NEWSಕೃಷಿನಮ್ಮಜಿಲ್ಲೆ

ಭತ್ತ ಖರೀದಿ ಕೇಂದ್ರಗಳ ತುರ್ತಾಗಿ ತೆರೆಯಲು ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯ

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ಭತ್ತಕ್ಕೆ ಬೆಂಬಲ ಬೆಲೆಯೊಂದಿಗೆ ಹೆಚ್ಚುವರಿಯಾಗಿ 500 ರೂ. ಪ್ರೋತ್ಸಾಹ ಧನ ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ತುರ್ತಾಗಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಈ ಸಂಬಂಧ ಇಂದು ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆ ಆಗಿರುವುದರಿಂದ ಮೈಸೂರು, ಮಂಡ್ಯ ಜಿಲ್ಲೆಯಾದ್ಯಂತ ಹೆಚ್ಚಿನ ರೈತರು ಭತ್ತವನ್ನು ಬೆಳೆದಿದ್ದಾರೆ, ಕೇಂದ್ರ ಸರ್ಕಾರ ಕ್ವಿಂಟಾಲ್ ಭತ್ತಕ್ಕೆ 2362 ರೂ. ಬೆಂಬಲ ಬೆಲೆ ಘೋಷಿಸಿದೆ. ಆದರೆ ಈ ಬೆಲೆ ರೈತ ವ್ಯವಸಾಯ ಮಾಡಿದ ಖರ್ಚಿಗೂ ಕೂಡ ಸಾಲದು ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಹೀಗಾಗಿ ಈಗಾಗಲೇ ಕೇರಳ, ಒಡಿಸ್ಸಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವಂತೆ ಕ್ವಿಂಟಾಲ್ ಭತ್ತಕ್ಕೆ ಪ್ರೋತ್ಸಾಹ ಧನವಾಗಿ 500 ರೂ. ಬೆಂಬಲ ಬೆಲೆ ಘೋಷಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳಿವೆಯಾದರೂ ಅವು ತೆರೆಯುವ ಮೊದಲೇ ರೈತರು ಸಾಲದ ಕಿರುಕುಳ ತಾಳಲಾರದೇ ಸ್ವಾಭಿಮಾನಕ್ಕೆ ಅಂಜಿ ಭತ್ತವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಮತ್ತೆ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ, ಆದ್ದರಿಂದ ಭತ್ತದ ಕಟಾವು ಆರಂಭವಾಗುವ 20 ದಿನಗಳ ಮೊದಲೇ ಖರೀದಿ ಕೇಂದ್ರಗಳನ್ನು ತೆರೆದು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ದೇವರಾಜ್‌ ಮನವಿ ಮಾಡಿದರು.

ರೈತರು ಸರ್ಕಾರ ಘೋಷಿಸಿರುವ ಕ್ವಿಂಟಾಲ್ ಭತ್ತವನ್ನು 2369 ರೂ.ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಾರದು ಹಾಗೂ ಬಂಡವಾಳ ಶಾಹಿಗಳು, ದಲ್ಲಾಳಿಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರಿಂದ ಭತ್ತ ಖರೀದಿಸಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಆತ್ತಹಳ್ಳಿ ಲಿಂಗಣ್ಣ, ಅರುಣ್, ಕುಮಾರ್, ಮಧು, ಕೇತುಪುರ ಗಿರಿರಾಜ್, ಕುಂತನಹಳ್ಳಿ ಸ್ವಾಮಿ, ಕುಳ್ಳೇಗೌಡ, ಮೇಗಳಕೊಪ್ಪಲು ಕುಮಾರ್, ಬಸವನಹಳ್ಳಿ ಮಹೇಂದ್ರ, ಬನ್ನೂರು ಶ್ರೀನಿವಾಸ್ ಇದ್ದರು.

Megha
the authorMegha

Leave a Reply

error: Content is protected !!