KSRTC: ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಅಕ್ಟೋಬರ್ ವೇತನದಲ್ಲೇ ಶೇ.2ರಷ್ಟು ಹೆಚ್ಚಳದ ತುಟ್ಟಿಭತ್ಯೆ ಸೇರಿಸಿ ಎಂಡಿ ಆದೇಶ


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು, ನೌಕರರಿಗೆ ಅಕ್ಟೋಬರ್-2025 ರ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.12.25 ರಿಂದ ಶೇ.14.25 ಕ್ಕೆ ಹೆಚ್ಚಿಸಿ ಅನುಷ್ಠಾನಗೊಳಿಸಲು KSRTC ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್‌ಪಾಷ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಅವರು, ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಆಇ 18 ಎಸ್‌ಆರ್‌ಪಿ 2025, ಬೆಂಗಳೂರು 15.10.2025ರಲ್ಲಿ ಸರ್ಕಾರಿ ನೌಕರರಿಗೆ 01.07.2025 ರಿಂದ ಅನ್ವಯವಾಗುವಂತೆ ತುಟ್ಟಿಭತ್ಯೆ ದರವನ್ನು ಶೇ.12.25 ರಿಂದ ಶೇ.14.25 ಕ್ಕೆ ಹೆಚ್ಚಿಸಿ ಆದೇಶಿಸಿದೆ.
ಹೀಗಾಗಿ ರಾಜ್ಯ ಸಾರಿಗೆ ನಿಗಮಗಳಲ್ಲೂ ಕೂಡ ಈ ಪರಿಷ್ಕೃತ ತುಟ್ಟಿಭತ್ಯೆ ದರವನ್ನು ಅನುಷ್ಠಾನಗೊಳಿಸಿ ಪಾವತಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಾಲ್ಕೂ ಸಾರಿಗೆ ನಿಗಮಗಳಲ್ಲೂ ಅಕ್ಟೋಬರ್-2025ರ ಮಾಹೆಯ ವೇತನದಲ್ಲಿ ಮತ್ತು ಮುಂದಕ್ಕೆ ತುಟ್ಟಿಭತ್ಯೆ ದರವನ್ನು ಶೇ.12.25 ರಿಂದ ಶೇ.14.25 ಕ್ಕೆ ಹೆಚ್ಚಿಸಿ ಅನುಷ್ಠಾನಗೊಳಿಸಬೇಕು ಎಂದು ಆದೇಶ ಮಾಡಿದ್ದಾರೆ.
ಅಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಜುಲೈ-2025 ರಿಂದ ಸೆಪ್ಟೆಂಬರ್ 2025 ರವರೆಗಿನ ತುಟ್ಟಿಭತ್ಯೆ ಹಿಂಬಾಕಿ ಪಾವತಿಯ ಕುರಿತು ಪ್ರತ್ಯೇಕವಾಗಿ ಆದೇಶಿಸಲಾಗುವುದು ಎಂದು ತಿಳಿಸಿದ್ದಾರೆ.
ಜತೆಗೆ ಸಹೋದರ ಸಂಸ್ಥೆಗಳಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಹಿಂಬಾಕಿ ಪಾವತಿಯ ಕುರಿತು ಆಯಾ ಸಂಸ್ಥೆಗಳು ಆರ್ಥಿಕ ಪರಿಸ್ಥಿತಿಗನುಗುಣವಾಗಿ ನಿರ್ಧರಿಸಬೇಕು ಎಂದು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Related
