ಕಾಯಿಲೆ ಬಂದು ರಕ್ತ ಕೇಳುವಾಗ ಜಾತಿ ಇಲ್ಲ ಗುಣಮುಖರಾದ ಮೇಲೆ ಯಾವ ಜಾತಿ ಎಂದು ಕೇಳುವುದು ನ್ಯಾಯವೇ: ಸಿಎಂ ಸಿದ್ದರಾಮಯ್ಯ



ಕಾಯಿಲೆ ಬಂದರೆ ಶರೀರಕ್ಕೆ ಯಾರ ರಕ್ತವಾದರೂ ಕೊಡಿ, ಪ್ರಾಣ ಉಳಿದರೆ ಸಾಕು ಎನ್ನುತ್ತೇವೆ. ಇಂಥವರದ್ದೇ ರಕ್ತ ಕೊಡಿ ಎಂದು ಕೇಳುವುದಿಲ್ಲ. ಗುಣಮುಖರಾದ ನಂತರ ಯಾವ ಜಾತಿ ಎಂದು ಕೇಳುವುದು ನ್ಯಾಯವೇ?
ರಬಕವಿ ಬನಹಟ್ಟಿ: ನಮ್ಮ ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು, ಎಲ್ಲರ ನೆಮ್ಮದಿಯ ಉದ್ಯಾನವಾಗಬೇಕು. ಜನರಲ್ಲಿ ಪರಸ್ಪರ ಪ್ರೀತಿಯಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಇಂದು ದಾಸೋಹ ರತ್ನ ಚಕ್ರವರ್ತಿ ದಾನೇಶ್ವರರರು ಶ್ರೀ ಬಸವ ಗೋಪಾಲ ನೀಲಮಾಣಿಕ ಮಠ ಇವರ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಸುಕ್ಷೇತ್ರ ಬಂಡಿಗಾಣಿ ಮಠದಲ್ಲಿ ಆಯೋಜಿಸಲಾಗಿದ್ದ “ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ 2025” ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ವ ಧರ್ಮ ಮಹಾಸಂಗಮ ನಡೆಯುತ್ತಿರುವುದು ಇಂದಿನ ಪರಿಸ್ಥಿತಿಯಲ್ಲಿ ಸಮಂಜಸವಾಗಿದೆ. ದೇಶದಲ್ಲಿ ಹಾಗೂ ಜಗತ್ತಿನಲ್ಲಿ ಅನೇಕ ಧರ್ಮ, ಜಾತಿಗಳಿವೆ. ಜಾತಿ ಧರ್ಮಗಳನ್ನು ನಾವು ಮಾಡಿಲ್ಲ, ಮೊದಲಿನಿಂದ ನಮ್ಮಲ್ಲಿ ಬೆಳೆದುಕೊಂಡು ಬಂದಿದೆ. ನಾವು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಬೇರೆ ಜಾತಿಯವರನ್ನು ಪ್ರೀತಿಸಬೇಕೇ ಹೊರತು ದ್ವೇಷಿಸಬಾರದು. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ನಾವು ಮನುಷ್ಯರು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಕಾಯಿಲೆ ಬಂದರೆ ಶರೀರಕ್ಕೆ ಯಾರ ರಕ್ತವಾದರೂ ಕೊಡಿ, ಪ್ರಾಣ ಉಳಿದರೆ ಸಾಕು ಎನ್ನುತ್ತೇವೆ. ಇಂಥವರದ್ದೇ ರಕ್ತ ಕೊಡಿ ಎಂದು ಕೇಳುವುದಿಲ್ಲ. ಗುಣಮುಖರಾದ ನಂತರ ಯಾವ ಜಾತಿ ಎಂದು ಕೇಳುವುದು ನ್ಯಾಯವೇ? ಬಸವಣ್ಣನವರು ದಯೆ ಇಲ್ಲದ ಧರ್ಮ ಯಾವುದಯ್ಯ? ದಯೆಯೇ ಧರ್ಮದ ಮೂಲ ಎಂದು ಹೇಳಿದ್ದು, ಇದನ್ನು ತಿಳಿದುಕೊಳ್ಳಬೇಕು ಎಂದರು.
ಇತ್ತೀಚೆಗೆ ಸನಾತನ ಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿದ್ದಾರೆ. ಯಾವ ಧರ್ಮವೂ ದ್ವೇಷಿಸಬೇಕು ಎಂದು ಹೇಳುವುದಿಲ್ಲ. ಕಾನೂನು ಓದಿರುವ ವಕೀಲನೊಬ್ಬ ಈ ರೀತಿ ಮಾಡುವುದನ್ನು ನಾವು ಖಂಡಿಸಬೇಕು. ಸಹಿಸಿಕೊಳ್ಳಬಾರದು. ಇಂಥವೆಲ್ಲ ನಡೆದರೆ ಸಮಾಜದಲ್ಲಿ ಶಾಂತಿ ಹೇಗೆ ನೆಲೆಸಲು ಸಾಧ್ಯ ಎಂದು ಪ್ರಶ್ನಿಸಿದರು.

Related
