ಬೆಂಗಳೂರು: ಈಜೀಪುರ ಮೇಲ್ಸೇತುವೆ ಕಾಮಗಾರಿಯನ್ನು ಜುಲೈ 2026ರಲ್ಲಿ ಪೂರ್ಣಗೊಳಿಸಲಾಗುವುದೆಂದು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ 5 ನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಮಲ್ಲಶ್ವರಂ ಐಪಿಪಿ ಕೇಂದ್ರದಲ್ಲಿ ಮಾಧ್ಯಮಗಳ ಜತೆ ನಡೆದ ಸಂವಾದನ್ನು ಉದ್ದೇಶಿಸಿ ಮಾತನಾಡಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಹಾಗೂ ಬೆಂಗಳೂರು ಉತ್ತರ – ಒಟ್ಟು 5 ನಗರ ಪಾಲಿಕೆಗಳನ್ನು ರಚಿಸಲಾಗಿದೆ. ಮಾನ್ಯ ಉಪಮುಖ್ಯಮಂತ್ರಿಗಳು ಹಾಗು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಜಿಬಿಎ ಸ್ಥಾಪನೆಗೊಂಡಿದ್ದು, 2025ರ ಸೆಪ್ಟೆಂಬರ್ 2 ರಿಂದ ಹೊಸ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆ. ನಗರ ಪಾಲಿಕೆಗಳ ಆಯುಕ್ತರು ಸ್ಥಳೀಯ ಪರಿಶೀಲನೆಗಳನ್ನು ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.
ವಾರ್ಡ್ ವಿಂಗಡಣೆ – ಅಂತಿಮ ಅಧಿಸೂಚನೆ ಶೀಘ್ರ: 5 ನಗರ ಪಾಲಿಕೆಗಳ ಕರಡು ವಾರ್ಡ್ ಪುನರ್ ವಿಂಗಡಣೆ ಅಧಿಸೂಚನೆಯನ್ನು 2025ರ ಸೆಪ್ಟೆಂಬರ್ 30ರಂದು ಪ್ರಕಟಿಸಲಾಗಿತ್ತು. ಆಕ್ಷೇಪಣೆಗಳ ಅವಧಿ ಮುಗಿದಿದ್ದು, ಪರಿಶೀಲನೆಯ ನಂತರ ಅಂತಿಮ ಅಧಿಸೂಚನೆ ಶೀಘ್ರ ಹೊರಡಿಸಲಾಗುವುದು.
ತೆರಿಗೆ ಸಂಗ್ರಹ – ₹3437 ಕೋಟಿ: ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ₹6700 ಕೋಟಿ ತೆರಿಗೆ ಸಂಗ್ರಹಿಸುವ ಗುರಿ ಇದ್ದು, ಇದುವರೆಗೆ ₹3437 ಕೋಟಿ ತೆರಿಗೆ ಸಂಗ್ರಹಿಸಲಾಗಿದೆ. 3262 ಕೋಟಿ ರೂ. ತೆರಿಗೆ ಸಂಗ್ರಹಿಸಬೇಕಿದ್ದು, ಆಯಾ ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ಸಂಗ್ರಹ ಮಾಡಲು ಸೂಕ್ತ ಕ್ರಮವಹಿಸಲಿದ್ದಾರೆ ಎಂದು ತಿಳಿಸಿದರು.
ಇ-ಖಾತೆ – 7.83 ಲಕ್ಷ ಅಂತಿಮ ಪ್ರಮಾಣಪತ್ರಗಳು: ಜಿಬಿಎ ವ್ಯಾಪ್ತಿಯಲ್ಲಿರುವ ಸುಮಾರು 25 ಲಕ್ಷ ಆಸ್ತಿಗಳ ಪೈಕಿ 7,96,780 ಅರ್ಜಿಗಳು ಸ್ವೀಕರಿಸಲಾಗಿದ್ದು, ಇದರಲ್ಲಿ 7,83,179 ಗೆ ಅಂತಿಮ ಇ-ಖಾತಾ ನೀಡಲಾಗಿದೆ. ಅದಕ್ಕೆ ಮತ್ತಷ್ಟು ವೇಗ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಜೊತೆಗೆ ಆಯಾ ನಗರ ಪಾಲಿಕೆಗಳಿಗೆ ಸಲಹೆಗಳನ್ನು ಪಡೆದು ತ್ವರಿತಗತಿಯಲ್ಲಿ ಇ-ಖಾತಾಗಳನ್ನು ನೀಡಲು ಕ್ರಮವಹಿಸಲಾಗುವುದೆಂದು ತಿಳಿಸಿದರು.

ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ ಅಭಿಯಾನ: ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆಗಾಗಿ 1169 ಗೆ ನಾಗರಿಕರು ನೋಂದಣಿ ಮಾಡಿಕೊಂಡಿರುತ್ತಾರೆ. ಎಲ್ಲ ನಗರ ಪಾಲಿಕೆಗಳೊಂದಿಗೆ ಸಮನ್ವಯ ಮಾಡಿ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲು ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸಲಾಗುವುದು.
ಬಿಸ್ಮೈಲ್ ವತಿಯಿಂದ ಪ್ರಮುಖ ಯೋಜನೆಗಳು: ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಸುರಂಗ ಮಾರ್ಗವು ಅಂತಿಮ ಹಂತದಲ್ಲಿದ್ದು, ಎಲಿವೆಟೆಡ್ ಕಾರಿಡಾರ್ ನಿರ್ಮಾಣಕ್ಕಾಗಿ ಡಿಪಿಆರ್ ಅಂತಿಮ ಹಂತದಲ್ಲಿದ್ದು, ತ್ವರಿತಗತಿಯಲ್ಲಿ ಯೋಜನೆಗಳಿಗೆ ಚಾಲನೆ ನೀಡಲಾಗುವುದೆಂದು ತಿಳಿಸಿದರು.
ಈಜೀಪುರ ಮೇಲ್ಸೇತುವೆ – ಜುಲೈ 2026ಕ್ಕೆ ಪೂರ್ಣಗೊಳ್ಳಲಿದೆ: 2.38 ಕಿಮೀ ಉದ್ದದ ಈಜೀಪುರ ಮೇಲ್ಸೇತುವೆ ಕಾಮಗಾರಿಯಲ್ಲಿ 1.35 ಕಿಮೀ ಭಾಗ ಈಗಾಗಲೇ ಪೂರ್ಣಗೊಂಡಿದೆ. ಸೆಂಟ್ ಜಾನ್ಸ್ ಜಾಗ ಸಂಬಂಧಿಸಿದ ನ್ಯಾಯಾಲಯದ ತೀರ್ಪು ಬಂದಿದ್ದು, ಜಾಗ ವಶಪಡಿಸಿಕೊಂಡ ನಂತರ ಜುಲೈ 2026ರೊಳಗೆ ಮೇಲ್ಸೇಸೇತುವೆ ಪೂರ್ಣಗೊಳ್ಳಲಿದೆ. ಅದಲ್ಲದೆ ಈಗಾಗಲೇ ಹೊಸಕೆರೆಹಳ್ಳಿ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಯಲಹಂಕ ಮೇಲ್ಸೇತುವೆ ಕಾಮಗಾರಿಯನ್ನು ಕೂಡಾ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ವೈಟ್ ಟಾಪಿಂಗ್ – 79.08 ಕಿಮೀ ಪೂರ್ಣ: 1700 ಕೋಟಿ ರೂ ವೆಚ್ಚದಲ್ಲಿ 220.68 ಕಿಮೀ ಉದ್ದದ 140 ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, 79.08 ಕಿಮೀ (39 ರಸ್ತೆ) ವೈಟ್ ಟಾಪಿಂಗ್ ಕೆಲಸ ಪೂರ್ಣಗೊಂಡಿದೆ. ಉಳಿದ 101 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ.
ರಸ್ತೆ ಡಾಂಬರೀಕರಣ – 44% ಪೂರ್ಣ: ಬ್ರಾಂಡ್ ಬೆಂಗಳೂರು ಯೋಜನೆಯಡಿ ₹694 ಕೋಟಿ ವೆಚ್ಚದಲ್ಲಿ 386.5 ಕಿಮೀ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, 44% ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಮುಂದಿನ 2 ತಿಂಗಳಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಸುರಕ್ಷಾ 75 – ಜಂಕ್ಷನ್ ಅಭಿವೃದ್ಧಿ 40% ಪೂರ್ಣ: ₹100 ಕೋಟಿ ವೆಚ್ಚದ ‘ಸುರಕ್ಷಾ 75’ ಜಂಕ್ಷನ್ ಸುಧಾರಣಾ ಯೋಜನೆಯ 40% ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಲು ವಿನ್ಯಾಸ ಮತ್ತು ಅನುಷ್ಠಾನದ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು.
18 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ: ಜಿಬಿಎ ವ್ಯಾಪ್ತಿಯಲ್ಲಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಈವರೆಗೆ 18 ಸಾವಿರ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ನಿರ್ದೇಶನದ ಪ್ರಕಾರ ಬಾಕಿಯಿರು ರಸ್ತೆಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚುವ ಕಾರ್ಯವನ್ನು ಮಾಡಲಾಗುತ್ತಿದೆ.
ಪಣತ್ತೂರು ರಸ್ತೆಗೆ 10 ದಿನಗಳಲ್ಲಿ ಸಂಚಾರ ವ್ಯವಸ್ಥೆ: ಪಣತ್ತೂರು S-Cross ರಸ್ತೆಯಲ್ಲಿ 1 ಕಿಮೀ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಉಳಿದ 500 ಮೀ. ಕಾನ್ಕ್ರೀಟ್ ರಸ್ತೆಯನ್ನು 10 ದಿನಗಳಲ್ಲಿ ವಾಹನ ಸಂಚಾರಕ್ಕೆ ತೆರೆಯಲಾಗುವುದು. ರೈಲ್ವೆ ಇಲಾಖೆಯ ರಸ್ತೆಯನ್ನು ದುರಸ್ತಿಗೊಳಿಸಲು ಅನುಮತಿ ನೀಡಿದರೆ, ಪಾಲಿಕೆಯೇ ಕೆಲಸ ಕೈಗೊಳ್ಳಲಿದೆ.
ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ಮಾತನಾಡಿ, ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ 390 ಕಿ.ಮೀ ಉದ್ದದ ಪ್ರಮುಖ ರಸ್ತೆಯಿದ್ದು, 63 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಹಾಗೂ 41 ಕಿ.ಮೀ ಉದ್ದದ ರಸ್ತೆಗೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ವೈಟ್ ಟಾಪಿಂಗ್ ನಡೆಸುವ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿ ನಡೆಸುತ್ತಿರುವ ರಸ್ತೆಗಳಲ್ಲಿ ಗುತ್ತಿಗೆದಾರರೇ ಗುಂಡಿಗಳನ್ನು ಮುಚ್ಚಬೇಕಿದೆ. ಬಾಕಿ ರಸ್ತೆಗಳಲ್ಲಿ ಪಾಲಿಕೆಯಿಂದ ಮುಚ್ಚಲಾಗವುದೆಂದು ತಿಳಿಸಿದರು.
ದಕ್ಷಿಣ ನಗರ ಪಾಲಿಕೆ ಆಯುಕ್ತರಾದ ರಮೇಶ್ ಕೆ.ಎನ್ ರವರು ಮಾತನಾಡಿ, ಇ-ಖಾತಾ ಅರ್ಜಿ ಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಕೆಲಸ ಮಾಡಲಾಗುತ್ತಿದೆ. ಒಂದು ಲಾಗಿನ್ ನಲ್ಲಿ ಹೆಚ್ಚು ಅರ್ಜಿಗಳಿದ್ದರೆ, ಕಡಿಮೆ ಅರ್ಜಿಗಳಿರುವ ಲಾಗಿಗ್ ಗೆ ರವಾನೆಯಾಗಲಿದೆ ಎಂದು ತಿಳಿಸಿದರು.
ಈ ವೇಳೆ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಡಾ. ರಾಜೇಂದ್ರ ಕೆ.ವಿ, ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಬಿಸ್ಮೈಲ್ ತಾಂತ್ರಿಕ ನಿರ್ದೇಶಕರಾದ ಪ್ರಹ್ಲಾದ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Related









