ಬೆಂಗಳೂರು: ರಾಜ್ಯದಲ್ಲಿ ಸಿಹಿ ಕಬ್ಬಿನ ಬೆಲೆಗಾಗಿ ಹೊತ್ತಿದ್ದ ಕಿಚ್ಚು ಇನ್ನೂ ಆರಿಲ್ಲ. ಈಗಾಗಲೇ ಟನ್ ಕಬ್ಬಿಗೆ ಸರ್ಕಾರ 3300 ರೂ. ಘೋಷಣೆ ಮಾಡಿದೆ. ಇದನ್ನು ಕೆಲ ರೈತರು ಒಪ್ಪಿದ್ದಾರೆ. ಆದರೆ ಇನ್ನೂ ಕೆಲವು ಅನ್ನದಾತರು ನಮಗೆ 3500 ರೂ. ಬೇಕೇ ಬೇಕು ಎಂದು ಪಟ್ಟು ಹಿಡಿದು ಹೋರಾಟ ತೀವ್ರಗೊಳಿಸಿದ್ದಾರೆ.

ಹೀಗಾಗಿ ವಿಜಯಪುರ, ಕಲಬುರ್ಗಿ ನಂತರ ಬಾಗಲಕೋಟೆ, ಬೀದರ್ನಲ್ಲಿ ರೈತರ ಹೋರಾಟ ಮುಂದುವರಿದಿದ್ದು, ಭಾರಿ ತೀವ್ರತೆ ಪಡೆದುಕೊಂಡಿದೆ.
ಬೆಳಗಾವಿಯ ಗುರ್ಲಪುರದ ಬಳಿಕ ಬಾಗಲಕೋಟೆಯಲ್ಲಿ ಶುರುವಾದ ರೈತಾಕ್ರೋಶ ಮೂರು ದಿನಗಳಾದ್ರೂ ತಣ್ಣಗಾಗಿಲ್ಲ. ಕಬ್ಬಿಗೆ 3,500 ರೂ. ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹಿಸಿ ನೂರಾರು ರೈತರು ಇಂದು ಮುಧೋಳದಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಕಸಬಾ ಜಂಬಗಿ ಕ್ರಾಸ್ನಲ್ಲಿ ಹೆದ್ದಾರಿ ತಡೆದು, ರಸ್ತೆ ಮೇಲೆ ಮುಳ್ಳು ಕಂಟಿಹಾಕಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ರಸ್ತೆ ಮಧ್ಯೆಯೇ ಅಡುಗೆ ಮಾಡಿ ರೈತರು ಧರಣಿ ಕುಳಿತಿದ್ದಾರೆ. ಸರ್ಕಾರ ಸ್ಪಂದಿಸುವವರೆಗೂ ನಾವು ಹೋರಾಟ ನಿಲ್ಲಿಸಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.
ಅಲ್ಲದೇ, ಪ್ರತಿಭಟನೆ ಮಾಡುತ್ತಿದ್ದ ಕಬ್ಬು ಬೆಳೆಗಾರರಿಗೆ ಕಸಬಾ ರೈತರು ಕೂಡ ಸಾಥ್ ನೀಡಿದ್ದಾರೆ. ಹೆದ್ದಾರಿ ತಡೆದಿದ್ದ ಪರಿಣಾಮ ಅನೇಕ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು. ಸ್ಥಳಕ್ಕೆ ಪೊಲೀಸ್ ವಾಹನ ಬಂದರೂ ಪಟ್ಟು ಬಿಡದೆ ರೈತರು ಪ್ರತಿಭಟನೆ ಮುಂದುವೆಸಿದ್ದರು.
ಬೀದರ್ನಲ್ಲೂ ಕಬ್ಬು ಬೆಳೆಗಾರರ ಪ್ರತಿಭಟನೆ ತಾರಕಕ್ಕೇರಿತ್ತು. ಕೈಯಲ್ಲಿ ಕಬ್ಬು ಹಿಡಿದು ಬಂದಿದ್ದ ರೈತರು ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿದರು. ಕೈಯಲ್ಲಿ ಸಿದ್ದರಾಮಯ್ಯ ಹಾಗೂ ಶಿವಾನಂದ್ ಪಾಟೀಲ್ ಅವ್ರ ಶ್ರದ್ಧಾಂಜಲಿ ಬ್ಯಾನರ್ ಹಿಡಿದು ಆಕ್ರೋಶ ಹೊರಹಾಕಿದರು.
ಇನ್ನು ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್ ಇಳಿಸುವಂತೆ ಸೂಚನೆ ಕೊಟ್ಟರು ಇಷ್ಟಾದ್ರೂ ರೈತರ ಆಕ್ರೋಶ ತಣ್ಣಗಾಗಲಿಲ್ಲ. ಇದು ಇನ್ನಷ್ಟು ತೀವ್ರಗೊಂಡಿದೆ.
Related










