ಸಾರಿಗೆ ನೌಕರರ ಸಂಘಟನೆಗಳ ಬೇಡಿಕೆಗಳ ಕುರಿತು ಚರ್ಚಿಸಲು ವಿಧಾನಸೌಧದಲ್ಲಿ ನ.26ರಂದು ಸಿಎಂ ಅಧ್ಯಕ್ಷತೆಯಲ್ಲಿ ಸಭೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಕಾರ್ಮಿಕ ಸಂಘಟನೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಲು ಇದೇ ನವೆಂಬರ್ 26ರಂದು ಸಿಎಂ ಅಧ್ಯಕ್ಷತೆಯಲ್ಲಿ ನೌಕರರ ಸಂಘಟನೆಗಳ ಸಭೆಯನ್ನು ವಿಧಾನಸೌಧದಲ್ಲಿ ಕರೆಯಲಾಗಿದೆ ಎಂದು KSRTC ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ತಿಳಿಸಿದ್ದಾರೆ.

ನಿನ್ನೆ ಅಂದರೆ ಬುಧವಾರ (ನ.19) ಸಭೆ ನಡೆಯುವ ಸಂಬಂಧ ಎಂಡಿ ಮಾಹಿತಿ ನೀಡಿದ್ದು, ಸಭೆ ನಡೆಯುವ ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಹೇಳಿದ್ದರು. ಅದರಂತೆ ಇಂದು (ಗುರುವಾರ ನ.20) ಸ್ಥಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಮೂರನೇ ಮಹಡಿಯ 313ನೇ ಕೊಠಡಿಯಲ್ಲಿ ಸರ್ಕಾರದ ನಿರ್ದೇಶನದಂತೆ ನಿಗದಿಪಡಿಸಿರುವ ಸಭೆಗೆ ಎಲ್ಲ ಸಂಘಟನೆಗಳ ತಲಾ ಇಬ್ಬರು ಪದಾಧಿಕಾರಿಗಳು ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.
ಈ ಸಭೆ ಅಂದು ಸಂಜೆ 4 ಗಂಟೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯೊಂದಿಗೂ ಹಾಗೂ ಮಧ್ಯಾಹ್ನ 4.30ಕ್ಕೆ ನೌಕರರ ಒಕ್ಕೂಟದೊಂದಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 4ರಂದು ಹೈ ವೋಲ್ಟೆಜ್ ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಇದೇ ರೀತಿ ಬೇಡಿಕೆಗಳ ಕುರಿತು ಜುಲೈ 4ರಂದು ಸಂಜೆ ಹೈ ವೋಲ್ಟೆಜ್ ಸಭೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದಿತ್ತು. ಈ ಸಭೆಗಳು ಸೇರಿದಂತೆ ಒಟ್ಟು ಸಿಎಂ ಅಧ್ಯಕ್ಷತೆಯಲ್ಲಿ 4 ಸೌಎಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿ. ಆದರೆ ನ.26ರಂದು ನಡೆಯುತ್ತಿರುವ 5ನೇ ಸಭೆಯಲ್ಲಾದರೂ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ ಎಂಬ ವಿಶ್ವಾಸದಲ್ಲಿ ಸಂಘಟನೆಗಳು ಇವೆ.
ಅದರಂತೆ ನ.26 ರಂದು ಸಿಎಂ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಾರಿಗೆ ನೌಕರರ ವೇತನಕ್ಕೆ ಸಂಬಂಧಪಟ್ಟಂತೆ ಅಂತಿಮಾ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಬಹುತೇಕ ಖಚಿತವಾಗಿದೆ ಎದೇ ಸಂಘಟನೆಗಳ ಎಲ್ಲ ಪದಾಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇನ್ನು ಚುನಾವಣೆ ಸಂದರ್ಭದಲ್ಲಿ ತಾವೇ ನೌಕರರಿಗೆ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಜಾರಿ ಮಾಡಿ ಎಂಬ ಬೇಡಿಕೆಗಳನ್ನು ಬಹುತೇಕ ಎಲ್ಲ ಸಂಘಟನೆಗಳ ಮುಖಂಡರು ಸಿಎಂ ಮುಂದಿಡಲಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಯಂತೆ ಸರಿ ಸಮಾನ ವೇತನ ಜಾರಿಮಾಡಲು ಒಪ್ಪಿಗೆ ಸೂಚಿಸುವುದು ಕೂಡ ಬಹುತೇಕ ಖಚಿತ ಎನ್ನಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರಿಗೆ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಪದಾಧಿಕಾರಿಗಳು ಕೂಡ ಇದನ್ನೇ ಮಾಡಬೇಕು ಎಂದು ಸಿಎಂ ಅವರನ್ನು ಈಗಾಗಲೇ ಒತ್ತಾಯಿಸಿದ್ದಾರೆ.
ಬೇಡಿಕೆಗಳೇನು?: ನಾಲ್ಕೂ ನಿಗಮಗಳ ನೌಕರರಿಗೆ 2020ರ ಜನವರಿ 1ರಿಂದ ಅನ್ವಯವಾಗಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳ ಆಗಬೇಕಿರುವ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ.
ಈ ಸಂಬಂಧ ಈ ಹಿಂದೆಯೇ ಜಂಟಿ ಕ್ರಿಯಾ ಸಮಿತಿ ಹಾಗೂ ಸಾರಿಗೆ ನೌಕರರ ಒಕ್ಕೂಟವೂ ನೌಕರರ ವೇತನ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆ ಈಡೇರಿಕೆ ಬಗ್ಗೆ ಸಚಿವರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳು ಸೇರಿದಂತೆ ಪ್ರಮುಖರಿಗೆ ಮನವಿ ಸಲ್ಲಿಸಿದ್ದರು.
ಕಳೆದ 2020ರ ಜನವರಿ 1ರಿಂದ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಇನ್ನು ನೌಕರರಿಗೆ ಸಿಕ್ಕಿಲ್ಲ. ಜತೆಗೆ ಈಗಾಗಲೇ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳದ ಅವಧಿ ಮುಗಿದು 21 ತಿಂಗಳು ಕಳೆದರೂ ಆ ಬಗ್ಗೆಯೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.
Related









