CRIMENEWSಬೆಂಗಳೂರು

ಇಬ್ಬರು ಯುವತಿಯರ ಜೊತೆ ರಿಲೇಷನ್​ಶಿಪ್​ ನಲ್ಲಿದ್ದ ಯುವಕ ಆತ್ಮಹತ್ಯೆಗೆ ಶರಣು !

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಬ್ಬರು ಯುವತಿಯರ ಜೊತೆಗೆ ಜೀವನ ಆನಂದಿಸುತ್ತಿದ್ದ ಯುವಕನೊಬ್ಬ ದುಡುಕಿನ ನಿರ್ಧಾರ ತೆಗೆದುಕೊಂಡು ಇಹಲೋಕ ತ್ಯಜಿಸಿರುವ ಘಟನೆ ಯಲ್ಲೇನಹಳ್ಳಿಯ ರೆಡಿಯೆಂಟ್ ಶೈನ್ ಅಪಾರ್ಟ್ಮೆಂಟ್​ನಲ್ಲಿ ನಡೆದಿದೆ.

ಹೊಸೂರು ರಸ್ತೆಯಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಿ.ಪಿ.ವಿಷ್ಣು (39) ಎಂಬಾತನೆ ಆತ್ಮಹತ್ಯೆ ಮಾಡಿಕೊಂಡ ಯುವಕ. ಇದು ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯ ಯಲ್ಲೇನಹಳ್ಳಿಯಲ್ಲಿ ನ.7 ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯಲ್ಲೇನಹಳ್ಳಿಯ ರೆಡಿಯೆಂಟ್ ಶೈನ್ ಅಪಾರ್ಟ್ಮೆಂಟ್​ನಲ್ಲಿ ವಿಷ್ಣು ವಾಸವಿದ್ದ. ಈತ ಸೂರ್ಯಕುಮಾರಿ ಹಾಗೂ ಜ್ಯೋತಿ ಎಂಬ ಇಬ್ಬರು ಯುವತಿಯರ ಜೊತೆ ವಾಸವಿದ್ದ. ಇತ್ತೀಚೆಗೆ ಜ್ಯೋತಿ ಜೊತೆ ರಿಲೇಷನ್​ಶಿಪ್​ನಲ್ಲಿ ವಿಷ್ಣು ಇದ್ದ.

ಜ್ಯೋತಿಗೂ ಮುಂಚೆ ಸೂರ್ಯಕುಮಾರಿ ಜೊತೆ ರಿಲೇಷನ್​ಶಿಪ್​ನಲ್ಲಿದ್ದ. ಈ ವಿಚಾರಕ್ಕೆ ಈ ಮೂವರ ನಡುವೆ ಗಲಾಟೆ ಶುರುವಾಗಿದೆ. ಇದರಿಂದ ಬೇಸತ್ತು ಫ್ಲಾಟ್​ನ ಬಾತ್​ರೂಮ್​ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ವಿಷ್ಣು ಸೋದರ ಜಿಷ್ಣು ಎಂಬುವರು ಪ್ರಕರಣ ಸಂಬಂಧ ದೂರು ನೀಡಿದ್ದು, ಹುಳಿಮಾವು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎಫ್​ಐಆರ್​ನಲ್ಲಿ ಏನಿದೆ?: ಜಿಷ್ಣು ಅವರು ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ. ನನ್ನ ಅಣ್ಣನಾದ ವಿಷ್ಣು ಸಿ.ಪಿ. ಕಳೆದ 4 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಹೊಸೂರು ರಸ್ತೆಯಲ್ಲಿರುವ ಐಕೆಎಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಶ್ರೀಮತಿ ಸೂರ್ಯಕುಮಾರಿ ಮತ್ತು ಜ್ಯೋತಿ ಜೊತೆ ಬೆಂಗಳೂರು ನಗರದ ಯಲ್ಲೇನಹಳ್ಳಿಯ ನಂ:203, 2ನೇ ಮಹಡಿ, ರೆಡಿಯಂಟ್ ಶೈನ್ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದರು.

ನವೆಂಬರ್ 7ರ ಬೆಳಗಿನ ಜಾವ 5 ಗಂಟೆ ಸಮಯದಲ್ಲಿ ಸೂರ್ಯಕುಮಾರಿ ನನಗೆ ಕರೆ ಮಾಡಿದ್ದಾರೆ. ನಿಮ್ಮ ಅಣ್ಣ ಬಾತ್​ರೂಮ್​ನಲ್ಲಿ ನೇಣು ಬಿಗಿದುಕೊಂಡಿದ್ದ ಈಗ ಆತನ ಸೇಂಟ್ ಜಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇವೆ. ವೈದ್ಯರು ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು. ಆ ಕೂಡಲೇ ನಾನು ಸೇಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ಗುರುತಿಸಿದೆ.

ನವೆಂಬರ್ 8 ರಂದು ನಾನು ಸೂರ್ಯಕುಮಾರಿ ಜೊತೆ ಮಾತನಾಡಿದಾಗ, ವಿಷ್ಣು ಮತ್ತು ಜ್ಯೋತಿ ಎಂಬುವವರ ಜೊತೆ ಸಂಬಂಧದಲ್ಲಿರುವುದಾಗಿ ತಿಳಿಸಿರುತ್ತಾರೆ. ಈ ಮೊದಲು ವಿಷ್ಣು ಸೂರ್ಯಕುಮಾರಿ ಜೊತೆ ಸಂಬಂಧ ಹೊಂದಿದ್ದರಂತೆ. ಇದರಿಂದ ಜ್ಯೋತಿ ಹಾಗೂ ವಿಷ್ಣು ಮತ್ತು ಸೂರ್ಯಕುಮಾರಿ ನಡುವೆ ಗಲಾಟೆ ಉಂಟಾಗಿರುತ್ತದೆ. ಆದ್ದರಿಂದ ಸೂರ್ಯಕುಮಾ‌ರಿ ಮತ್ತು ಜ್ಯೋತಿ ಅವರು ವಿಷ್ಣು ಅವರ ಜೊತೆ ಗಲಾಟೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾಗಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

Megha
the authorMegha

Leave a Reply

error: Content is protected !!