NEWSನಮ್ಮಜಿಲ್ಲೆಸಂಸ್ಕೃತಿ

18ನೇ ಶತಮಾನದ ದಿಟ್ಟ ಹೋರಾಟಗಾರ್ತಿ ಓಬವ್ವ: ಸಚಿವ ಮುನಿಯಪ್ಪ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: 18ನೇ ಶತಮಾನದ ದಿಟ್ಟ ಹೋರಾಟಗಾರ್ತಿ, ಚಿತ್ರದುರ್ಗದ ಕೋಟೆಗೆ ನುಸುಳುತ್ತಿದ್ದ ನೂರಾರು ಶತ್ರು ಸೈನಿಕರ ತಲೆಗೆ ಒನಕೆಯಿಂದ ಒಡೆದು ವೀರಾವೇಶದಿಂದ ಹೋರಾಡಿ ಹುತಾತ್ಮರಾದ ವೀರ ವನಿತೆ ಒನಕೆ ಓಬವ್ವ ಅವರ ಜಯಂತಿ ಆಚರಣೆ ಮಾಡುತ್ತಿರುವುದು ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ಸಂಗತಿ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ವೀರ ವನಿತೆ ಒನಕೆ ಓಬವ್ವ’ ಜಯಂತಿಯನ್ನು ದೇವನಹಳ್ಳಿ ಟೌನ್ ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು. ಈ ಸಮಯದಲ್ಲಿ ವೀರ ವನಿತೆ ಒನಕೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ಕನ್ನಡ ನಾಡಿಗೆ ಹೆಮ್ಮೆಯ ದಿನವಾಗಿದೆ. 18ನೇ ಶತಮಾನದಲ್ಲಿ ಚಿತ್ರದುರ್ಗದ ಪಾಳೆಗಾರ ಮದಕರಿ ನಾಯಕನ ಅರಮನೆಯ ಕಾವಲುಗಾರನ ಪತ್ನಿ ಓಬವ್ವ. ನೂರಾರು ಶತ್ರು ಸೈನಿಕರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ವೀರ ಮರಣವನ್ನಪ್ಪಿದ ಓಬವ್ವ ಅವರು ಎಲ್ಲಾ ಮಹಿಳೆಯರಿಗೆ ಇವರು ಸ್ಫೂರ್ತಿಯಾಗಿದ್ದಾರೆ.

ತಾಯಿ ಚಾಮುಂಡಿ ತಾಯಿಯ ರೂಪ ತಾಳಿ ಒನಕೆಯನ್ನು ಅಸ್ತ್ರವನ್ನಾಗಿ ಮಾಡಿಕೊಂಡು ನೂರಾರು ಸೈನಿಕರನ್ನು ಬಡಿದ ಶಕ್ತಿಶಾಲಿ ಮಹಿಳೆ ಓಬವ್ವ. ಹಾಗಾಗಿ ಒನಕೆ ಓಬವ್ವ ಅವರ ರೀತಿಯಲ್ಲಿ ಇನ್ನೂ ಅನೇಕ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ದೇಶದಾದ್ಯಂತ ತಿಳಿಸುವ ಪ್ರಯತ್ನ ಮಾಡಬೇಕು ಎಂದರು.

ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಯಾವ ರೀತಿ ಸಮಾಜದಲ್ಲಿ ಎಲ್ಲರೂ ಸಮನಾಗಿ ಬದುಕಲು, ಅದರಲ್ಲೂ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲಿ ಭಾಗವಹಿಸಲು ಸಂವಿಧಾನದಲ್ಲಿ ದಾರಿಮಾಡಿ ಕೊಟ್ಟರು, ಇಂತಹ ಮಹಾನ್ ವ್ಯಕ್ತಿಯನ್ನು ಸದಾ ನೆನೆಯುತ್ತಾ ಮುಂದೆ ಸಾಗೋಣ ಎಂದು ತಿಳಿಸಿದರು.

ಜಯಂತಿ ಕಾರ್ಯಕ್ರಮದಲ್ಲಿ ಸಮುದಾಯದ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರು ಕೆಲವು ಸಮಸ್ಯೆಗಳ ಅಹವಾಲುಗಳನ್ನು ಸಚಿವರಿಗೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿರುವ ಸಮಸ್ಯೆಯನ್ನು ಆದಷ್ಟೂ ಬೇಗ ಪರಿಹರಿಸಲು ಸೂಚಿಸುತ್ತೇನೆ. ಹಾಗೇ ಇದುವರೆಗೆ ವಿದ್ಯುತ್ ಬಿಲ್ ಸುಮಾರು 11 ಲಕ್ಷವಾಗಿದ್ದು, ಅದನ್ನು ವಜಾ ಮಾಡಲು ತಿಳಿಸಿದ್ದೇನೆ. ಇನ್ನೂ ಒಂದು ತಿಂಗಳೊಳಗೆ ಜನರೇಟರ್ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಬಿ ರಾಜಣ್ಣ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್ ಅನುರಾಧ, ತಾಲೂಕು ಗ್ಯಾರಂಟಿ ಅಧ್ಯಕ್ಷರು ಸಿ ಜಗನ್ನಾಥ್, ಬಯಪ ಅಧ್ಯಕ್ಷ ವಿ ಶಾಂತಕುಮಾರ್ , ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Megha
the authorMegha

Leave a Reply

error: Content is protected !!