KSRTC: ನಾಳೆಯಿಂದ ನೌಕರರ ವೇತನ ಹೆಚ್ಚಳ ಸಂಬಂಧ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಜಂಟಿ ಕ್ರಿಯಾ ಸಮಿತಿ


- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಂಡಿ ಕೋರಿಕೆ ಮೇರೆಗೆ ಉಪವಾಸ ಸತ್ಯಾಗ್ರಹ ಮುಂದೂಡಿಕೆ
ಬೆಂಗಳೂರು: ಜಂಟಿ ಕ್ರಿಯಾ ಸಮಿತಿಯ ಇದೇ ಅ.15 ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ನಗರಗಳಲ್ಲಿ ನಡೆಸಲು ಉದ್ದೇಶಿಸಿದ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರು, ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವಂತೆ ಕೋರಿದ್ದರಿಂದ ಇಂದು ಸಂಜೆ 4.30ಗಂಟೆಗೆ ನಡೆದ ಸಾರಿಗೆ ನಿಗಮಗಳ ನೌಕರರ ಸಂಘಗಳ ಜಂಟಿ ಕ್ರಿಯಾ ಸಮಿತಿಯ ತುರ್ತು ಸಭೆಯಲ್ಲಿ ಕೂಲಂಕಶವಾಗಿ ಚರ್ಚಿಸಿ, ಎಂಡಿ ಅವರ ಕೋರಿಕೆಯನ್ನು ಗೌರವಿಸಿ ಉದ್ದೇಶಿತ ಉಪವಾಸ ಸತ್ಯಾಗ್ರಹವನ್ನು ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಜಂಟಿ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಪತ್ರದಲ್ಲಿ ತಿಳಿಸಿರುವಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ವಿಳಂಬವಿಲ್ಲದೆ ಆಯೋಜಿಸಿ ಸಾರಿಗೆ ನೌಕರರ ನ್ಯಾಯಯುತವಾದ ಬೇಡಿಕೆಗಳನ್ನು ಇತ್ಯರ್ಥಪಡಿಸಲು ಕ್ರಮವಹಿಸಬೇಕೆಂದು ವಿನಂತಿಸುತ್ತೇವೆ. ಈಗಾಗಲೇ ಹೇಳಲು ಆಸಾಧ್ಯವಾದ ವಿಳಂಬವಾಗಿರುವುದರಿಂದ ಸಮಸ್ತ ಸಾರಿಗೆ
ನಿಗಮಗಳ ನೌಕರರು ಬಹಳ ನೊಂದಿರುವುದನ್ನು ತಾವು ಗಮನಿಸಿದ್ದೇರೆಂದು ನಾವು ಭಾವಿಸಿದ್ದೇವೆ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಎಂಡಿ ಅವರಿಗೆ ಪತ್ರ ಬರೆದು ಉಪವಾಸ ಸತ್ಯಾಗ್ರಹ ಮುಂದೂಡಿರುವ ಬಗ್ಗೆ ತಿಳಿಸಿದ್ದಾರೆ.
ಎಂಡಿ ಅವರ ಪತ್ರದಲ್ಲೇನಿದೆ?:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅವರು ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನಿಗಮಗಳ ನೌಕರರ ಮುಂದುವರಿದ ಹೋರಾಟ ಅ.15ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ನಗರಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು ಅದನ್ನು ಕೈ ಬಿಡಬೇಕು.
ಈ ವಿಷಯಕ್ಕೆ ಸಂಬಂಧಿಸಿದಂತೆ ಈ ಮೂಲಕ ಜಂಟಿ ಕ್ರಿಯಾ ಸಮಿತಿ ಅವರಿಗೆ ತಿಳಿಸುವುದೇನಂದರೆ ಉಪವಾಸ ಸತ್ಯಾಗ್ರಹ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮನಕ್ಕೆ ತರಲಾಗಿದ್ದು, ಅವರು ಈ ಕುರಿತು ಮುಂದಿನ 15 ದಿನಗಳಲ್ಲಿ ಜಂಟಿ ಕ್ರಿಯಾ ಸಮಿತಿ ಅವರ ಬೇಡಿಕೆಗಳ ಕುರಿತು ಚರ್ಚಿಸಲು ದಿನಾಂಕವನ್ನು ನಿಗದಿಪಡಿಸುವುದಾಗಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ತಾವು ಅ.15 ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿ ನಗರಗಳಲ್ಲಿ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹವನ್ನು ಕೈಬಿಡಲು ಈ ಮೂಲಕ ಕೋರಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಲಿಖಿತವಾಗಿ ಇಂದು ಮಧ್ಯಾಹ್ನ ಕೋರಿದ್ದರು.

Related
