NEWSನಮ್ಮರಾಜ್ಯಸಿನಿಪಥ

ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ

ವಿಜಯಪಥ - vijayapatha.in
ವಿಜಯಪಥ ಸಮಗ್ರ ಸುದ್ದಿ

ವಿಜಯಪುರ: ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ (59) ಇಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ರಾಜು ತಾಳಿಕೋಟೆ ಚಿತ್ರಿಕರಣದಲ್ಲಿ ಭಾಗಿಯಾಗಿದ್ದರು. ಭಾನುವಾರ ರಾತ್ರಿ ಚಿತ್ರೀಕರಣ ಮುಗಿಸಿ ರಾತ್ರಿ 11:59ರ ವೇಳೆಗೆ ವಿಶ್ರಾಂತಿಯಲ್ಲಿದ್ದಾಗ ಉಸಿರಾಟದ ಸಮಸ್ಯೆಯಾಗಿದೆ. ಕೂಡಲೇ ಅವರನ್ನು ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆ ತರಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಮೂಲದವರಾಗಿದ್ದ ಅವರು, ಚಲನಚಿತ್ರದಲ್ಲಿ ಪ್ರಸಿದ್ಧರಾದ ನಂತರ ತಾಳಿಕೋಟೆ ನಗರದಲ್ಲಿ ವಾಸವಾಗಿದ್ದರು. ರಾಜು ತಾಳಿಕೋಟೆಯವರು ಮೊದಲ ಹೆಸರು ರಾಜೇಸಾಬ ಮಕ್ತುಮಸಾಬ್ ತಾಳಿಕೋಟೆ. ಅವರು ಕೇವಲ ನಟರಾಗಿರದೇ ತಾಳಿಕೋಟೆಯ ಪ್ರಸಿದ್ಧ ಖಾಸ್‌ಗತೇಶ್ವರ ನಾಟಕ ಮಂಡಳಿಯ ಮಾಲೀಕರಾಗಿದ್ದರು.

ಅನಾರೋಗ್ಯ ಕಾರಣದಿಂದಾಗಿ ರಾಜು ತಾಳಿಕೋಟೆ ನಾಟಕ ಹಾಗೂ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದಿದ್ದರು. ರಾಜು ತಾಳಿಕೋಟೆಯವರ ನಿಧನಕ್ಕೆ ಕನ್ನಡ ಚಿತ್ರರಂಗ ಮತ್ತು ಉತ್ತರ ಕರ್ನಾಟಕದ ರಂಗಭೂಮಿ ಕಂಬನಿ ಮಿಡಿದಿದೆ.

ನಿರ್ದೇಶಕ ಯೋಗರಾಜ್ ಭಟ್ ಅವರ ‘ಮನಸಾರೆ’ (2009) ಚಿತ್ರದ ಮೂಲಕ ಅವರು ಜನಪ್ರಿಯತೆ ಗಳಿಸಿದರು. ನಂತರ ‘ಪಂಚರಂಗಿ’, ‘ಮತ್ತೊಂದ್ ಮದುವೇನಾ..!’ ಮತ್ತು ‘ಮೈನಾ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಹಾಸ್ಯ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಬಿಗ್‌ ಬಾಸ್‌ ಸೀಸನ್‌ 7ರಲ್ಲಿ ಸ್ಪರ್ಧಿಯಾಗಿ ಕೂಡ ಭಾಗವಹಿಸಿದ್ದರು.

ಕುಡುಕನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸುತ್ತಿದ್ದ ಇವರ ʼಕಲಿಯುಗದ ಕುಡುಕ’, ‘ಕುಡುಕರ ಸಾಮ್ರಾಜ್ಯ’, ಮತ್ತು ‘ಅಸಲಿ ಕುಡುಕ’ ಬಹಳ ಫೇಮಸ್‌ ಆಗಿದ್ದವು. ಈ ನಾಟಕಗಳ ಆಡಿಯೋ ಕ್ಯಾಸೆಟ್‌ಗಳು ಕೂಡ ಆ ಕಾಲದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿದ್ದಾವೆ.

Advertisement

ಉಳಿಸಲು ಇಡೀ ಚಿತ್ರತಂಡ ಪ್ರಯತ್ನ ಮಾಡಿತ್ತು: ನನ್ನ ತಂದೆ ರಾಜು ತಾಳಿಕೋಟೆ ಅವರನ್ನು ಉಳಿಸಲು ಇಡೀ ಚಿತ್ರತಂಡ ಪ್ರಯತ್ನ ಮಾಡಿತ್ತು. ಆದರೆ ಇಂದು ಸಂಜೆ 6 ಗಂಟೆ ಸುಮಾರಿಗೆ ನಮ್ಮನ್ನು ಅಗಲಿದ್ದಾರೆ ಎಂದು ರಾಜು ತಾಳಿಕೋಟೆ ಪುತ್ರ ಭರತ್ ಹೇಳಿದ್ದಾರೆ.

ಉಡುಪಿಯ ಆಸ್ಪತ್ರೆಯಲ್ಲಿ ಮಾತನಾಡಿದ ಅವರು, ಮೂರು ದಿನದ ಹಿಂದೆ ಶೈನ್ ಶೆಟ್ಟಿ ನಾಯಕತ್ವದ ಚಿತ್ರದ ಶೂಟಿಂಗ್‌ಗೆ ಹೆಬ್ರಿಗೆ ಬಂದಿದ್ದರು. ಈ ಹಿಂದೆ ಒಮ್ಮೆ ಹೃದಯಾಘಾತವಾದಾಗ ಬೆಂಗಳೂರು ಜಯದೇವದಲ್ಲಿ ಚಿಕಿತ್ಸೆ ಕೊಡಿಸಿದ್ದೆವು. ನಿನ್ನೆ ರಾತ್ರಿ ಎರಡನೇ ಬಾರಿಗೆ ತೀವ್ರ ಹೃದಯಘಾತವಾಗಿತ್ತು.

ಉತ್ತರ ಕರ್ನಾಟಕದಲ್ಲಿ 35 ವರ್ಷದಿಂದ ನಾಟಕ ಮಾಡುತ್ತಿದ್ದರು. ಈ ಕಲಾ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಧಾರವಾಡ ರಂಗಾಯಣದ ನಿರ್ದೇಶಕರನ್ನಾಗಿ ಮಾಡಿತ್ತು.

ಇಂದು ಮೃತದೇಹವನ್ನು ಧಾರವಾಡ ರಂಗಾಯಣಕ್ಕೆ ತಗೆದುಕೊಂಡು ಹೋಗುತ್ತೇವೆ. ಅಲ್ಲಿ ಮೃತದೇಹಕ್ಕೆ ಅಭಿಮಾನಿಗಳು ಗೌರವ ಸಲ್ಲಿಸುತ್ತಾರೆ. ನಂತರ ಅವರು ಇಷ್ಟಪಡುವ ಸ್ಥಳವಾದ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕು ಚಿಕ್ಕಸಿಂಧಗಿಯಲ್ಲಿರುವ ತೋಟದ ಮನೆಯಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೇಳಿದರು.

ತಂದೆಯವರು ಹೆಚ್ಚಾಗಿ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದರು. ಅಲ್ಲೇ ಅವರ ಅಂತ್ಯ ಸಂಸ್ಕಾರ ಮಾಡುತ್ತೇವೆ ಅವರ ಪ್ರೀತಿಸುವವರು ಅಭಿಮಾನಿಗಳು ಸಂಬಂಧಿಕರು ಚಿಕ್ಕ ಸಿಂಧಗಿಗೆ ಬನ್ನಿ ಎಂದು ಮನವಿ ಮಾಡಿದರು.

ನಮ್ಮ ತಂದೆಯವರಿಗೆ ಎರಡು ಮದುವೆಯಾಗಿತ್ತು. ಇಬ್ಬರು ಗಂಡು ಮೂರು ಹೆಣ್ಣು ಮಕ್ಕಳಿದ್ದರು. 5 ಮಕ್ಕಳು ಬಹಳ ಅನ್ಯೋನ್ಯವಾಗಿದ್ದೇವೆ. ಕಲಿಯುಗದ ಕುಡುಕ ಅವರಿಗೆ ಬಹಳ ಹೆಸರು ತಂದ ನಾಟಕವಾಗಿತ್ತು. ಇಡೀ ಕುಟುಂಬ ನಾಟಕದಲ್ಲಿ ನಟಿಸುತ್ತಿದ್ದೆವು. ಸುಮಾರು 70 ಕನ್ನಡ ಚಿತ್ರದಲ್ಲಿ ನಟಿಸಿದ್ದು ಸುಮಾರು 10 ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಾಗಿದೆ ಎಂದರು.

Megha
the authorMegha

Leave a Reply

error: Content is protected !!