ಬೆಂಗಳೂರು: ಹೊರ ವರ್ತುಲ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟನ್ನು ವೈಜ್ಞಾನಿಕವಾಗಿ ರೂಪಿಸಿ ಎಂದು ಪೂರ್ವ ನಗರ ಪಾಲಿಕೆ ಅಪರ ಆಯುಕ್ತ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಹೇಳಿದ್ದಾರೆ.

ಇಂದು ನಗರ ಪಾಲಿಕೆಯ ಕೆ.ಆರ್.ಪುರಂ ವಲಯ-2ರ ವ್ಯಾಪ್ತಿಯ ಹೊರ ವರ್ತುಲ ರಸ್ತೆ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಚೆಳ್ಳಕೆರೆ, ಬಾಬುಸಾಪಾಳ್ಯ, ರಾಮಮೂರ್ತಿ ನಗರ ಹಾಗೂ ಕಲ್ಯಾಣ ನಗರದಲ್ಲಿರುವ ಹೊರ ವರ್ತುಲ ರಸ್ತೆಯ ಒಳಬರುವ ಮತ್ತು ಹೊರ ಹೋಗುವ ದಾರಿಗಳು ತುಂಬಾ ಕಿರಿದಾಗಿದ್ದು ಹಾಗೂ ಅವೈಜ್ಞಾನಿಕವಾಗಿ ರೂಪಿಸಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿರುವುದನ್ನು ಗಮನಿಸಿದ್ದೇನೆ.
ಹೀಗಾಗಿ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಮತ್ತು ನಗರ ಪಾಲಿಕೆ ಇಂಜಿನಿಯರಿಂಗ್ ಇಲಾಖೆ ಸಮನ್ವಯ ಸಾಧಿಸಿಕೊಂಡು ಹೊರ ವರ್ತುಲ ರಸ್ತೆಯ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಸರಿಯಾಗಿ ಅಭಿವೃದ್ಧಿಪಡಿಸುವ ಮೂಲಕ ವಾಹನ ದಟ್ಟಣೆ ತಗ್ಗಿಸಿ ಸುಗಮ ಸಂಚಾರಕ್ಕೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇನ್ನು ರಾಮಮೂರ್ತಿ ನಗರ ಜಂಕ್ಷನ್ ಪರಿಶೀಲಿಸಿದ ಅಪರ ಆಯುಕ್ತರು ಪ್ರಮುಖ ಜಂಕ್ಷನ್‌ಗಳಲ್ಲೇ ಹೆಚ್ಚು ದಟ್ಟಣೆ ಉಂಟಾಗುತ್ತಿದ್ದು, ಸರಿಯಾದ ಕ್ಯಾರೇಜ್ ವೇ, ಪಾದಚಾರಿ ಮಾರ್ಗ ಅಭಿವೃದ್ಧಿ, ಹಾಗೂ ಮಲ್ಟಿ ಮೋಡಲ್ ಕನೆಕ್ಟಿವಿಟಿ ಸೌಲಭ್ಯ ಕಲ್ಪಿಸುವ ಮೂಲಕ ಜಂಕ್ಷನ್ ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಇಂದು ನಡೆದ ಪರಿಶೀಲನೆಯಲ್ಲಿ ಮುಖ್ಯ ಅಭಿಯಂತರರಾದ ಕೃಷ್ಣಮೂರ್ತಿ, ಕಾರ್ಯಪಾಲಕ ಅಭಿಯಂತರರಾದ ಭಾಗ್ಯಮ್ಮ, ಗಿರೀಶ್ ಸಂಚಾರಿ ವೃತ್ತ ನಿರೀಕ್ಷಕರು ಹಾಗೂ ಇನ್ನಿತರೆ ಅಧಿಕಾರಿಗಳು ಇದ್ದರು.
Related










