ಮೈಸೂರು: ರೈತರ ಕುಂದು ಕೊರತೆ ಸಭೆ ನಡೆಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದ ಜಯಪುರ ಹೋಬಳಿ ಘಟಕದ ವತಿಯಿಂದ ಜಯಪುರದ ನಾಡಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.

ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮ ಕಂದಾಯ ಇಲಾಖೆಯ ಕಚೇರಿಗೆ ಪದೇಪದೇ ಅಲೆದಾಡುತ್ತಿದ್ದಾರೆ. ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಕಾರಣ ನಾಡಕಚೇರಿಯಲ್ಲಿ ರೈತರ ಜಮೀನಿಗೆ ಸಂಬಂಧಪಟ್ಟಂತೆ ದಾಖಲೆಗಳನ್ನು ಅವರಿಗೆ ನೀಡದೆ ವಿನಃ ಕಾರಣ ಜಮೀನುಗಳ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಖಾತೆ ಮಾಡಿಕೊಡಲು ಕೆಲವೊಂದು ಗ್ರಾಮ ಲೆಕ್ಕಿಗರು ಮಧ್ಯವರ್ತಿಗಳನ್ನು ಬಿಟ್ಟು 5,000 ದಿಂದ 10,000 ರೂ.ಗಳವರಗೆ ಲಂಚ ಕೇಳುತ್ತಿದ್ದು ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತರು 40-50 ವರ್ಷಗಳಿಂದಲೂ ಜಮೀನುಗಳನ್ನು ಉಳುಮೆ ಮಾಡಿಕೊಂಡು ಬಂದಿದ್ದು ಅಂತಹ ಜಮೀನುಗಳಿಗೆ ಸಾಗುವಳಿ ನೀಡಲು ಸರ್ಕಾರ ಈಗಾಗಲೇ ಆದೇಶ ನೀಡಿದ್ದರೂ ಅಧಿಕಾರಿಗಳು ಸಾಗುವಳಿ ಚೀಟಿ ನೀಡಲು ಕೆಲವೊಂದು ಕಾರಣ ಹೇಳಿ ಸಾಗುವಳಿ ಚೀಟಿ ನೀಡದೆ ತಡ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ತಿಳಿಸಿರುವಂತೆ ಒಟ್ಟು ಐದು ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ ಇದ್ದರೂ ಅವರಿಗೆ ಸಾಗುವಳಿ ನೀಡಬೇಕೆಂದು ಆದೇಶ ಮಾಡಿದೆ ಇದನ್ನು ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದು ಕೂಡಲೇ ಈ ಭಾಗದ ರೈತರಿಗೆ ಸಾಗುವಳಿ ಚೀಟಿಯಲ್ಲಿ ನೀಡಲು ಸೂಚಿಸಬೇಕು.
ಅತಿಯಾದ ಮಳೆಯಿಂದ ಆಗುವ ಪ್ರಕೃತಿ ವಿಕೋಪದಿಂದ ಬೆಳೆನಷ್ಟ ಆದಾಗ ಕಂದಾಯ ಇಲಾಖೆಯವರು ತೋಟಗಾರಿಕೆ ಅಥವಾ ಕೃಷಿ ಇಲಾಖೆಯವರ ಜತೆಗೂಡಿ ಜಂಟಿಯಾಗಿ ಸರ್ವೇ ಮಾಡಬೇಕು. ಆದರೆ ಆ ಇಲಾಖೆಗಳ ಜತೆ ಹೊಂದಾಣಿಕೆಯಾಗಿ ಮಾಡದೆ ನಿರ್ಲಕ್ಷ ಮಾಡುತ್ತಿರುವುದರಿಂದ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ಸಿಗುತ್ತಿಲ್ಲ ಹಾಗೂ ಕೆಲವೊಂದು ಕಡೆ ಬೆಳೆ ನಷ್ಟ ಆಗಿಲ್ಲ ಎಂದು ತಪ್ಪಾಗಿ ವರದಿಯು ಕೂಡ ಆಗುತ್ತಿದೆ ಆದ್ದರಿಂದ ಮುಂದೆ ಈ ರೀತಿ ಆಗದಂತೆ ಸರಿಪಡಿಸಿಕೊಳ್ಳಬೇಕು.
ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ ಆಸ್ಪತ್ರೆಗೆ ಪೂರ್ಣಾವಧಿಗೆ ಒಂದು ಆಂಬುಲೆನ್ಸ್ ಇರಬೇಕು ಮತ್ತು ವಿದ್ಯುತ್ ಇಲ್ಲದಿದ್ದಾಗ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ. ಆದ್ದರಿಂದ ಒಂದು ಜನರೇಟರ್ ಅಳವಡಿಸಬೇಕೆಂದು ಮತ್ತು ಇನ್ನಿತರ ಸಮಸ್ಯೆ ಕುರಿತು ಈಗಾಗಲೇ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಈ ಕುರಿತು ಸಭೆ ನಡೆಸಬೇಕೆಂದು ತಹಸೀಲ್ದಾರ್ ಸಭೆಯಲ್ಲಿ ಕಳೆದ ಎಂಟು ತಿಂಗಳ ಹಿಂದೆಯೇ ಉಪಾ ತಹಸೀಲ್ದಾರ್ ರವರಿಗೆ ತಹಸೀಲ್ದಾರ್ ಸೂಚಿಸಿದ್ದರು ಸಭೆ ನಡೆಸದೆ ನಿರ್ಲಕ್ಷ್ಯ ಮಾಡಿದ್ದಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಲೇಔಟ್ಗಳನ್ನು ನಿಯಮಾನುಸಾರ ಮಾಡಿಲ್ಲ ಸರ್ಕಾರಿ ಕರಾಬು ಹಾಗೂ ಕಾಲುವೆಗಳನ್ನು ಬಂಡವಾಳ ಶಾಹಿಗಳು ಅಧಿಕಾರಿಗಳ ಜೊತೆ ಸಾಮೀಲಾಗಿ ಅಕ್ರಮ ಮಾಡಿದ್ದಾರೆ. ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಕಠಿಣ ನಿಯಮವನ್ನು ಜಾರಿ ಗೊಳಿಸಿದ್ದಾರೆ ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ ಆದ್ದರಿಂದ ಇದನ್ನು ಸರಳೀಕರಣ ಮಾಡಬೇಕು ತಂದೆ ಅಥವಾ ತಾಯಿಯಿಂದ ಈಗಾಗಲೇ ಕಟ್ಟಿರುವ ಮನೆಯನ್ನು ವಿಭಾಗ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಮತ್ತು ಮನೆಗೆ ಮತ್ತೊಂದು ಮೀಟರ್ ಅಳವಡಿಸಲು ಪಂಚಾಯಿತಿಯಿಂದ ನಿರಾಪೇಕ್ಷಣ (NOC) ಪತ್ರವನ್ನು ನೀಡಬೇಕು.
ಪ್ರತಿ ಗ್ರಾಮಗಳಲ್ಲೂ ಒಂದು ಸ್ಮಶಾನ ಜಾಗ ಇರುತ್ತದೆ. ಆದರೆ, ಅದನ್ನು ಗುರುತಿಸಿ ಅಭಿವೃದ್ಧಿಪಡಿಸದೆ ನಿರ್ಲಕ್ಷ ಮಾಡಿರುತ್ತಾರೆ ಇದರಿಂದ ಜಮೀನುಗಳು ಇಲ್ಲದ ವ್ಯಕ್ತಿಗಳು ಸತ್ತರೆ ಅವರನ್ನು ಊಳಲು ಸಮಸ್ಯೆ ಆಗುತ್ತಿದೆ. ಜಿಲ್ಲೆಯ ಜಯಪುರ ಹೋಬಳಿ ವಿಸ್ತೀರ್ಣ ದೊಡ್ಡದ್ದಿರುವ ಕಾರಣ ರಾಗಿ ಖರೀದಿ ಕೇಂದ್ರವನ್ನು ಜಯಪುರದಲ್ಲಿ ತೆರೆಯಬೇಕು ಎಂದು ಒತ್ತಾಯಿಸಿದರು.
ಕೆಇಬಿ ಯವರು ಹಗಲು ಸಮಯದಲ್ಲಿ ಪೂರ್ತಿ ಏಳು ಗಂಟೆ ವಿದ್ಯುತ್ತನ್ನು ನೀಡಬೇಕು ಏಕೆಂದರೆ ರಾತ್ರಿ ಸಮಯದಲ್ಲಿ ಈಗಾಗಲೇ ನಾಡಿನತ್ತ ಬಂದು ಪ್ರಾಣಿಗಳು ಕಾಡಂಚಿನ ರೈತರ ಬಲಿ ಪಡೆದುಕೊಳ್ಳುತ್ತೇವೆ, ಆದ್ದರಿಂದ ಪೂರ್ತ ಬೆಳಗಿನ ಸಮಯದಲ್ಲೇ ರೈತರ ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ನೀಡಬೇಕು.
ಇನ್ನು ಟಿಸಿ ಸುಟ್ಟುಹೋದರೆ ಅದನ್ನು ಅಳವಡಿಸಲು ಲಂಚ ಕೇಳುತ್ತಿದ್ದಾರೆ ಇದನ್ನು ನಿಲ್ಲಿಸಬೇಕು ಮತ್ತು ಮಳೆ ಗಾಳಿ ಪ್ರಕೃತಿ ಕೋಪದಿಂದ ರೈತನ ಜಮೀನಿನಲ್ಲಿ ಇದ್ದ ಕಂಬಗಳು ಮುರಿದು ಹೋದರೆ ಬಿದ್ದು ಹೋದರೆ ಅದನ್ನು ಸರಿಪಡಿಸಲು ಹಾಗೂ ಕಂಬ ಹಾಕಲು 20 ಸಾವಿರ ರೂ. 30 ಸಾವಿರ ರೂ.ಗಳವರೆಗೆ ಲಂಚ ಕೇಳುತ್ತಿದ್ದಾರೆ. ಹೊಸ ಸಂಪರ್ಕ ಕಲ್ಪಿಸಲು ಹಣ ಕಟ್ಟಿಸಿಕೊಂಡು ಅವರಿಗೆ ಆರ್ ಆರ್ ನಂಬರ್ ನೀಡದೆ ತೊಂದರೆ ನೀಡುತ್ತಿದ್ದಾರೆ. ಇದನ್ನು ಈ ಕೂಡಲೇ ಸರಿಪಡಿಸಬೇಕು ಮತ್ತು ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುವ ಕುಂದು ಕೊರತೆ ಸಭೆಗೆ ರೈತರಿಗೆ ಹೆಚ್ಚಿನ ರೀತಿಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು.
ಪಶು ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಕಾರಣ ಸುತ್ತಮುತ್ತಲ ಗ್ರಾಮಗಳಲ್ಲಿ ರೈತರು ಹಸುಗಳನ್ನು ಸಾಕಲು ಬೇಸರ ವ್ಯಕ್ತಪಡಿಸಿದ್ದಾರೆ, ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಹಸು ಮೇಕೆ ಕುರಿಗಳ ಮೇಲೆ ಚಿರತೆ, ಹುಲಿಗಳು ದಾಳಿ ಮಾಡಿದಾಗ ಅಂತಹ ಪ್ರಾಣಿಗಳನ್ನು ಶೀಘ್ರದಲ್ಲೆ ಪೋಸ್ಟ್ ಮಾರ್ಟಂ ಮಾಡಿದರೆ ಮಾತ್ರ ರೈತರಿಗೆ ಪರಿಹಾರ ಸಿಗುತ್ತದೆ. ಅಂತಹ ಸಮಯಗಳಲ್ಲಿ ವೈದ್ಯರು ಸರಿಯಾಗಿ ಸಹಕರಿಸದೆ ನಿರ್ಲಕ್ಷ ಮಾಡುತ್ತಿದ್ದಾರೆ ಹಾಗೂ ಹಸುಕರುಗಳು ಆರೋಗ್ಯ ತಪ್ಪಿದರೆ ಅಂತಹ ಸಮಯದಲ್ಲಿ ಔಷಧಗಳನ್ನು ಇಲಾಖೆ ವತಿಯಿಂದ ನೀಡಬೇಕು. ನೀಡದೇ ಇರುವ ಕಾರಣ ಖಾಸಾಗಿ ಅವರಿಗೆ ಒಂದಕ್ಕೆ ಎರಡು ಪಟ್ಟು ಹಣ ಕೊಟ್ಟು ಹಸುಗಳನ್ನು ಸಾಕಲು ಕಷ್ಟವಾಗುತ್ತಿದೆ.
ಕಾಡಂಚಿನ ರೈತರಿಗೆ ಕಾಡು ಪ್ರಾಣಿಗಳಿಂದ ಬೆಳೆ ನಾಶವಾಗುತ್ತಿದ್ದು, ಸಂಪೂರ್ಣ ಬೆಳೆ ನಷ್ಟ ಪರಿಹಾರ ಕೊಡದೆ ಬಿಕ್ಸಾ ರೂಪದ ಪರಿಹಾರ ಕೊಡುತ್ತಿದ್ದು,ಇದು ರೈತರ ಒಕ್ಕಲೆಬ್ಬಿಸುವ ಕಾರ್ಯವಾಗಿದೆ, ಪರಿಹಾರದ ಬಗ್ಗೆ ಸರ್ಕಾರದ ಗಮನ ಸೆಳೆದು ನೈಜ ಪರಿಹಾರ ಕೊಡಬೇಕು ಕಾಡು ಪ್ರಾಣಿಗಳಿಂದ ರೈತರ ಪ್ರಾಣಕ್ಕೆ ಕುತ್ತು ಬರುತ್ತಿದೆ ಆದ್ದರಿಂದ ರೈತರು ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಕೂಡಲೇ ಆ ಭಾಗದಲ್ಲಿ ಹುಲಿ ಚಿರತೆ ಸೆರೆಹಿಡಿಯಲು ಬೋನುಗಳನ್ನು ಇಟ್ಟು ರೈತರ ರಕ್ಷಣೆ ಮಾಡಬೇಕು.
ಈ ಎಲ್ಲಾ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಇಲಾಖೆಯವರನ್ನು ಒಳಗೊಂಡಂತೆ ಉಪ ತಹಸೀಲ್ದಾರ್ ಅವರು ಸಭೆ ನಡೆಸಬೇಕು ಮತ್ತು ಸಭೆಯ ದಿನಾಂಕವನ್ನು ಈಗಲೇ ಪ್ರಕಟಿಸಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಯಪುರ ಹೋಬಳಿ ಘಟಕದ ವತಿಯಿಂದ ಒತ್ತಾಯ ಪತ್ರ ಸಲ್ಲಿಸಿದ್ದಾರೆ.
ಒತ್ತಾಯ ಪತ್ರ ಸ್ವೀಕರಿಸಿದ ಉಪತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಸಂಬಂಧಪಟ್ಟ ಇಲಾಖೆಯ ಎಲ್ಲ ಅಧಿಕಾರಿಗಳನ್ನು ಒಳಗೊಂಡಂತೆ ತಹಸೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ಡಿಸೆಂಬರ್ 6 ರಂದು ಸಭೆ ನಡೆಸುತ್ತೇವೆ ಎಂದು ಒಪ್ಪಿಕೊಂಡ ನಂತರ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಜಯಪುರ ಹೋಬಳಿಯ ಅಧ್ಯಕ್ಷ ಚುಂಚುರಾಯನಹುಂಡಿ ನಂಜುಂಡಸ್ವಾಮಿ, ತಾಲೂಕು ಕಾರ್ಯದರ್ಶಿ ದೊಡ್ಡ ಕಾಟೂರು ಮಹದೇವಸ್ವಾಮಿ, ನಾಗೇಶ್, ಹೊಮರಗಳ್ಳಿ ಕೆಂಡಗಣ್ಣ ಸ್ವಾಮಿ, ಚುಂಚುರಾಯನಹುಂಡಿ ಗಿರೀಶ್, ಸೋಮ,ಸಿದ್ದರಾಮ, ಧನಗಳ್ಳಿ ಕೆಂಡಗಣ್ಣಪ್ಪ, ಮಾರ್ಬಳ್ಳಿ ಶಿವಣ್ಣ, ಬರಡ ನಪುರ ಮಹೇಶ್, ಕೆಂಪನಂಜಪ್ಪ, ಗಿರೀಶ್, ಶಿವಣ್ಣ, ಮದ್ದೂರು ಮಲ್ಲೇಶ್, ಹರೀಶ್, ನಾರಾಯಣಿ, ಸಿದ್ದಲಿಂಗಪ್ಪ, ಸೋಮಣ್ಣ,ಕಲ್ಲಹಳ್ಳಿ ಕುಮಾರ್, ಚೆಲುವರಾಜ್, ಅನಗಳ್ಳಿ ಶಿವರಾಜು, ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
Related










