ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವು ಮುಖ್ಯರಸ್ತೆ ಮತ್ತು ವಾರ್ಡ್ ರಸ್ತೆಗಳನ್ನು ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಇಂದು ಪರಿಶೀಲನೆ ನಡೆಸಿದರು.
ಹೊರಮಾವು ಮುಖ್ಯರಸ್ತೆಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳನ್ನು ನಿಗದಿಪಡಿಸಿದ ಸಮಯದಲ್ಲಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದ ಅಪರ ಆಯುಕ್ತರು, ಹೊರಮಾವು ಮುಖ್ಯರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ರಸ್ತೆ ಗುಂಡಿ ಇಲ್ಲದಂತೆ ಸೂಕ್ತ ಕ್ರಮ ತೆಗೆದು ಕೊಳ್ಳಲು ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದರು.
ಹೊರಮಾವು ರಸ್ತೆಯಲ್ಲಿ ಜಲಮಂಡಳಿ ಕೊಳವೆಗಳಿಂದ ನೀರು ಸೋರುತ್ತಿದ್ದು ಇದರಿಂದ ರಸ್ತೆಗೆ ಹಾನಿಯಾಗುವುದರಿಂದ ಕೂಡಲೇ ಕ್ರಮವಹಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಹೊರಮಾವು ಮುಖ್ಯರಸ್ತೆಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಪರಿಶೀಲಿಸಿ, ಅತಿಕ್ರಮಣವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಎಲ್ಲೆಂದರಲ್ಲಿ ಅಳವಡಿಸಿರುವ ಜಾಹೀರಾತು ಫ್ಲೆಕ್ಸ್ ಮತ್ತು ಬಂಟಿಂಗ್ಸ್ ತೆರವುಗೊಳಿಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ತಿಳಿಸಿದರು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗ್ರಾಫೈಟ್ ರೋಡ್, ಇಎಸ್ಐ ರಸ್ತೆ, ಹೊರ ವರ್ತುಲ ರಸ್ತೆ, ಹೊರಮಾವು ಮುಖ್ಯರಸ್ತೆ, ಪಣತ್ತೂರು ಮುಖ್ಯರಸ್ತೆ, ಕ್ರೋಮ ರಸ್ತೆ, ಐಟಿಪಿಲ್ ಮುಖ್ಯರಸ್ತೆ, ಕೆಆರ್ ಪುರ ಮಾರುಕಟ್ಟೆ ಪ್ರದೇಶ, ಬಳಗೆರೆ ಮುಖ್ಯರಸ್ತೆ, ಟಿನ್ ಫ್ಯಾಕ್ಟರಿ ಹಾಗೂ ಮಹದೇವಪುರ ಕೆರೆ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು.
ಸ್ವಚ್ಛತಾ ಕಾರ್ಯದಲ್ಲೂ ಡೆಬ್ರಿಸ್, ಸಿಲ್ಟ್, ಒಣಗಿರುವ ಮರದ ಎಲೆಗಳು, ತ್ಯಾಜ್ಯ, ಸೋಫಾ ಮತ್ತು ಹಳೆ ವಸ್ತುಗಳು ತೆರವುಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು. ನಗರ ಪಾಲಿಕೆ ವ್ಯಾಪ್ತಿಯಲ್ಲಿ ತೀವ್ರ ಸ್ವಚ್ಛತಾ ಅಭಿಯಾನದ ಅಂಗವಾಗಿ “ಕಸ ಸುರಿಯುವ ಹಬ್ಬ” ಆಯೋಜನೆ ಮಾಡಲಾಗಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆ ಮುಂದೆ ಕಸ ಸುರಿಯುವ ಮೂಲಕ ನಾಗರಿಕರಲ್ಲಿ ಕಸ ವಿಲೇವಾರಿ ಮತ್ತು ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಇಂದು ನಡೆದ ಸ್ಥಳ ಪರಿಶೀಲನೆಯಲ್ಲಿ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಉಪಪ್ರಧಾನ ವ್ಯವಸ್ಥಾಪಕರು (BSWML) ಹಾಗೂ ಇನ್ನಿತರೆ ಅಧಿಕಾರಿಗಳು ಇದ್ದರು.
Related









