BMTC & KSRTC: ಕನಿಷ್ಠ 7500 ರೂ. ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ EPS ಪಿಂಚಣಿದಾರರ ಬೃಹತ್ ಪ್ರತಿಭಟನೆ- ಕೇಂದ್ರದ ವಿರುದ್ಧ ಆಕ್ರೋಶ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯ ಇಪಿಎಸ್ ನಿವೃತ್ತರಿಗೆ, ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ. ಕೂಡಲೇ ನೀಡಬೇಕೆಂದು ಆಗ್ರಹಿಸಿ ಇಪಿಎಸ್ ಪಿಂಚಣಿದಾರರ 32ನೇ ಬೃಹತ್ ಪ್ರತಿಭಟನೆ ನಡೆಸಿದರು.ʼ
“ನಿಧಿ ಅಪ್ಕೆನಿಕಟ್” ಕಾರ್ಯಕ್ರಮವಾದ ಸೋಮವಾರ ನಗರದ ರಿಚ್ಮಂಡ್ ವೃತ್ತದಲ್ಲಿರುವ, ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ವತಿಯಿಂದ ಇಪಿಎಸ್ ಪಿಂಚಣಿದಾರರ 32ನೇ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಧಿಕ್ಕಾರದ ಘೋಷಣೆ ಕೂಗಿ ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
KSRTC ವ್ಯವಸ್ಥಾಪಕ ನಿರ್ದೇಶಕರು ಇದೇ ಅ.10ರಂದು ಇಪಿಎಸ್ ನಿವೃತ್ತರ ಪರ ಉಲ್ಲೇಖಿಸಿರುವ ಪತ್ರಕ್ಕೆ ಸಂಬಂಧಿಸಿದಂತೆ, ಕೂಡಲೇ ಕ್ರಮ ವಹಿಸಿ ಎಲ್ಲ ಜಂಟಿ ಆಯ್ಕೆ ಪತ್ರಗಳನ್ನು ಪುನರ್ ಸ್ಥಾಪಿಸಿ, ಎಲ್ಲ ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡಬೇಕು. ಮದುರೈ ಉಚ್ಚ ನ್ಯಾಯಾಲಯವು 2025ರ ಸೆ.2ರಂದು ಇಪಿಎಸ್ ನಿವೃತ್ತರ ಪರ ನೀಡಿರುವ ಆದೇಶ ನಮಗೂ ಅನ್ವಯವಾಗಲಿದ್ದು, ಈ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಿ, ಅಧಿಕ ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥ ಕಮಾಂಡರ್ ಅಶೋಕ ರಾವುತ್ ಹಾಗೂ ತಂಡದವರಿಗೆ ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರ ನಿರ್ದೇಶನದ ಮೇರೆಗೆ ಇಪಿಎಫ್ಒ ಅಧಿಕಾರಿಗಳು ಅ.17ರಂದು ನೀಡಿರುವ ಮುಚ್ಚಳಿಕೆ ಪತ್ರದ ಅನ್ವಯ ನ್ಯಾಯ ಸಮ್ಮತ ಅಧಿಕ ಹೆಚ್ಚುವರಿ ಪಿಂಚಣಿ + ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಜೇಮ್ ಷೇಡ್ಪುರದಲ್ಲಿರುವ M/s ಟಾಟಾ ಸ್ಟೀಲ್ ಪ್ರವೇಟ್ ಲಿಮಿಟೆಡ್ ಕಂಪನಿಯ ಇಪಿಎಸ್ ನಿವೃತ್ತರಿಗೆ ಅದರ ಟ್ರಸ್ಟ್ ರೂಲ್ಸ್ ಅನ್ವಯ ಅಧಿಕ ಪಿಂಚಣಿ ನೀಡಲು ಜಂಮ್ ಷೇಡ್ ಪುರ ಇಪಿಎಫ್ಒ ಅಧಿಕಾರಿಗಳು ಸುತ್ತೋಲೆ ಸೆ.11 ರಂದು ಹೊರಡಿಸಿದ್ದು, ಈ ನಿಯಮವನ್ನು ನಮ್ಮ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೂ ಸಹಾ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್, ಎಲ್ಲ ಹೋರಾಟಗಾರರನ್ನು ಸ್ವಾಗತಿಸುವ ಮೂಲಕ ಪ್ರತಿಭಟನಾ ಸಭೆಗೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷರಾದ ನಂಜುಂಡೇಗೌಡ, ಕಾರ್ಯಾಧ್ಯಕ್ಷರಾದ ಶಂಕರ ಕುಮಾರ್, ಕೆಎಸ್ಆರ್ ಟಿಸಿ ಚಿಕ್ಕಬಳ್ಳಾಪುರ ಟ್ರಸ್ಟ್ ನ ಅಧ್ಯಕ್ಷರಾದ ಬ್ರಹ್ಮಚಾರಿ, ಸಾಮಾಜಿಕ ಕಾರ್ಯಕರ್ತರಾದ ಚಂದ್ರೇಗೌಡ ಹಾಗೂ ಶಿರಸಿ ಕೆಎಸ್ಆರ್ ಟಿಸಿ ನಿವೃತ್ತ ನೌಕರರಾದ ನಾರಾಯಣರಾವ್ ಮಾತನಾಡಿದರು.
ಮನವಿ ಪತ್ರವನ್ನು ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆಯ(minister for labour & employment) ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆಯವರಿಗೆ ಉಲ್ಲೇಖಿಸಿದ್ದು, ಕೂಡಲೇ ಕೇಂದ್ರ ಸಚಿವರುಗಳಿಗೆ ಕಳುಹಿಸಿ ಕೊಡಬೇಕೆಂದು, ಅಧಿಕಾರಿಗಳಿಗೆ ನೀಡಲಾಯಿತು.
ಇಪಿಎಫ್ಒ ಅಧಿಕಾರಿಗಳು ನಮ್ಮ ಮನವಿ ಪತ್ರ ಸ್ವೀಕರಿಸಿ ಮಾತನಾಡುತ್ತಾ, ಇಂದಿನ ಪ್ರತಿಭಟನಾ ಸಭೆಯ ಸಂಪೂರ್ಣ ವಿವರಗಳನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ದೆಹಲಿಯಲ್ಲಿನ ತಮ್ಮ ಮೇಲಧಿಕಾರಿಗಳಿಗೂ ಕಳಿಸಿ ಕೊಡುವುದಾಗಿ ತಿಳಿಸಿ, ಸ್ವೀಕೃತಿ ನೀಡಿದರು. ಸಂಘದ ಪದಾಧಿಕಾರಿಗಳಾದ ರಂಗನಾಥ್, ಮನೋಹರ್ ಹಾಗೂ ಕೃಷ್ಣಮೂರ್ತಿ ಸೇರಿದಂತೆ ನೂರಾರು ನಿವೃತ್ತರು ಇದ್ದರು.
Related








