ಸಾರಿಗೆ ನೌಕರರ ವೇತನ ಸಂಬಂಧ ಸಮಸ್ಯೆ ನಿವಾರಿಸದಿದ್ದರೆ ನಾವು ಬೀದಿಗಿಳಿಯುತ್ತೇವೆ: ಸರ್ಕಾರಕ್ಕೆ ಕುಟುಂಬ ಸದಸ್ಯರ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು / ನೌಕರರ ವೇತನ ಭಾರಿ ಕಡಿಮೆ ಇದ್ದು, ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾಳಜಿವಹಿಸದಿದ್ದರೆ ಮುಂದಿನ ದಿನಗಳಲ್ಲಿ ನಾವು ಹೋರಾಟಕ್ಕೆ ಇಳಿಯ ಬೇಕಾಗುತ್ತದೆ ಎಂದು ನೌಕರರ ಕುಟುಂಬ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.
ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಮಾರ್ಚ್ 17-2023ರಲ್ಲಿ ಅಂದಿನ ಬಿಜೆಪಿ ರಾಜ್ಯ ಸರ್ಕಾರ ಶೇ.15ರಷ್ಟು ವೇತನ ಹೆಚ್ಚಳ ಮಾಡಿದ್ದು, ಅದರ 38 ತಿಂಗಳ ಹಿಂಬಾಕಿ ಕೊಡದೆ ಇಂದಿನ ಕಾಂಗ್ರೆಸ್ ಸರ್ಕಾರ ನೌಕರರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ.
ಅಲ್ಲದೆ 2024 ಜನವರಿ 1ರಿಂದ ಜಾರಿಗೆ ಬರುವಂತೆ ಮತ್ತೊಂದು ಬಾರಿ ವೇತನ ಹೆಚ್ಚಳವಾಗಬೇಕಿದ್ದು, ಇದನ್ನು ಕೊಡುವುದಕ್ಕೆ ಹಿಂದಿನ ಸರ್ಕಾರ ಸರಿಯಾಗಿ ಆದೇಶ ಮಾಡಿಲ್ಲ ಎಂಬ ಕುಂಟುನೆಪ ಹೇಳುತ್ತಿದೆ. ಇದರಿಂದ ಆರ್ಥಿಕವಾಗಿ ನೌಕರರ ಕುಟುಂಬ ನಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ಸರ್ಕಾರದ ಇಲಾಖೆಗಳು ಹಾಗೂ ಇತರೆ ನಿಗಮಗಳ ಅಧಿಕಾರಿಗಳು / ನೌಕರರು ಪಡೆಯುತ್ತಿರುವ ವೇತನದ ಶೇ.40ಕ್ಕೂ ಹೆಚ್ಚು ಕಡಿಮೆ ಪಡೆಯುತ್ತಿದ್ದಾರೆ.
ಈ ಎಲ್ಲವನ್ನು ಪರಿಗಣಿಸಿ 2023ರಲ್ಲಿ ನಡೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಇದೇ ಕಾಂಗ್ರೆಸ್ ನಾಯಕರು ಸಾರಿಗೆ ನೌಕರರಿಗೆ ಚುನಾವಣಾ ಪ್ರಣಾಳಿಯಲ್ಲಿ ಕೊಟ್ಟಿರುವ ಸಮಾನ ವೇತನ ಭರವಸೆಯನ್ನು ಈವರೆಗೂ ಈಡೇರಿಸದೆ ಮೀನಮೇಷ ಎಣಿಸುತ್ತಿದೆ. ಇದೆಲ್ಲವನ್ನು ನಾವು ಕಳೆದ ಎರಡೂವರೆ ವರ್ಷದಿಂದಲೂ ನೋಡುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ.
ಇನ್ನುಸಾರಿಗೆ ನಿಗಮಗಳಲ್ಲಿ ನೌಕರರಾಗಿರುವ ನಮ್ಮ ಕುಟುಂಬದ ಸದಸ್ಯರು ಈ ಸೌಲಭ್ಯಗಳನ್ನು ಮುಂದಿಟ್ಟುಕೊಂಡು ಶಾಂತಿಯುತ ಹೋರಾಟಕ್ಕೆ ಇಳಿದರೂ ಎಸ್ಮಾ ಹೆಸರಿನಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಈ ಸರ್ಕಾರ ಮುಂದಾಗಿದೆ. ಹೀಗಾಗಿ ನೌಕರರ ಹೊರತು ಪಡಿಸಿ ನಾವು ಅವರ ಕುಟುಂಬದ ಸದಸ್ಯರು ಈ ಬೇಡಿಕೆ ಈಡೇರಿಸಬೇಕು ಎಂದು ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಈ ಸಂಬಂಧ ಈಗಾಗಲೇ ಸಾರಿಗೆ ನೌಕರರ ಕುಟುಂಬ ಸದಸ್ಯರು ಗೌಪ್ಯವಾಗಿ ಸಭೆಗಳನ್ನು ಮಾಡುವುದಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಬಹುತೇಕ ಮುಂದಿನ ದಿನಗಳಲ್ಲಿ ತೀವ್ರರೀತಿಯಲ್ಲಿ ಹೋರಾಟ ಮಾಡುವುದು ಖಚಿತವಾಗಿದೆ.

ಇನ್ನು ಈ ಕುಟುಂಬ ಸದಸ್ಯರನ್ನು ಒಂದುಗೂಡಿಸುವ ಕೆಲಸಕ್ಕೆ ಈಗಾಗಲೇ ಒಬ್ಬರಿಗೊಬ್ಬರು ವಿಷಯಗಳನ್ನು ವಿನಿಯಮ ಮಾಡಿಕೊಳ್ಳುತ್ತಿದ್ದು, ಈ ಹೋರಾಟದ ನೇತೃತ್ವವನ್ನು ನೌಕರರ ಕುಟುಂಬ ಸದಸ್ಯರಲ್ಲಿ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಇರುವವರು ವಹಿಸಲಿದ್ದಾರೆ.
ಅಲ್ಲದೆ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವ ವೇತನ ಇತರೆ ಭತ್ಯೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಕೊಡಬೇಕು. ಅದನ್ನು ಕೊಡುವವರೆಗೂ ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ರವಾನಿಸುವುದಕ್ಕೂ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುವುದು ಪಕ್ಕವಾಗಿದೆ.
ಇನ್ನು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೇರೀತಿ ಮೊಂಡುತನ ಪ್ರದರ್ಶಿಸುತ್ತಿದ್ದರೆ ಹೋರಾಟದ ದಿಕ್ಕು ಯಾವ ಹಂತಕ್ಕೆ ತಲುಪುತ್ತದೋ ಗೊತ್ತಿಲ್ಲ. ಆದರೆ, ಇದರನ್ನು ಅರಿತು ಸರ್ಕಾರ ನೌಕರರಿಗೆ ಕೊಡಬೇಕಿರುವುದನ್ನು ಕೊಟ್ಟರೆ ಯಾವುದೇ ಸಮಸ್ಯೆ ಆಗದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೌಕರರ ಕುಟುಂಬ ಸದಸ್ಯರು ಹೋರಾಟಕ್ಕೆ ಇಳಿಯುವುದು ಪಕ್ಕವಾಗಿದೆ.
ಇನ್ನು ಇಲ್ಲಿ ನೌಕರರ ಯಾವುದೇ ಸಂಘಟನೆಗಳ ಮುಖಂಡರ ಮುಂದಾಳತ್ವದಲ್ಲಿ ಈ ಹೋರಾಟ ನಡೆಯುವುದಿಲ್ಲ ಎಂಬುದನ್ನು ಹೋರಾಟದ ರೂಪುರೇಷೆ ರೂಪಿಸುತ್ತಿರುವ ನೌಕರರ ಕುಟುಂಬದ ಸದಸ್ಯರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸಾರಿಗೆ ನೌಕರರ ಕುಟುಂಬ ಸದಸ್ಯರು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಚಳಿ ಬಿಡಿಸುವುದಂತ್ತು ಪಕ್ಕ.
Related








