KSRTC: 4ಸಾರಿಗೆ ನಿಗಮಗಳ ನೌಕರರ ಸಮವಸ್ತ್ರಕ್ಕೆ ಬೇಕಾದಷ್ಟು ಹಣವನ್ನೂ ಕೊಡಲಾಗದಷ್ಟು ದಿವಾಳಿಯಾಯಿತೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ?

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರ ಕಲ್ಯಾಣಕ್ಕಾಗಿ ಜಾರಿಗೊಳಿಸುತ್ತಿರುವ ಯೋಜನೆಗಳು ನೌಕರರಿಗೆ ಸಿಗುವುದಕ್ಕಿಂತ ಕೆಲ ಅಧಿಕಾರಿಗಳ ಭ್ರಷ್ಟ ಮನಸ್ಸುಗಳಿಂದ ದುರುಪಯೋಗವಾಗುತ್ತಿರುವುದೇ ಹೆಚ್ಚಾಗಿದೆ.
ಎಲ್ಲವೂ ಗುತ್ತಿದ್ದರೆ ಸರ್ಕಾರ ಹಾಗೂ ಸಾರಿಗೆ ಸಚಿವರು ಯಾವುದೇ ದೂರುಗಳು ಬಂದಿಲ್ಲ ಅಂತಲೋ ಇಲ್ಲ ಅದೇನೂ ನೋಡೋಣ ಎಂಬ ಉದಾಸೀನತೆಯಿಂದಲೋ ಗೊತ್ತಿಲ್ಲ. ಬಹುತೇಕ ಭ್ರಷ್ಟ ಅಧಿಕಾರಿಗಳಿಗೆ ಶಿಕ್ಷೆ ನೀಡುವುದಕ್ಕಿಂತ ರಕ್ಷಿಸುವುದೇ ಹೆಚ್ಚಾಗುತ್ತಿದೆ. ಈ ಬಗ್ಗೆ ನೌಕರರು ಕೇಳಿದರೆ ಕಳ್ಳರ ಸಂತೆಯಲ್ಲಿ ಒಳ್ಳೆಯವರಿಗೇನು ಕೆಲಸ ಎಂಬಂತೆ ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳನ್ನೇ ಸತ್ಯ ಎಂದು ಬಿಂಬಿಸುತ್ತಾರೆ
ಈ ಎಲ್ಲದರ ನಡುವೆಯೂ ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಾಡಲೇ ಬೇಕಾದ ಕೆಲಸವನ್ನು ಮಾಡದೆ, ಭಾರಿ ಜಾಣ್ಮೆಯಿಂದ ಅಧಿಕಾರಿಗಳು ಹಾಗೂ ಸರ್ಕಾರವೂ ನಡೆದುಕೊಳ್ಳುತ್ತಿದೆ. ಅಂದರೆ ಪ್ರತಿವರ್ಷ ನೌಕರರಿಗೆ ವಿತರಣೆ ಮಾಡುವ ಸಮವಸ್ತ್ರ, ಶೂ, ಜರ್ಕಿನ್, ಚಾಲನಾ ಮಹಾಗೂ ನಿರ್ವಾಹಕರ ಪರವಾನಗಿ ನವಿಕರಣ ವಿಷಯದಲ್ಲಿ ಮೌನ ವಹಿಸಿದ್ದಾರೆ.
ನಾಚಿಕೆ ಆಗದ ಈ ಸರ್ಕಾರ ಮತ್ತು ನಾಲ್ಕೂ ನಿಗಮಗಳ ಆಡಳಿತ ಮಂಡಳಿಗಳು, ದಿನ ಬಳಕೆಯ ಎಲ್ಲ ವಸ್ತುಗಳ ದರವೂ ದುಬಾರಿಯಾಗುತ್ತಿದೆ ಎಂಬುವುದು ಗೊತ್ತಿದ್ದರೂ ಅಡುಗೋಲಜ್ಜಿಯ ಕಾಲದಲ್ಲೇ ಇವೆ. ಎಲ್ಲ ಬದಲಾದರೂ ಈ 4 ಸಾರಿಗೆ ಆಡಳಿತದ ಮಂಡಳಿಗಳ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ.
ಸರ್ಕಾರದ ಎಲ್ಲ ಇಲಾಖೆಗಳ ಸಿಬ್ಬಂದಿಗೆ ಪೂರೈಸುತ್ತಿರುವ ಸಾಮಗ್ರಿಗಳಿಗೆ ಮಾರುಕಟ್ಟೆ ದರವನ್ನು ನೀಡುತ್ತಿದ್ದರೆ ಸಾರಿಗೆ ಸಂಸ್ಥೆಗಳಿಗೆ ಮಾತ್ರ ಓಬಿರಾಯನ ಕಾಲದ ದರದಲ್ಲೇ ನೀಡುವ ಪದ್ಧತಿ ಈಗಲೂ ಮುಂದುವರಿದುಕೊಂಡು ಬರುತ್ತಿರುವುದು ತುಂಬ ನಾಚಿಕೆ ವಿಷಯವಾಗಿದೆ.
ನೌಕರರ ಸಮವಸ್ತ್ರದ ವಿಷಯದಲ್ಲಿ ಫಿಕ್ಸ್ ಮಾಡಿರುವ ಹಣದಲ್ಲಿ ಏನೇನು ಬರುವುದಿಲ್ಲ. ಇವರು ಕೊಡೋ ಹಣಕ್ಕೆ ನೌಕರರು ದುಪ್ಪಟ್ಟು ಹಣ ಸೇರಿಸಿ ಯೂನಿಫಾರ್ಮ್ ಹೊಲಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣತನ ಪ್ರದರ್ಶಿಸುತ್ತಿದ್ದಾರೆ. ಇನ್ನು ಈ ವ್ಯವಸ್ಥೆ ಬದಲಿಸ ಬೇಕಾದ ಅಧಿಕಾರಿಗಳೆ ತಮ್ಮ ಮಾನವನ್ನು ಬಹಿರಂಗವಾಗಿಯೇ ಹರಾಜಿಗಿಡುತ್ತಿದ್ದಾರೆ.

ಹೌದು! ತಮ್ಮ ಸಿಬ್ಬಂದಿಗಳಿಗೆ ಸಮಸ್ತ್ರ ಹೊಲಿಸಿಕೊಳ್ಳಲು ನೀಡುವ ಹಣದ ಲೆಕ್ಕ ಗಮನಿಸಿದರೆ ಅಚ್ಚರಿ ಜತೆಗೆ ನಾಚಿಕೆಯೂ ಆಗುತ್ತದೆ. ಈ ಬಗ್ಗೆ ಸಿಟ್ಟು-ಆಕ್ರೋಶ ವ್ಯಕ್ತವಾಗುತ್ತದೆ. ಹಳೇ ಕಾಲದಲ್ಲಿ ಫಿಕ್ಸ್ ಆಗಿರುವ ದರವನ್ನೇ ಈಗಲೂ ನಾಮ್ ಕೇ ವಾಸ್ತೆ ಎಂಬಂತೆ ಆದೇಶ ಮಾಡುತ್ತಿದ್ದಾರೆ.
ನೋಡಿ ಅ.30 ರಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಜಾಗೃತ ವಿಭಾಗದ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ 2020-26 ನೇ ಸಾಲಿಗೆ ನಿಗಮದ ಸಿಬ್ಬಂದಿಗೆ ಸಮವಸ್ತ್ರದ ಬದಲಾಗಿ “ನಗದು” ಹಾಗೂ ಹೊಲಿಗೆ ವೆಚ್ಚ ಪಾವತಿಯ ಬಗ್ಗೆ ವಿವರ ನೀಡಿದ್ದಾರೆ.
ಅದರಲ್ಲಿ ಪುರುಷ ಮತ್ತು ಮಹಿಳಾ ನೌಕರರಿಗೆ ಅವರ ಸಮವಸ್ತ್ರ ಹೊಲಿಸಲು ನಿಗದಿಮಾಡಿರುವ ಮೊತ್ತ ಖಾಕಿ ಸೂಟ್ಸ್ ಅಂದರೆ 2 ಪ್ಯಾಂಟ್ ಮತ್ತು 2 ಶರ್ಟ್ ಗಳಿಗೆ 5.6 ಮೀಟರ್ ನಂತೆ ಬಟ್ಟೆಗೆ 742 ರೂ. ಮತ್ತು ಹೊಲಿಗೆ ವೆಚ್ಚ 350 ರೂ. ನೀಡಬೇಕು.
ಹಾಗೆಯೇ ನೀಲಿ ಸೂಟಿಂಗ್ಸ್ 2 ಪ್ಯಾಂಟ್ ಮತ್ತು 2 ಶರ್ಟ್ ಗಳಿಗೆ 5.6 ಮೀಟರ್ ನಂತೆ ಬಟ್ಟೆಗೆ 750 ರೂ. ಮತ್ತು ಹೊಲಿಗೆ ವೆಚ್ಚ 350 ರೂ. ಹಾಗೂ ಬಿಳಿ ಸೂಟಿಂಗ್ಸ್ 2 ಪ್ಯಾಂಟ್ ಮತ್ತು 2 ಶರ್ಟ್ ಗಳಿಗೆ 5.6 ಮೀಟರ್ ನಂತೆ ಬಟ್ಟೆಗೆ 731 ರೂ. ಮತ್ತು ಹೊಲಿಗೆ ವೆಚ್ಚ 350 ರೂ. ನೀಡಬೇಕು.
ಇನ್ನು ಮಹಿಳಾ ನೌಕರರಿಗೆ 6.20 ರಿಂದ 6.30 ಮೀಟರ್ ಖಾಕಿ ಸೀರೆ ಮತ್ತು ರವಿಕೆಗೆ 1707 ರೂ. ಹೊಲಗೆ ವೆಚ್ಚವಾಗಿ 100 ರೂ. ನೀಡಬೇಕು. ಇನ್ನು ನೀಲಿ ಸೀರೆ ಮತ್ತು ರವಿಕೆಗೂ 1707 ರೂ. ಮತ್ತು ಹೊಲಿಗೆ ವೆಚ್ಚವಾಗಿ 100 ರೂ. ನೀಡಬೇಕು. 2 ಜತೆ ಪ್ಯಾಂಟ್ ಮತ್ತು 2 ಶರ್ಟ್ ಗಳತೆ ಬ್ರೌನ್ ಸೂಟಿಂಗ್ ಮತ್ತು ಕ್ರೀಂ ಶರ್ಟ್ ಗೆ 731 ರೂ. ಮತ್ತು ಹೊಲಿಗೆ ವೆಚ್ಚವಾಗಿ 350 ರೂ. ನೀಡಬೇಕು ಎಂದು ತಿಳಿಸಿದ್ದಾರೆ.
ಈ ಸಮವಸ್ತ್ರಗಳನ್ನು ನಿಗಮದ ಸೇವೆಯಲ್ಲಿರುವ 3ನೇ ಮತ್ತು 4ನೇ ದರ್ಜೆಯ ಅರ್ಹ ಸಿಬ್ಬಂದಿಗಳಿಗೆ (ತರಬೇತಿ ನೌಕರರು ಸೇರಿದಂತೆ) ಆರ್ಥಿಕ ವರ್ಷ 2025-26 ನೇ ಸಾಲಿಗೆ ಅನ್ವಯಿಸುವಂತೆ ಸಮವಸ್ತ್ರಕ್ಕೆ ಬದಲಾಗಿ “ನಗದ’ನ್ನು ಈ ಮೇಲಿನ ದರಗಳಂತೆ ಹಾಗೂ ಹೊಲಿಗೆ ವೆಚ್ಚವನ್ನು ಸುತ್ತೋಲೆ ಸಂ.09/2014-15ರ ದಿನಾಂಕ.27.08.2014ರ ದರಗಳಂತೆ ಪಾವತಿಸಲು ವ್ಯವಸ್ಥಾಪಕ ನಿರ್ದೇಶಕರು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹಣವನ್ನು 2025-26 ನೇ ಸಾಲಿಗೆ ಸಮವಸ್ತ್ರಗಳನ್ನು ವಿತರಿಸದೇ ಇರುವ ಎಲ್ಲ ಅರ್ಹ ಸಿಬ್ಬಂದಿಗಳಿಗೆ, ಸಮವಸ್ತ್ರದ ಬದಲು ನಗದ”ನ್ನು, ಹೊಲಿಗೆ ವೆಚ್ಚದೊಂದಿಗೆ, ಅವರ ಅರ್ಹತಾ ದಿನಾಂಕದ ಪ್ರಕಾರ ಮಾಹೆವಾರು ವೇತನದಲ್ಲಿ ಸೇರಿಸಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಇದೆಲ್ಲವನ್ನು ಗಮನಿಸಿದರೆ ರಾಜ್ಯ ಸರ್ಕಾರದ ಯಾವುದೇ ಇಲಾಖೆಯಲ್ಲಿಯೂ ಇಲ್ಲದ ಕಿತ್ತು ತಿನ್ನುವ ಬಡತನ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಲ್ಲೂ ಇರುವುದು ಮಾತ್ರ ಭಾರಿ ನೋವಿನ ಸಂಗತಿ. ನಿತ್ಯ ಸಾರ್ವಜನಿಕರೊಂದಿಗೆ ಒಡನಾಟ ಇಟ್ಟುಕೊಳ್ಳುತ್ತಿರುವ ನೌಕರರಿಗೆ ಸರಿಯಾದ ಸಮವಸ್ತ್ರವನ್ನು ಕೊಡಲಾರದಷ್ಟು ಸಾರಿಗೆ ನಿಗಮಗಳು ದಿವಾಳಿಯಾಗಿವೆ ಎಂದರೆ ಇಲ್ಲಿ ಯಾರನ್ನು ದೂಷಿಸಬೇಕು ಎಂಬುದನ್ನು ಜನತೆಯೇ ತೀರ್ಮಾನಿಸಬೇಕು.

Related








