- ದೇವನಹಳ್ಳಿಯಲ್ಲಿ ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್‌ಗೆ ಚಾಲನೆ, 25 ಮಿಲಿಯನ್ ಡಾಲರ್ ಹೂಡಿಕೆ
ಬೆಂಗಳೂರು: ದೇವನಹಳ್ಳಿಯ ಕೆಐಎಡಿಬಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಕಾಲಿನ್ಸ್ ಏರೋಸ್ಪೇಸ್ ಕಂಪನಿಯು ಅಭಿವೃದ್ಧಿಪಡಿಸಿರುವ ತನ್ನ `ಕಾಲಿನ್ಸ್ ಇಂಡಿಯಾ ಆಪರೇಷನ್ ಸೆಂಟರ್’ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಕಾಲಿನ್ಸ್ ಏರೋಸ್ಪೇಸ್ ರಾಜ್ಯದಲ್ಲಿ 25 ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಈ ನೂತನ ಘಟಕದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಧುನಿಕ ತಯಾರಿಕೆಗಳಲ್ಲಿ 2 ಸಾವಿರಕ್ಕೂ ಹೆಚ್ಚು ಕೌಶಲ್ಯಪೂರ್ಣ ಉದ್ಯೋಗ ಸೃಷ್ಟಿ ಆಗಲಿದೆ. ಭಾರತದ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ರಾಜ್ಯದ ಕೊಡುಗೆ ಶೇಕಡ 65ರಷ್ಟಿದೆ. ಬೆಂಗಳೂರು, ಬೆಳಗಾವಿ, ಮೈಸೂರು, ತುಮಕೂರು ಮತ್ತು ಚಾಮರಾಜನಗರದಲ್ಲಿ ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಪಾರ್ಕ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದರು.
ವೈಮಾಂತರಿಕ್ಷ ಮತ್ತು ರಕ್ಷಣಾ ವಲಯದಲ್ಲಿ ತೊಡಗಿಸಿಕೊಂಡಿರುವ 2 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಉದ್ಯಮಗಳು ರಾಜ್ಯದಲ್ಲಿವೆ. ಮಹೀಂದ್ರ ಏರೋಸ್ಪೇಸ್, ರಂಗ್‌ಸನ್ಸ್ ತರಹದ ವೈಮಾಂತರಿಕ್ಷ ಕಂಪನಿಗಳು ರಾಜ್ಯದಲ್ಲಿ ಅಪಾರ ಹೂಡಿಕೆ ಮಾಡಿದ್ದು, ಈ ವಲಯದಲ್ಲಿ 48 ಒಡಂಬಡಿಕೆಗಳಾಗಿವೆ. ರಂಗ್‌ಸನ್ಸ್ ಕಂಪನಿಯು ಬೋಯಿಂಗ್ ಕಂಪನಿ ಜತೆ ಸಹಭಾಗಿತ್ವ ಹೊಂದಿದ್ದು, 2,915 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 45 ಸಾವಿರ ಕೋಟಿ ರೂ. ಹೂಡಿಕೆ ಆಕರ್ಷಿಸಿ, 60 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಇದೆ ಎಂದು ಅವರು ವಿವರಿಸಿದರು.
ಸಚಿವ ಎಂ ಬಿ ಪಾಟೀಲ ಮಾತನಾಡಿ, ಭಾರತದಲ್ಲಿ ಉತ್ಪಾದನೆ ಆಧಾರಿತ ಪ್ರೋತ್ಸಾಹ (ಪಿ.ಎಲ್.ಐ) ಪಡೆದುಕೊಂಡಿರುವ ಕಾಲಿನ್ಸ್ ಕಂಪನಿಯ ಮೊದಲ ಘಟಕ ಇದಾಗಿದೆ. ಇದು ಬೋಯಿಂಗ್, ಏರ್‌ಬಸ್ ತರಹದ ವೈಮಾನಿಕ ಉದ್ದಿಮೆಗಳಿಗೆ ತನ್ನ ಸೇವೆಯನ್ನು ಒದಗಿಸಲಿದೆ. ಇದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೆಐಎಡಿಬಿ ಮತ್ತು ಕರ್ನಾಟಕ ಉದ್ಯೋಗ ಮಿತ್ರ ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿ ಅಗತ್ಯ ಅನುಮೋದನೆಗಳು, ಮೂಲಸೌಕರ್ಯ ಮತ್ತು ತಯಾರಿಕಾ ಚಟುವಟಿಕೆಗಳಿಗೆ ಬೇಕಾದ ಸಂಪೂರ್ಣ ಬೆಂಬಲ ನೀಡಿವೆ ಎಂದು ತಿಳಿಸಿದರು.
ರಾಜ್ಯದ ಹೊಸ ಕೈಗಾರಿಕಾ ನೀತಿಯಲ್ಲಿ ಹೈಟೆಕ್ ವಲಯಗಳಾಗಿರುವ ವೈಮಾಂತರಿಕ್ಷ, ರಕ್ಷಣೆ ಮತ್ತು ವಿದ್ಯುನ್ಮಾನಕ್ಕೆ ಭಾರೀ ಒತ್ತು ಕೊಡಲಾಗಿದೆ. ಕಾಲಿನ್ಸ್ ಏರೋಸ್ಪೇಸ್ ರಾಜ್ಯದಲ್ಲಿ ಮಾಡಿರುವ ಹೂಡಿಕೆಯು ಐತಿಹಾಸಿಕವಾಗಿದ್ದು, ಸರಕಾರದ ದೂರದೃಷ್ಟಿಗೆ ಪೂರಕವಾಗಿದೆ. ಈ ತಯಾರಿಕಾ ಘಟಕವು ನಿಜವಾದ ಅರ್ಥದಲ್ಲಿ ʻಈಸ್ ಆಫ್ ಡೂಯಿಂಗ್ ಬಿಝಿನೆಸ್ʼಗೆ ನಿದರ್ಶನವಾಗಿದ್ದು, ಉದ್ಯಮಸ್ನೇಹಿ ಕಾರ್ಯಪರಿಸರಕ್ಕೆ ಸಾಕ್ಷಿಯಾಗಿದೆ ಎಂದರು.
ಭಾರತದ ವೈಮಾನಿಕ ಮಾರುಕಟ್ಟೆಯು 2032ರ ಹೊತ್ತಿಗೆ ಜಗತ್ತಿನಲ್ಲಿ ಮೂರನೇ ಸ್ಥಾನದಲ್ಲಿ ಪ್ರತಿಷ್ಠಾಪಿತವಾಗಲಿದೆ. ಇಲ್ಲಿ ನಿರ್ವಹಣೆ, ದುರಸ್ತಿ ಮತ್ತು ಓವರ್‌ಹಾಲ್ (ಎಂಆರ್‌ಒ) ಯೋಜನೆಯಡಿಯಲ್ಲಿ ಸದ್ಯಕ್ಕೆ ವಾರ್ಷಿಕವಾಗಿ 1.2 ಬಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದೆ. ಇದು ಮುಂದಿನ ಏಳು ವರ್ಷಗಳಲ್ಲಿ 4.6 ಬಿಲಿಯನ್ ಡಾಲರ್ ಮಟ್ಟಕ್ಕೆ ಬೆಳೆಯಲಿದೆ. ಇದರಲ್ಲಿ ಕಾಲಿನ್ಸ್ ಏರೋಸ್ಪೇಸ್ ತರಹದ ಕಂಪನಿಗಳ ಕೊಡುಗೆ ಗಮನಾರ್ಹವಾಗಿರಲಿದೆ. ನೂತನ ಘಟಕದ ಮೂಲಕ ಅಪಾರ ಸಂಖ್ಯೆಯ ಉದ್ಯೋಗಗಳೂ ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವರಾದ ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ ಮತ್ತು ಸಂಸದ ಡಾ.ಕೆ. ಸುಧಾಕರ್ ಹಾಗೂ ಕಾಲಿನ್ಸ್ ಏರೋಸ್ಪೇಸ್ ಕಂಪನಿಯ ಹಿರಿಯ ಉಪಾಧ್ಯಕ್ಷ ರಾಯ್ ಗಲಿಕ್ಸನ್ , ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೆಐಎಡಿಬಿ ಸಿಇಒ ಡಾ.ಮಹೇಶ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸೇರಿದಂತೆ ಇತರರು ಇದ್ದರು.
Related









