ಅಂದು ನ್ಯಾಯಾಲಯ ಅವರನ್ನು ಮೂರು ದಿನಗಳು ಎಸ್‌ಐಟಿ ವಶಕ್ಕೆ ನೀಡಿತ್ತು.
ಐಎಂಎ ಕಂಪನಿಗೆ ಕ್ಲೀನ್ ಚಿಟ್ ನೀಡಲು 4.5 ಕೋಟಿ ರೂ. ಲಂಚ ಪಡೆದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಅವರು ನಂತರ ಜಾಮೀನಿನ ಮೇಲೆ ಹೊರಬಂದಿದ್ದರು.
ಇನ್ನು ಐಎಂಎ ಕಂಪನಿ ಅವ್ಯವಹಾರದ ಕುರಿತು ತನಿಖೆ ನಡೆಸಲು ಎಸಿ ನೇತೃತ್ವದಲ್ಲಿ 2018ರ ಜೂನ್‌ನಲ್ಲಿ ದೂರು ಪ್ರಾಧಿಕಾರ ರಚನೆ ಮಾಡಲಾಗಿತ್ತು. ಅವರು 2019ರ ಫೆಬ್ರವರಿಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಜಿಲ್ಲಾಧಿಕಾರಿಗಳು ಕಂಪನಿ ವಿರುದ್ಧ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಟಿಪ್ಪಣಿ ಹಾಕಿ ಏಪ್ರಿಲ್ 8ರಂದು ರಾಜ್ಯ ಸರ್ಕಾರಕ್ಕೆ ವರದಿಯನ್ನು ಕಳಿಸಿದ್ದರು.
ಈ ಟಿಪ್ಪಣಿ ಹಾಕುವ 2 ದಿನಗಳ ಹಿಂದೆ ವಿಜಯ ಶಂಕರ್ ಅವರು 1.5 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ಆರೋಪವಾಗಿದೆ. ಜಿಲ್ಲಾಧಿಕಾರಿ ವಿಜಯಶಂಕರ್ ಮತ್ತು ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಅವರು ಲಂಚ ಪಡೆದ ಪ್ರಕರಣದ ವಿಚಾರಣೆಯನ್ನು ಸಿಬಿಐಗೆ ವರ್ಗಾವಣೆ ಮಾಡಲಾಗಿತ್ತು.
Yava ottada bantho yarige gothu