ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಕೊರೊನಾ ಸೋಂಕು ಪೊಲೀಸರನ್ನಷ್ಟೇ ಅಲ್ಲದೆ ಜೈಲು ಹಕ್ಕಿಗಳಿಗೂ ವ್ಯಾಪಿಸುತ್ತಿದೆ.
ಒಂದು ವಾರದ ಹಿಂದಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲೂ ಕೊರೊನಾ ವ್ಯಾಪಿಸಿತ್ತು. ಈಗ ಮತ್ತೆ ಜೈಲಿನ ವಿಶೇಷ ಸೆಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಮೂವತ್ತು ಅಪರಾಧಿಗಳನ್ನು ಕೊರೊನಾ ಹೊಕ್ಕಿದೆ.
ಇತ್ತೀಚೆಗೆ ಜೈಲು ಸೇರಿದ್ದ ಅಂದಾಜು 400 ವಿಚಾರಣಾಧೀನ ಕೈದಿಗಳ ಪೈಕಿ 150 ಮಂದಿಗೆ ರ‍್ಯಾಂಡಮ್ ಟೆಸ್ಟ್ ಮಾಡಿದ್ದ ವೇಳೆ 30 ಕೈದಿಗಳಲ್ಲಿ ಸೋಂಕು ಇರುವುದು ಖಚಿತವಾಗಿದೆ. ಇದೀಗ ಸೋಂಕಿತರನ್ನು ಪ್ರತ್ಯೇಕ ಐಸೋಲೇಟೆಡ್ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರಿದ್ದ ಜೈಲಿನ ಭಾಗಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರವೂ ಪರಪ್ಪನ ಅಗ್ರಹಾರ ಜೈಲಿನ 20 ವಿಚಾರಣಾಧೀನ ಕೈದಿಗಳಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಇದೀಗ ಮತ್ತೆ ತಗುಲಿರುವುದು ಜೈಲು ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ. ರಾಜ್ಯದ ಜಿಲ್ಲೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವೈರಸ್ ರಣಕೇಕೆ ಮುಂದುವರಿದಿದೆ.