ಬೆಂಗಳೂರು: ಯುವನಿಧಿ ಯೋಜನೆ ಫಲಾನುಭವಿಗಳು ಸೇವಾ ಸಿಂಧುವಿನ ಮೂಲಕ ನೋಂದಣಿ ಮಾಡಿಕೊಂಡು ಪ್ರತಿ ತಿಂಗಳ ಕೊನೆಯ ವಾರದೊಳಗೆ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮಾಡುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳಬೇಕು.
ಕರ್ನಾಟಕ ರಾಜ್ಯದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾಗಳಲ್ಲಿ ತೇರ್ಗಡೆಯಾಗಿರುವುವರು ಈ ಘೋಷಣೆ ಮಾಡಿಕೊಳ್ಳಬೇಕು.
ಈಗಾಗಲೇ ಅಕ್ಟೋಬರ್ ವರೆಗೆ ನೇರ ನಗದು ಖಾತೆಗೆ ಜಮೆಯಾಗಿದ್ದು, ಮುಂದಿನ ತಿಂಗಳು ಈ ಪ್ರಯೋಜನ ಪಡೆಯಲು ಎಸ್.ಎಂ.ಎಸ್ ಸಂದೇಶವನ್ನು ಫಲಾನುಭವಿಗಳಿಗೆ ರವಾನಿಸಲಾಗುತ್ತದೆ.
ಫಲಾನುಭವಿಗಳು ಕಡ್ಡಾಯವಾಗಿ ಆಧಾರ್ ಸೀಡ್ ಆಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಅಭ್ಯರ್ಥಿಗಳು https://sevasindhugs.karnataka.gov.in ನಲ್ಲಿ ಸ್ವಯಂ ಘೋಷಣೆ ಮಾಡಿಕೊಳ್ಳಬಹುದು.
2022-23 ಹಾಗೂ 2025-26ನೇ ಸಾಲಿನಲ್ಲಿ ಪದವಿ/ ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾಗಳಲ್ಲಿ ಪ್ರಸ್ತಕ ಸಾಲಿನಲ್ಲಿ ತೇರ್ಗಡೆಯಾಗಿ, 180 ದಿನ ಪೂರೈಸಿದ ಬಳಿಕ ಅಭ್ಯರ್ಥಿಗಳಿಗೆ ಹಣ ಸಂದಾಯವಾಗುತ್ತದೆ.
ಹೀಗಾಗಿ ಇದರ ಪ್ರಯೋಜನವನ್ನು ಪಡೆಯಲು ನವೆಂಬರ್ 29 ರವರೆಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಸ್ವಯಂ ಘೋಷಣೆ ಪತ್ರವನ್ನು ಸಲ್ಲಿಸಲು ಅವಕಾಶವಿದೆ.

ಈಗಾಗಲೇ ಪ್ರಯೋಜನ ಪಡೆಯುತ್ತಿರುವ ಫಲಾನುಭವಿಗಳು ಸಹ ಪ್ರತಿ ತಿಂಗಳು ಸ್ವಯಂ ಘೋಷಣೆ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇಲ್ಲವಾದಲ್ಲಿ ಅಂತಹವರಿಗೆ ನೇರ ನಗದು ವರ್ಗಾವಣೆ ಆಗುವುದಿಲ್ಲ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
Related









