ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಚಾಲಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳನ್ನು ವಿಭಾಗದಿಂದ ವಿಭಾಗಗಳಿಗೆ ವರ್ಗಾವಣೆ ಮಾಡದಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಆದೇಶ ಹೊರಡಿಸಿದ್ದಾರೆ.

ನಿಗಮದ ಕೆಲವೊಂದು ವಿಭಾಗಗಳಲ್ಲಿ ಚಾಲಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳ ತೀವ್ರ ಕೊರತೆ ಇದ್ದರೂ ಸಹ ವಿಭಾಗದಿಂದ ವಿಭಾಗಕ್ಕೆ ವರ್ಗಾವಣೆ ಮಾಡುತ್ತಿರುವುದರಿಂದ ಕೆಲವೊಂದು ವಿಭಾಗಗಳಲ್ಲಿ ಚಾಲನಾ ಹಾಗೂ ತಾಂತ್ರಿಕ ಸಿಬ್ಬಂದಿಗಳ ಮಂಜೂರಾತಿ ಹಾಗೂ ಕಾರ್ಯ ನಿರ್ವಹಣೆಗಳಲ್ಲಿ ಅಸಮತೋಲನಾ ಉಂಟಾಗುತ್ತಿದೆ. ಹೀಗಾಗಿ ವರ್ಗಾವಣೆ ಮಾಡಬಾರದು ಎಂದು ತಿಳಿಸಿದ್ದಾರೆ.
ಈ ಸಂಬಂಧ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾರ್ಯಾಚರಣೆ) ಹಾಗೂ ಮುಖ್ಯ ಯಾಂತ್ರಿಕ ಅಭಿಯಂತರರಿಗೆ ನ.17ರಂದು ಆದೇಶ ಹೊರಡಿಸಿದ್ದಾರೆ.
ಪ್ರತಿ ದಿನ ಚಾಲಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳ ವಿಭಾಗದಿಂದ ವಿಭಾಗಗಳ ಹಾಗೂ ಅಂತರ ನಿಗಮ ವರ್ಗಾವಣೆಗೂ ಸಹ ವಿವಿಧ ಪ್ರಾಧಿಕಾರದ ಮೂಲಕ ತೀವ್ರ ಒತ್ತಡಗಳು ಬರುತ್ತಿರುತ್ತವೆ. ಇದರಿಂದಾಗಿ ಕಾರ್ಯ ನಿರ್ವಹಣೆಯಲ್ಲಿ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಅಲ್ಲದೆ ಅಂತರ ನಿಗಮ ವರ್ಗಾವಣೆ ಮಾಡಲು ಸಹ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸುತ್ತಿರುವುದರಿಂದ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶವರೆಗೆ ಕೇಂದ್ರ ಕಚೇರಿಯಿಂದ ಚಾಲಕ, ಚಾಲಕ-ಕಂ-ನಿರ್ವಾಹಕ, ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳ ವರ್ಗಾವಣೆಗಳನ್ನು ಮಾಡದಂತೆ ತಡೆಯಿಡಿಯಲು ಎಂಡಿ ಆದೇಶಿಸಿದ್ದಾರೆ.

Related










