ಬೆಂಗಳೂರು: ಇಂದು ಬೆಳಗ್ಗೆ 5 ಗಂಟೆಯಿಂದ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೃಹತ್ ಸಾಮೂಹಿಕ ಸ್ವಚ್ಛತಾ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಪರಿಶೀಲನೆ ನಡೆಸಿ, ಅಚ್ಚುಕಟ್ಟಾಗಿ ಸ್ವಚ್ಛತಾ ಕಾರ್ಯ ನಡೆಸಲು ಸೂಚಿಸಿದರು.

ಚಿಕ್ಕಪೇಟೆ ವಿಭಾಗದ ಆರ್.ವಿ.ರಸ್ತೆ, ಲಾಲ್‌ಬಾಗ್ ರಸ್ತೆಯಲ್ಲಿ ನಡೆಯುತ್ತಿರುವ ಸ್ವಚ್ಛತೆ ಕಾರ್ಯದಲ್ಲಿ ನಿರತರಾದ ಸ್ವಚ್ಛತೆ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರೊಂದಿಗೆ ಚರ್ಚೆ ನಡೆಸಿ ಆಯುಕ್ತರು, ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಾಕಾರ್ಮಿಕರ/ ಸ್ವಚ್ಛತಾ (ನಿಮ್ಮ ಪಾತ್ರ) ಶ್ಲಾಘನೀಯವೆಂದು ತಿಳಿಸಿದರು.
ಪೌರ ಕಾರ್ಮಿಕರೊಂದಿಗೆ ಸಂವಾದ ನಡೆಸಿ ಅವರ ಕುಂದುಕೊರತೆ ಆಲಿಸಿದರು. ಪೌರಕಾರ್ಮಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು, ಪರಿಕರ, ಮಳೆಗಾಲದಲ್ಲಿ ಆಶ್ರಯತಾಣ, ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಅತ್ಯಂತ ತ್ವರಿತ ಗತಿಯಲ್ಲಿ ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ಗಾಂಧಿನಗರದಲ್ಲಿ ನಡೆಯುತ್ತಿರುವ ಬೃಹತ್ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು ಸ್ವಚ್ಛತಾ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಪ್ರತಿ 15 ದಿನಗಳಿಗೊಮ್ಮೆ ಈ ರೀತಿಯ ಕಾರ್ಯ ಮುಂದುವರಿಸಿಕೊಂಡು ಹೋದಲ್ಲಿ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಸಹಾಯಕವಾಗುತ್ತದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಟ್ರಾವೆಲ್ಸ್ ನವರಿಗೆ ದಂಡ ವಿಧಿಸಿ: ಗಾಂಧಿನಗರದಲ್ಲಿ ನಡೆಯುತ್ತಿರುವ ಸ್ವಚ್ಛತಾ ಕಾರ್ಯ ಪರಿಶೀಲನೆ ನಡೆಸುವ ವೇಳೆ ಸುಮಾರು ಹೊತ್ತಿನಿಂದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಟ್ರಾವೆಲ್ಸ್ ನ್ನು ಗಮನಿಸಿದ ಆಯುಕ್ತರು ಸಂಚಾರಕ್ಕೆ ಅಡಚಣೆಯಾಗುತ್ತಿರುವುದರ ಜತೆಗೆ ಟ್ರಾವೆಲ್ಸ್ ಸಂಸ್ಥೆಯ ಕಚೇರಿಯವರಿಂದ ರಸ್ತೆಯಲ್ಲಿ ನೈರ್ಮಲ್ಯ ಹಾಳಾಗಿದ್ದು ಈ ಏಜನ್ಸಿಯವರಿಗೆ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
Related










