ಹೈದರಾಬಾದ್: ಬೈಕ್ ಓವರ್ಟೇಕ್ ಮಾಡುವಾಗ ಭರದಲ್ಲಿ ಜಿಲ್ಲಿ ತುಂಬಿದ ಲಾರಿಯೊಂದು ಅತೀವಬೇಗವಾಗಿ ಬಂದು ಸರ್ಕಾರಿ ಬಸ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ 3 ತಿಂಗಳ ಮಗು, ಇಬ್ಬರೂ ಚಾಲಕರು ಸೇರಿದಂತೆ 20 ಮಂದಿ ಮೃತಪಟ್ಟಿರುವ ಘಟನೆ ಮಿರಿಜಾಗುಡಾ ಪ್ರದೇಶದ ಹತ್ತಿರ ನಡೆದಿದೆ.
ಇನ್ನು ಈ ಅಪಘಾಯದಲ್ಲಿ ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲ ನಗರದ ಮಿರಿಜಾಗುಡಾ ಪ್ರದೇಶದ ಸಮೀಪದಲ್ಲಿ ಸಂಭವಿಸಿದೆ.
ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‌ಆರ್‌ಟಿಸಿ) ಬಸ್ ಹೈದರಾಬಾದ್ಗೆ ತೆರಳುತ್ತಿತ್ತು. ಮಿರಿಜಾಗುಡಾ ಪ್ರದೇಶದ ಸಮೀಪದ ಇದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಜೆಲ್ಲಿ ತುಂಬಿದ ಲಾರಿ ಅತಿ ವೇಗದಲ್ಲೇ ಬೈಕ್ ಅನ್ನು ಓವರ್ಟೇಕ್ ಮಾಡುತ್ತಿತ್ತು. ಈ ವೇಳೆ ಲಾರಿ ಚಾಲಕ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಸ್ ಅನ್ನು ಗಮನಿಸದೆ ತಿರುಗಿಸಿದ್ದರಿಂದ ವೇಗದಲ್ಲಿದ್ದ ಲಾರಿ, ಬಸ್‌ಗೆ ಭಯಂಕರವಾಗಿ ಡಿಕ್ಕಿ ಹೊಡೆದಿದೆ.
ಪರಿಣಾಮ ಬಸ್ನಲ್ಲಿದ್ದ 70 ಪ್ರಯಾಣಿಕರಲ್ಲಿ 20 ಮಂದಿ ಅಸುನೀಗಿದ್ದಾರೆ. ಇದರಲ್ಲಿ ಮೂರು ತಿಂಗಳ ಹಸುಗೂಸು ಕೂಡ ಸೇರಿದೆ. ಮೃತರಲ್ಲಿ ಲಾರಿ ಚಾಲಕ ಹಾಗೂ ಬಸ್ ಚಾಲಕ ಸೇರಿ 10 ಮಂದಿ ಪುರುಷರು, 9 ಮಹಿಳೆಯರು, ಒಂದು ಮಗು ಕೊನೆಯುಸಿರೆಳೆದಿದೆ.
70 ಪ್ರಯಾಣಿಕರಿದ್ದ ಬಸ್ ತಾಂಡೂರುನಿಂದ ಹೈದರಾಬಾದ್ಗೆ ತೆರಳುತ್ತಿತ್ತು. ಕಚೇರಿ ಸೇರಿದಂತೆ ಇತರ ಡ್ಯೂಟಿಗೆ ಹೋಗುತ್ತಿದ್ದವರು ಹಾಗೂ ವಿದ್ಯಾರ್ಥಿಗಳು ಇದ್ದರು. ನಿನ್ನೆ ಭಾನುವಾರ ಆಗಿದ್ದರಿಂದ ಮನೆಗೆ ಬಂದ ವಿದ್ಯಾರ್ಥಿಗಳು ಇಂದು ಶಾಲೆ, ಕಾಲೇಜುಗಳಿಗೆ ಹೊರಟಿದ್ದರು.
ಹೈದರಾಬಾದ್ಗೆ ಕೆಲಸಕ್ಕೆ ಹೋಗುತ್ತಿದ್ದ ಹಲವು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹತ್ತಾರೂ ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಲಾಗುತ್ತಿದೆ.

ಇನ್ನು ಚೇವೆಲ್ಲಾ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು. ಕುಟುಂಬಗಳಿಗೆ ಶವಗಳ ಹಸ್ತಾಂತರ ಮಾಡಲಾಗಿದೆ. ಈ ನಡುವೆ 5 ಮಂದಿ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ತೆಲಂಗಾಣ ಬಸ್ ಅಪಘಾತಕ್ಕೆ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿಯ ಅತಿವೇಗವೇ ದುರಂತಕ್ಕೆ ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
2 ಲಕ್ಷ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ: ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಇದರೊಂದಿಗೆ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ದುರಂತದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಭಾರಿ ನೊಂದುಕೊಂಡಿದ್ದು, ಮೃತ ಪ್ರಯಾಣಿಕರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ, ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
Related









