NEWSನಮ್ಮಜಿಲ್ಲೆನಮ್ಮರಾಜ್ಯ

ಶಕ್ತಿ ಯೋಜನೆ ನೆಪದಲ್ಲಿ ನೌಕರರ ಅಮಾನತು ಮಾಡುವಿರಂತೆ ಮೊದಲು 38 ತಿಂಗಳ ಹಿಂಬಾಕಿ, 2024ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಿಸಿ: ನೌಕರರ ಆಕ್ರೋಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಬಸ್​​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆ (Shakti Scheme) ಆರಂಭವಾಗಿ ಎರಡು ವರ್ಷ ತುಂಬಿ, ಮೂರನೇ ವರ್ಷಕ್ಕೆ ಕಾಲಿಟ್ಟಿದೆ.

ಜತೆಗೆ ಇಲ್ಲಿಯವರೆಗೆ ಮಹಿಳೆಯರು ಸುಮಾರು 500 ಕೋಟಿಗೂ ಹೆಚ್ಚುಬಾರಿ ಉಚಿತವಾಗಿ ಸಂಚಾರ ಮಾಡಿದ್ದಾರೆ. ಆದರೆ ಇಂತಹ ಯೋಜನೆ ಬಗ್ಗೆ ಕೆಲ ಸಾರಿಗೆ ನೌಕರರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಪ್ರಯಾಣಿಕರಿಂದ ಕೂಡ ಸಾಕಷ್ಟು ದೂರುಗಳು ಬಂದಿವೆ ಎನ್ನಲಾಗಿದ್ದು, ಈ ಹಿನ್ನೆಲೆ ಸಾರಿಗೆ ನಿಗಮಗಳು ನೌಕರರಿಗೆ ಎಚ್ಚರಿಕೆ ಕೊಡುವಂಥ ಖಡಕ್ ಸುತ್ತೋಲೆಗಳನ್ನು ಹೊರಡಿಸಿವೆ.

ಅಂದರೆ ಇನ್ನು ಮುಂದೆ ಸರ್ಕಾರದ ಶಕ್ತಿ ಯೋಜನೆ ವಿರುದ್ಧ ಸಾರಿಗೆ ನೌಕರರು ಮನಬಂದಂತೆ ಮಾತನಾಡುವಂತಿಲ್ಲ. ಬಸ್​ನಲ್ಲಿ ಪ್ರಯಾಣಿಕರ ಜತೆಗೆ ಬೇಕಾಬಿಟ್ಟಿಯಾಗಿ ಮಾತನಾಡಿದರೆ ಸಂಕಷ್ಟ ಎದುರಿಸಬೇಕಾಗುತ್ತದೆ.

ಶಕ್ತಿ ಯೋಜನೆ ಬಗ್ಗೆ ಮಾತನಾಡಿದರೆ ಅಂಥ ನೌಕರರನ್ನು ಅಮಾನತು ಮಾಡಲಾಗುವುದು ಎಂದು ಸಾರಿಗೆ ನಿಗಮಗಳ ಸುತ್ತೋಲೆ ತಿಳಿಸಿದೆ. ಅಂಜಿಕೆ, ಭಯ ಇಲ್ಲದೆ ಶಕ್ತಿ ಸ್ಕೀಂ ಬಗ್ಗೆ ಸಾರಿಗೆ ನೌಕರರು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ದೂರುಗಳ ಆಧಾರದಲ್ಲಿ ಎಲ್ಲ ಡಿಸಿಗಳಿಗೆ ಸಾರಿಗೆ ನಿಗಮಗಳು ಖಡಕ್ ಸೂಚನೆ ನೀಡಿವೆ.

ಆದರೆ, ಈ ಬಗ್ಗೆ ಸಾರಿಗೆ ನೌಕರರು ಸರ್ಕಾರದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಮಹಿಳೆಯರಿಗೆ ಈ ಯೋಜನೆಯಿಂದ ಉಪಯೋಗ ಆಗುತ್ತಿದೆ ನಿಜ. ಆದರೆ ಸಾರಿಗೆ ನೌಕರರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಕೂಡಲೇ ಈ ಆದೇಶ ವಾಪಸ್ ಪಡೆಯಬೇಕೆಂದು ನೌಕರರು ಆಗ್ರಹಿಸಿದ್ದಾರೆ.

ಅಲ್ಲದೆ ಮೊದಲು ಕೊಡಬೇಕಿರುವ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಡಿ, ಜತೆಗೆ 2024ರ ಜನವರಿ 1ರಿಂದ ಜಾರಿಗೆ ಬರಬೇಕಿರುವ ವೇತನ ಹೆಚ್ಚಳ ಮಾಡಿ ಅದನ್ನು ಬಿಟ್ಟು ಪ್ರಾಮಾಣಿಕವಾಗಿ ಡ್ಯೂಟಿ ಮಾಡುತ್ತಿರುವ ನೌಕರರ ಬಗ್ಗೆ ಈ ರೀತಿ ಕೀಳು ಮಟ್ಟದಲ್ಲಿ ನಡೆದುಕೊಳ್ಳುವುದು ಸಿದ್ದರಾಮಯ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ, ಶಕ್ತಿ ಯೋಜನೆ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದರೆ ಕ್ರಮ ಕೈಗೊಳ್ಳುತ್ತೇವೆಂದು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಸಾರಿಗೆ ನೌಕರರ ಆಕ್ರೋಶಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ. ಇದು ಸರ್ಕಾರದ ಕೆಟ್ಟ ನಡೆಗೆ ಸಾಕ್ಷಿಯಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

Megha
the authorMegha

Leave a Reply

error: Content is protected !!