ಬೆಂಗಳೂರು: ಅಂಗಡಿ ಮುಂಗಟ್ಟುಗಳ ಮಾಲೀಕರು ತ್ಯಾಜ್ಯಹಾಕಲು ಕಸದ ಬುಟ್ಟಿಯನ್ನು ಅಂಗಡಿಯ ಮುಂದೆ ಇಟ್ಟು, ಜವಾಬ್ದಾರಿಯುತವಾಗಿ ತ್ಯಾಜ್ಯ ವಿಸರ್ಜನೆ ಮಾಡಲು ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಸೂಚನೆ ನೀಡಿದರು.

ಇಂದು ಬೆಳಗ್ಗೆ ಹೆಬ್ಬಾಳ ವಿಭಾಗದ ವಾರ್ಡ್ 20, ಗಂಗಾನಗರ ಪ್ರದೇಶಕ್ಕೆ ಭೇಟಿ ನೀಡಿದ ಆಯುಕ್ತರು, ಆಟೋ ಮಸ್ಟರಿಂಗ್ ಪಾಯಿಂಟ್ ಹಾಗೂ ಪೌರಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಗಳನ್ನು ಪರಿಶೀಲಿಸಿ, ಅಗತ್ಯ ಸೂಚನೆಗಳನ್ನು ನೀಡಿದರು.
ಪರಿಶೀಲನೆ ವೇಳೆ ಮುಖ್ಯರಸ್ತೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿ, ಅಂಗಡಿ ಮಾಲೀಕರು ಕಸದ ಬುಟ್ಟಿಗಳನ್ನು ಇರಿಸಿ ತ್ಯಾಜ್ಯವನ್ನು ಜವಾಬ್ದಾರಿಯುತವಾಗಿ ವಿಸರ್ಜಿಸುವ ಬಗ್ಗೆ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಿದರು.
ಒತ್ತುವರಿ ತೆರವು: ಒ.ಎಮ್.ಬಿ.ಆರ್ ಲೇಔಟ್‌ನ 4ನೇ ಅಡ್ಡರಸ್ತೆಯ ಎಡ ಹಾಗೂ ಬಲ, ಎರಡೂ ಭಾಗಗಳ ಪಾದಚಾರಿ ಮಾರ್ಗಗಳ (900ಮೀ.*2) ಮೇಲೆ ಒತ್ತುವರಿ ಮಾಡಿ ಇರಿಸಲಾಗಿದ್ದ 20 ಬೀದಿ ಬದಿ ಅಂಗಡಿಗಳನ್ನು ಹಾಗೂ 12 ತಳ್ಳುಗಾಡಿಗಳನ್ನು ತೆರವುಗೊಳಿಸಿ, 0.4 ಕಿ.ಮೀ ಉದ್ದದ ಅನಧಿಕೃತ ಒ.ಎಫ್.ಸಿ ಕೇಬಲ್ ತೆರವುಗೊಳಿಸಲಾಯಿತು.
ಎಚ್.ಆರ್.ಬಿ.ಆರ್ ಲೇಔಟ್‌ನ 1ನೇ ಬ್ಲಾಕ್ ನ ಎಡ ಹಾಗೂ ಬಲ, ಎರಡೂ ಭಾಗಗಳ ಪಾದಚಾರಿ ಮಾರ್ಗಗಳ (300ಮೀ.*2) ಮೇಲೆ ಒತ್ತುವರಿ ಮಾಡಿದ್ದ 09 ತಳ್ಳುಗಾಡಿಗಳನ್ನು ತೆರವುಗೊಳಿಸಲಾಯಿತು. 35 ಸಿಬ್ಬಂದಿಗಳೊಂದಿಗೆ 10 ಟ್ರ್ಯಾಕ್ಟರ್ ಬಳಸಿ ತೀವ್ರ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು.
ನಿಗದಿತ ಅವಧಿಯಲ್ಲಿ ಎಲ್ಲ ಸಿಬ್ಬಂದಿಗಳಿಗೂ ವೇತನ ಪಾವತಿಸಿ: ವಾರ್ಡ್ ಗಳಲ್ಲಿನ ನಿರ್ವಹಣಾ ಕಾಮಗಾರಿಗಳ ಪರಿಶೀಲನೆ, ಸಾರ್ವಜನಿಕರಿಂದ ಸ್ವೀಕೃತಗೊಂಡ ದೂರುಗಳನ್ನು ಪರಿಹರಿಸಿ ವಿಲೇವಾರಿ ಮಾಡುವ ಮತ್ತು ಇನ್ನಿತರೆ ವಿಷಯಗಳ ಕುರಿತಂತೆ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಆಯುಕ್ತರು, ಶಿಕ್ಷಕರು, ಕಿರಿಯ ಆರೋಗ್ಯ ಪರಿವೀಕ್ಷಕರು ಸೇರಿದಂತೆ ಕೆಲವು ಸಿಬ್ಬಂದಿಗಳ ವೇತನ ಪಾವತಿ ಆಗದಿರುವುದನ್ನು ಗಮನಿಸಿ, ನಗರ ಪಾಲಿಕೆಯಲ್ಲಿನ ಎಲ್ಲಾ ಅಧಿಕಾರಿ / ನೌಕರರ ವೇತನವನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಲು ಸೂಚನೆ ನೀಡಿದರು.
ದೂರುಗಳ ತ್ವರಿತ ಇತ್ಯರ್ಥ: ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜೆ.ಪಿ.ಪಾರ್ಕ್ ನಲ್ಲಿ ಏರ್ಪಡಿಸಿದ್ದ ಬೆಂಗಳೂರು ನಡಿಗೆ ಕಾರ್ಯಕ್ರಮದಲ್ಲಿ ಬಂದಂತಹ ದೂರುಗಳನ್ನು ಹಾಗೂ ಪ್ರತಿ ಶುಕ್ರವಾರ ಆಯುಕ್ತರ ನೇತೃತ್ವದಲ್ಲಿ ನಡೆಯುವ ಫೋನ್ ಇನ್ ಕಾರ್ಯಕ್ರಮದಲ್ಲಿ ಬಂದಂತಹ ಅಹವಾಲುಗಳನ್ನು ಶೀಘ್ರವಾಗಿ ಪರಿಹರಿಸಲು ಸೂಚನೆ ನೀಡಿದರು.
ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟ ಕಾಪಾಡಿಕೊಂಡು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯುಕ್ತರು ಸಭೆಯಲ್ಲಿ ಅಭಿಯಂತರರಿಗೆ ಸೂಚನೆ ನೀಡಿದರು. ಕಾಮಗಾರಿಗಳ ಬಿಲ್ ಪಾವತಿ ಕುರಿತಂತೆ ಮಾಹಿತಿ ನೀಡಲು ಸೂಚಿಸಿದರು.
ಈ ವೇಳೆ ಅಪರ ಆಯುಕ್ತರಾದ ಲತಾ ಆರ್, ಜಂಟಿ ಆಯುಕ್ತರಾದ ಮೊಹಮ್ಮದ್ ನಯೀಮ್ ಮೊಮಿನ್, ಪಲ್ಲವಿ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.
Related










