NEWSನಮ್ಮರಾಜ್ಯಲೇಖನಗಳು

BMTC ಭ್ರಷ್ಟ ಅಧಿಕಾರಿಗಳಿಗೆ ಲಂಚ ಕೊಡಲಾಗದ ಹಿರಿಯ ನಿರ್ವಾಹಕನಾದ ನಾನು ರಾಜೀನಾಮೆ ಕೊಡುತ್ತಿದ್ದೇನೆ ಉತ್ತರ ಕೊಟ್ಟು ರಾಜೀನಾಮೆ ಅಂಗೀಕರಿಸಿ: ಮಂಜುನಾಥ

BMTC MD Shivakumar
ವಿಜಯಪಥ ಸಮಗ್ರ ಸುದ್ದಿ
  • ಸಂಸ್ಥೆಯಲ್ಲಿ ಎಲ್ಲೆ ಮೀರಿದ ಅಧಿಕಾರಿಗಳ ಕಿರುಕುಳ ಮತ್ತೊಂದೆಡೆ ವೇತನ ಹೆಚ್ಚಳವಿಲ್ಲ
  • 24 ವರ್ಷಗಳ ಪ್ರಾಮಾಣಿಕ ಸೇವೆ ಮಾಡಿಯೂ ಗುರುತಿಸದ ಸಂಸ್ಥೆಯ ಅಧಿಕಾರಿಗಳು
  • ಭ್ರಷ್ಟಾಚಾರಕ್ಕೆ ಬೆಂಬಲಿಸುವ ನೀಚತನದ ಕೆಲ ಅಧಿಕಾರಿಗಳ ನಡೆಗೆ ನನ್ನ ಧಿಕ್ಕಾರ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಆಡಳಿತ ವ್ಯವಸ್ಥೆಯ ನಿಯಮಾನುಸಾರ ವೇತನ ಹೆಚ್ಚಳ ಮಾಡದ ಕಾರಣ ಹಾಗೂ ಸಂಸ್ಥೆಯ ಮೇಲಧಿಕಾರಿಗಳ, ಅಧಿಕಾರಿಗಳ ಅವೈಜ್ಞಾನಿಕ ಅನೀತಿ, ಬೇಜವಾಬ್ದಾರಿತನ ಮತ್ತು ಭ್ರಷ್ಟಾಚಾರದಿಂದ ಬೇಸತ್ತು ಹಿರಿಯ ನಿರ್ವಾಹಕರೊಬ್ಬರು ರಾಜೀನಾಮೆ ನೀಡುತ್ತಿರುವುದಾಗಿ ಸಂಸ್ಥೆಯ ಎಂಡಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೀಣ್ಯ 2ನೇ ಹಂತದಲ್ಲಿರುವ ಘಟಕ 22ರ ಘಟಕ ವ್ಯವಸ್ಥಾಪಕರ ಮೂಲಕ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು (ಭದ್ರತಾ ಮತ್ತು ಜಾಗೃತ) ಹಾಗೂ ಬಿಎಂಟಿಸಿ ವಾಯುವ್ಯ ವಲಯ ವಿಭಾಗೀಯ ನಿಯಂತ್ರಣಧಿಕಾರಿಗಳಿಗೆ ಪತ್ರ ಬರೆದು ಇ ಮೇಲ್‌ ಮಾಡಿದ್ದಾರೆ.

ಪತ್ರದಲ್ಲೇನಿದೆ?: ಮಂಜುನಾಥ ವಿ. ಬಿಲ್ಲೆ ಸಂಖ್ಯೆ 94 81 ಬಿಎಂಟಿಸಿ ಘಟಕ 22ರ ಹಿರಿಯ ನಿರ್ವಾಹಕನಾದ ನಾನು ಈ ಮೇಲ್ಕಡ ಉನ್ನತಾಧಿಕಾರಿಗಳಿಗೆ ತಿಳಿಸುವುದೇನೆಂದರೆ, 2001 ರಿಂದ 2025ವರೆಗೆ 25 ವರ್ಷಗಳ ಜತೆಗೆ ಈಗಲೂ ಪ್ರಾಮಾಣಿಕ ನಿರ್ವಾಹಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈ ನಡುವೆ 01.01.2020 ರಲ್ಲಿ ನಿಯಮಾನುಸಾರ ವೇತನ ಹೆಚ್ಚಳ ಮಾಡಬೇಕಾಗಿತ್ತು. ಆದರೆ, ಇಲ್ಲಿಯವರೆಗೂ ವೇತನ ಹೆಚ್ಚಳ ಮಾಡಲಾಗಿಲ್ಲ. ಜತೆಗೆ ಹಿರಿತನದ ಸೇವೆಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಆಧಾರದ ಮೇರೆಗೆ ಪ್ರಮೋಷನ್ ನೀಡಲಾಗಿಲ್ಲ. 15 ವರ್ಷದ ವೇಟೇಜ್ ಇಂಕ್ರಿಮೆಂಟ್ ಪರೀಕ್ಷಣಾರ್ಥಿ ಹುದ್ದೆ ದಿನದಿಂದ 13,14,15 ವರ್ಷದಲ್ಲಿ ಪ್ರತಿ ವರ್ಷಕ್ಕೆ 240 ಮಾನವ ಕರ್ತವ್ಯದಂತೆ P ಮೂರು ವರ್ಷಗಳಿಗೆ 720 ದಿನಗಳ ಮಾನವ ಕರ್ತವ್ಯ ಇರಬೇಕು ಎಂಬ ಅವೈಜ್ಞಾನಿಕ ನಿಯಮವಿದೆ. ಆದರೆ ಈ ನಿಯಮ ನಿರ್ವಾಹಕರಿಗೆ ಮಾತ್ರ ಅನ್ವಯಿಸುತ್ತದೆ.

ಚಾಲಕರಿಗೆ, ಚಾಲಕ ಕಂ ನಿರ್ವಾಹಕರಿಗೆ ಅನ್ವಯಿಸುವುದಿಲ್ಲ. ಈ ರೀತಿಯಾಗಿ ಅವೈಜ್ಞಾನಿಕವಾಗಿ ಮಾನವ ಕರ್ತವ್ಯ ಸಂಬಂಧ ನಿರ್ವಹಕರಿಗೆ ಮಾತ್ರ ಮಾನದಂಡ ಇಡಲಾಗಿದೆ. ಆದರೆ, ಚಾಲಕರು ಚಾಲಕ ಕಂ ನಿರ್ವಾಹಕರು ದೀರ್ಘಾವಧಿ ರಜೆಯಲ್ಲಿದ್ದರೂ ಸಹ ವೇಟೇಜ್ ಇಂಕ್ರಿಮೆಂಟ್ ಸಿಗುತ್ತದೆ. ಆದರೆ ನಿರ್ವಾಹಕರಿಗೆ ಈ ಸೌಲಭ್ಯ ಇಲ್ಲ. ಇದರ ಸಂಬಂಧ ಅರ್ಜಿ ಹಾಕಿದರೂ ಇದಕ್ಕೆ ಹಿಂಬರಹ ನೀಡಲಾಗಿಲ್ಲ. ಕನಿಷ್ಠ 20 ವರ್ಷ ಪೂರ್ಣಗೊಂಡ ನಿರ್ವಾಹಕರಾದ ನಮ್ಮಗಳಿಗೆ ಹಿರಿಯ ನಿರ್ವಾಹಕ ಪದೋನ್ನತಿ ನೀಡುವಂತೆ ಅರ್ಜಿ ನೀಡಿದರು ಸಹ ಹಿರಿಯ ನಿರ್ವಾಹಕರ ಮುಂಬಡ್ತಿಯ ವಿಷಯದ ಬಗ್ಗೆ ಮೇಲಧಿಕಾರಿಗಳು ಹಾಗೂ ಅಧಿಕಾರಿಗಳು ಪರಿಗಣನೆಗೆ ತೆಗೆದುಕೊಂಡಿಲ್ಲ.

ಮುಂದುವರಿದು ನನ್ನ ತಂದೆ 20 ವರ್ಷ ಸೇವೆ ಮಾಡಿದ ಮೇಲೆ ನಾನು ಅನುಕಂಪದ ಆಧಾರದ ಮೇಲೆ 25 ವರ್ಷ ಸೇವೆ ಸಲ್ಲಿಸಿದ್ದೇನೆ. ಪ್ರತಿ ಬಾರಿ ಘಟಕಗಳಲ್ಲಿ ಇಪಿಕೆಎಂ ಸಂಬಂಧ ಕೆಎಂಪಿಯಲ್ ಸಂಬಂಧ ನಿರ್ವಾಹಕರಿಗೆ ಚಾಲಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಬಂದಿದ್ದೀರಿ ಇದು ಖುಷಿಯಾದ ವಿಷಯ. ಆದರೆ ಪ್ರತಿ ತಿಂಗಳು ಪ್ರತಿ ವರ್ಷ ಪ್ರಕರಣವಿಲ್ಲದ ನಿರ್ವಾಹಕರನ್ನು ಗೌರವಿಸಿ ಸನ್ಮಾನಿಸಲಾಗಿಲ್ಲ. ಮುಂದುವರಿದು ಕಳೆದ 25 ವರ್ಷದಿಂದ ಒಂದು ಎಸಿ ಪ್ರಕರಣ ಇಲ್ಲದಂತೆ ನಾನು ಕರ್ತವ್ಯ ನಿರ್ವಹಿಸಿದ್ದೇನೆ. ನಾನು ಕಳೆದ 25 ವರ್ಷದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ ಈ ಹೋರಾಟದ ಹಾದಿಯನ್ನು ಸಹಿಸಲಾಗದ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿ ತನಿಖಾಧಿಕಾರಿಗಳಿಂದ ವಾಹನ ತಪಾಸಣೆ ಮಾಡಿಸಿದ್ದಾರೆ. ಇಲ್ಲಿಯವರೆಗೂ ಒಂದು ಎಸಿ ಪ್ರಕರಣ ಬರೆಯುವುದಕ್ಕೆ ಸಾಧ್ಯವಾಗಿಲ್ಲ.

ಕಳೆದ 2020ರ ಮುಷ್ಕರದ ಸಮಯದಲ್ಲಿ ನನ್ನ ಹೆಂಡತಿಯನ್ನು ಕಳೆದುಕೊಂಡು ದೀರ್ಘಾವಧಿ ರಜೆಯಲ್ಲಿದ್ದ ನನ್ನನ್ನು ಉದ್ದೇಶಪೂರ್ವಕವಾಗಿ ಅಂದಿನ ಘಟಕ 31ರ ಅಂದಿನ ಘಟಕ ವ್ಯವಸ್ಥಾಪಕ ಕೃಷ್ಣೇಗೌಡ ಅವರು ಅಂದಿನ ಎಟಿಎಸ್ ಪುಟ್ಟರಾಜು ಹಾಗೂ ವಿಭಾಗೀಯ ನಿಯಂತ್ರಣಧಿಕಾರಿ ಶ್ರೀನಥ್ ಈ ಮೂರು ಜನ ಸೇರಿ ಮುಷ್ಕರದಲ್ಲಿ ಭಾಗಿಯಾಗಿದ್ದೇನೆ ಎಂದು ಸುಳ್ಳು ಆರೋಪ ಮಾಡಿ ಅಮಾನತುಗೊಳಿಸಿ ಘಟಕ 31 ರಿಂದ ಘಟಕ 17ಕ್ಕೆ ವರ್ಗಾವಣೆ ಮಾಡಿ ವಿಚಾರಣೆ ನಿಗದಿಗೊಳಿಸದೆ ಏಕಪಕ್ಷವಾಗಿ ದಂಡಗಳನ್ನು ವಿಧಿಸಿ, ಅನ್ಯಾಯ ಎಸಗಿದ್ದಾರೆ. ಆ ದಿನದಿಂದ ಈ ದಿನದ ವರೆಗೂ ನಾನು ತಪ್ಪು ಮಾಡಿಲ್ಲವೆಂದು ಹಲವು ಅರ್ಜಿಗಳನ್ನು ಕೊಟ್ಟರು ಸಹಿತ ಘಟಕ 31ಕ್ಕೆ ವರ್ಗಾವಣೆ ನೀಡಲಾಗಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಬಿಎಂಟಿಸಿ ಎಸ್ಒ ರಮ್ಯಾ ಅವರನ್ನು ಅವರ ಮೂಲ ಹುದ್ದೆ ಸ್ಥಾನದಿಂದ ಘಟಕ ವ್ಯವಸ್ಥಾಪಕರಿಗೆ ಬದಲಾವಣೆ ಮಾಡಿ ಬಿಎಂಟಿಸಿ ಘಟಕ 36 ಕ್ಕೆ ವರ್ಗಾವಣೆ ಮಾಡಿದ್ದಾರೆ.

ವಿಪರ್ಯಾಸ ಎಂದರೆ ವರ್ಗಾವಣೆ ಆದೇಶ ತೆಗೆದುಕೊಳ್ಳುವುದಕ್ಕಿಂತ ಮುಂಚೆ ಎಸ್ಒ ರಮ್ಯಾ ಅವರು 15 ದಿನಗಳ ಕಾಲ ಶಿಶುಪಾಲನಾ ರಜೆ ತೆಗೆದುಕೊಳ್ಳುತ್ತಾರೆ. ತದನಂತರ ಒಂದೂವರೆ ತಿಂಗಳು ಕರ್ತವ್ಯ ನಿರ್ವಹಿಸುತ್ತಾರೆ. ನಮ್ಮಲ್ಲಿ ರಾಜಕೀಯ ಒತ್ತಡದ ಮೇರೆಗೆ ವರ್ಗಾವಣೆ ಮಾಡುವಂತಿಲ್ಲ ಎಂಬ ಆದೇಶ ಇದ್ದರೂ ಸಹಿತ ರಾಜಕೀಯದ ಒತ್ತಡದ ಮೇರೆಗೆ ಅಂದಿನ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಮಚಂದ್ರನ್‌ ಅವರು ರಮ್ಯಾ ಅವರಿಗೆ ಮತ್ತೆ ಭದ್ರತಾ ಜಾಗೃತ ವಿಭಾದಲ್ಲಿ ಎಸ್ಒ ಅಧಿಕಾರಿಯಾಗಿ ನೇಮಕದ ಆದೇಶ ಹೊರಡಿಸುತ್ತಾರೆ. ಈ ನೈಜ ಘಟನೆಯ ಕಥೆ ಹೇಳಲೇಬೇಕಾದ ಅನಿವಾರ್ಯತೆ ಇದೆ. ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಾರೆ ಎಂಬ ಒಂದೇ ಕಾರಣದಿಂದ ವರ್ಗಾವಣೆ ನೀಡಿದ ಅಧಿಕಾರಿಗೆ ಕೇವಲ ಒಂದೂವರೆ ತಿಂಗಳ ಕೆಲಸ ಮಾಡಲಿಕ್ಕೆ ಆಗಲಿಲ್ಲ ಅಂದ ಮೇಲೆ 2020ರ ಮುಷ್ಕರದ ಸಮಯದಲ್ಲಿ 20 ವರ್ಷ ಪ್ರಾಮಾಣಿಕ ಸೇವೆ ಮಾಡಿದ ನನ್ನನ್ನು ಅಮಾನತುಗೊಳಿಸಿ ವರ್ಗಾವಣೆ ಮಾಡಿ ಅಪಮಾನಗೊಳಿಸಿ ತದನಂತರದ ದಿನಗಳಲ್ಲಿ ಘಟಕ 31ಕ್ಕೆ ವರ್ಗಾವಣೆ ನೀಡುವಂತೆ ಹಲವು ಅರ್ಜಿಗಳನ್ನು ನೀಡಿದರು ನಾನು ತಪ್ಪು ಮಾಡಿಲ್ಲವೆಂದು ಮೇಲಧಿಕಾರಿಗಳಿಗೆ, ಅಧಿಕಾರಿಗಳಿಗೆ ಮನವರಿಕೆ ಆದರೂ ಸಹಿತ ನನ್ನ ಮೂಲ ಘಟಕ 31 ಕ್ಕೆ ವರ್ಗಾವಣೆ ಮಾಡುತ್ತಿಲ್ಲ. ಅಂದ ಮೇಲೆ ಮೊದಲಿನಂತೆ ಕರ್ತವ್ಯ ನಿರ್ವಹಿಸುವುದು ಹೇಗೆ? ಈ ನೈಜ ಕಥೆಯ ಸಾರಾಂಶದಲ್ಲಿ ಅಧಿಕಾರಿಗೊಂದು ನ್ಯಾಯ ನೌಕರರಿಗೆ ಒಂದು ನ್ಯಾಯ ಎನ್ನುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.

ಆ ವಿಷಯ ಆಗಿರಲಿ ಮನನೊಂದು ಹೇಳುತ್ತಿದ್ದೇನೆ ನನ್ನ ತಂದೆ ಕಾಲದಿಂದ ಹಿಡಿದು ನನ್ನ ಕಾಲದವರೆಗೂ 45 ವರ್ಷ ಅಂದರೆ ಸಂಸ್ಥೆ ಹುಟ್ಟಿದಾಗಿನಿಂದ ವೇತನ ಪರಿಷ್ಕರಣೆಯ ಸಂಬಂಧ ನ್ಯಾಯದ ಧರ್ಮದ ಹಾದಿಯಲ್ಲಿ ವೇತನ ಹೆಚ್ಚಳ ಮಾಡಲಾಗಿಲ್ಲ. ನಿರ್ವಾಹಕರು, ಚಾಲಕರು, ಕುಶಲಕರ್ಮಿಗಳು ಇವರುಗಳೆಲ್ಲ ಸೇರಿ ಹೋರಾಟ ಮಾಡಿದ ಬಳಿಕ ವೇತನ ಪರಿಷ್ಕಣೆಯಾಗಿರುತ್ತದೆ. ಆದರೆ ವೇತನ ಪರಿಷ್ಕಣೆಯ ಪ್ರತಿಫಲವಾಗಿ ಚಾಲಕ, ನಿರ್ವಾಹಕ, ಕುಶಲಕರ್ಮಿಗಳಿಗೆ ಮಾತ್ರ ಅವೈಜ್ಞಾನಿಕ ರೀತಿಯಲ್ಲಿ ಮೋಸದ ಹಾದಿಯಲ್ಲಿ ಶಿಕ್ಷೆ ನೀಡಿ, ವೇತನ ಪರಿಷ್ಕರಣೆಯ ಸಂಪೂರ್ಣ ಪ್ರತಿಫಲವನ್ನು ಕಿರಿಯ ಸಹಾಯಕರು, ಭದ್ರತಾ ಆರಕ್ಷಕರು, ಒಟ್ಟಾರೆ ಆಡಳಿತ ವ್ಯವಸ್ಥೆಯ ಮೇಲಧಿಕಾರಿಗಳು, ಅಧಿಕಾರಿ ವರ್ಗದವರು ಹೋರಾಟ ಮಾಡದೆ ಪಡೆದುಕೊಂಡಿರುತ್ತಾರೆ.

ಸಂಸ್ಥೆ ಆರಂಭವಾದ ದಿನದಿಂದ ವೈದ್ಯಕೀಯ ವ್ಯವಸ್ಥೆಗೆ ಸಂಬಂಧಿಸಿದಂತೆ ಅವೈಜ್ಞಾನಿಕ ವೈದ್ಯಕೀಯ ಮುಂಗಡ ಹಣ ಕೊಟ್ಟು ನೌಕರರನ್ನು ಸಾಲಗಾರನನ್ನಾಗಿ ಮಾಡುವ ಪದ್ಧತಿ ಮುಂದುವರಿದಿದೆ. ಪ್ರತಿಷ್ಠಿತ ಕಂಪನಿಗಳ ಮ್ಯಾಕ್ಸ್ ಭೂಪ, ಸ್ಟಾರ್ ಹೆಲ್ತ್ ಇಂತಹ ಇನ್ಸೂರೆನ್ಸ್ ಗಳಿಂದ ವೈದ್ಯಕೀಯ ಯೋಜನೆ ಸೌಲಭ್ಯ ನೌಕರರಿಗೆ ನೀಡುವಲ್ಲಿ ಮೇಲಧಿಕಾರಿಗಳಿಗೆ ಆಸಕ್ತಿಯೇ ಇಲ್ಲ. ಇನ್ನು ಗ್ರಾಚ್ಯುಟಿ ಸಂಬಂಧ 2001ರ ಆಚೆಗೆ ಪೂರ್ಣ ಉಪಧನ, 2001ರ ಈಚೆಗೆ ಅರ್ಧ ಉಪಧನ. ಈ ತಾರತಮ್ಯವನ್ನು ಸರಿಪಡಿಸುವಲ್ಲಿ ಮೇಲಧಿಕಾರಿಗಳ ದೀರ್ಘಾವಧಿ ಬೇಜವಾಬ್ದಾರಿತನ ಅಂದರೆ ಅಸ್ಟಿಸ್ಟಲ್ಲ. ಒಬ್ಬ ಕೈದಿಗೆ ಜೀವವಾದಿ ಶಿಕ್ಷೆ ನೀಡುತ್ತಾರಲ್ಲ ಅಷ್ಟು ವರ್ಷ ಕೊಟ್ಟರು ಇವರಿಗೆ ಸಣ್ಣ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸಾಧ್ಯವಾಗಲ್ಲ. ಇನ್ನು ಕರ್ತವ್ಯದ ಸಂಬಂಧ ಅವ್ಯಜ್ಞಾನಿಕ ಫಾರಂ 4 ರಿಂದ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ಈ ಒತ್ತಡದ ಫಾರಂ 4ರ ಮಾರ್ಗಚಾರಣೆಯಿಂದ ನೌಕರರಿಗೆ ಅಧಿಕ ರಕ್ತದೊತ್ತಡ, ಹೃದಯಾಘಾತ, ಸ್ಟ್ರೋಕ್, ಮಾನಸಿಕ ಖಿನ್ನತೆ ಈ ರೋಗಗಳಿಗೆ ನೌಕರರ ತುತ್ತಾಗುತ್ತಿದ್ದಾರೆ. ಇದನ್ನು ಸರಿಪಡಿಸುವುದಕ್ಕೆ ಮೇಲಧಿಕಾರಿಗಳಿಂದ ಸಾಧ್ಯವಾಗಿಲ್ಲ.

ಸಂಸ್ಥೆಯು ಲಾಭದಲ್ಲಿದ್ದಾಗ ಆ ಹಣವನ್ನು ಶೇರು ಮಾರುಕಟ್ಟೆಗೆ ಒಳಪಡಿಸಿ ಈ ಸಂಸ್ಥೆಯ ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಮೇಲಧಿಕಾರಿಗಳು, ಅಧಿಕಾರಿಗಳು ಶ್ರಮಿಸಿಲ್ಲ. ಈ ಹಿಂದೆ ಕಳಪೆ ಮಟ್ಟದ ಸಮವಸ್ತ್ರಗಳನ್ನು ನೀಡುತ್ತಾ ಬಂದಿರುತ್ತೀರಿ. ಈಗ ಕಡಿಮೆ ಮೊತ್ತದ ಹಣಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದೀರಿ. ಕರ್ತವ್ಯದ ಸಮಯದಲ್ಲಿ ಅಪಘಾತವಾದರೆ ಸಂಸ್ಥೆಯು ನೀಡುತ್ತಿದ್ದ 50 ಲಕ್ಷ ರೂ. ಯೋಜನೆಯನ್ನು ಸ್ಥಗಿತಗೊಳಿಸಿ ಸ್ಕೀಮ್ ಸ್ಕ್ಯಾಮ್ ಬ್ಯಾಂಕುಗಳ ಹೆಸರಲ್ಲಿ ಕೋಟಿ ಹಣ ಬರುವುದಾಗಿ ನೌಕರರಿಗೆ ತಿಳಿಸಿದ್ದೀರಿ. ಇಲ್ಲಿ ಹಲವು ಮಾನದಂಡಗಳಿವೆ. ಮೂರು ತಿಂಗಳ ವೇತನ ಬ್ಯಾಂಕಿಗೆ ಸಂದಾಯವಾಗಬೇಕು. ಪ್ಲಾಟಿನಂ ರೂಪಾಯಿ ಡೆಬಿಟ್ ಕಾರ್ಡ್ ಹೊಂದಿರಲೇಬೇಕು ಹಾಗೂ ಒಡಂಬಡಿಕೆಯ ಅವಧಿಯ ವರ್ಷಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ 3 ಮಾನದಂಡಗಳು ಇಟ್ಟುಕೊಂಡು ಬ್ಯಾಂಕ್ಗಳು ಕೋಟಿ ರೂಪಾಯಿಗಳ ಯೋಜನೆ ರೂಪಿಸಿದ್ದಾರೆ. ಈ ಯೋಜನೆಗಳು ಬ್ಯಾಂಕ್‌ಗಳು ವೇತನದ ಆಧಾರದ ಮೇರೆಗೆ ತಂದಿರುವಂತಹ ಯೋಜನೆಯು ಎಲ್ಲ ಖಾಸಗಿ ಲಿಮಿಟೆಡ್ ಗಳಿಗೂ ಒಡಂಬಡಿಕೆಯ ಆಧಾರದ ಮೇಲೆ ಅನ್ವಯಿಸುತ್ತದೆ. ಇದನ್ನೇ ಬುದ್ಧಿವಂತಿಕೆಯಿಂದ ಮೇಲಧಿಕಾರಿಗಳು ಬ್ಯಾಂಕುಗಳ ಮತ್ತು ನೌಕರರ ನಡುವೆ ಪೈಪೋಟಿಗಳನ್ನು ತಂದಿಟ್ಟು ಸಂಪೂರ್ಣ ಅಪಘಾತ ವಿಮೆ ಜವಾಬ್ದಾರಿಯನ್ನು ಬ್ಯಾಂಕುಗಳಿಗೆ ವಹಿಸಿ, ಈ ಹಿಂದೆ 50 ಲಕ್ಷ ರೂಪಾಯಿ ಅಪಘಾತ ವಿಮೆ ನೀಡುತ್ತಿದ್ದ ಸುತ್ತೋಲೆಗಳನ್ನು ಸ್ಥಗಿತಗೊಳಿಸಿ, ಮಾನವೀಯತೆ ಜವಾಬ್ದಾರಿಯನ್ನು ಮರೆತಿದ್ದೀರಿ.

ಚಾಲಕ, ನಿರ್ವಾಹಕ ಹಾಗೂ ಕುಶಲಕರ್ಮಿಗಳಿಂದ ಈ ಸಂಸ್ಥೆಗೆ ಉನ್ನತ ಅತ್ಯುನ್ನತ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ತಂದು ಕೊಟ್ಟರು, ಇಂತಹ ನೌಕರರುಗಳ ಕುಂದುಕೊರತೆಗಳಿಗೆ ಮೇಲಧಿಕಾರಿಗಳು ಮನ್ನಣೆ ನೀಡುತ್ತಿಲ್ಲ. ಇನ್ನು ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳಂತೂ ಘಟಕಗಳಿಗೆ ಭೇಟಿ ನೀಡಿ ನೌಕರರ ಕುಂದು ಕೊರತೆ ಕೇಳುವುದಿಲ್ಲ. ಇಂತಹ ಉನ್ನತಾಧಿಕಾರಿಗಳೇ ನೌಕರರ ಕಡೆ ಗಮನ ಕೊಡುವುದಿಲ್ಲ ಅಂದಮೇಲೆ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು, ಮುಖ್ಯ ಸಂಚಾರ ವ್ಯವಸ್ಥಾಪಕರು ಆಚರಣೆ, ವಾಣಿಜ್ಯ, ಮುಖ್ಯ ಕಲ್ಯಾಣ ಅಧಿಕಾರಿಗಳು, ಮುಖ್ಯಭದ್ರತಾ ಮತ್ತು ಜಾಗೃತಧಿಕಾರಿಗಳು ಘಟಕಗಳಿಗೆ ಭೇಟಿ ನೀಡಿ ನೌಕರರ ಕೊಂದು ಕೊರತೆ ಆಲಿಸುವುದು ಕನಸಿನ ಮಾತಾಗಿದೆ. ಹಾಗಾಗಿ ಬಿಎಂಟಿಸಿಯ ವಿಭಾಗೀಯ ನಿಯಂತ್ರಣಧಿಕಾರಿಗಳು ಭ್ರಷ್ಟಾಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ.

ಹೆಸರಿಗಷ್ಟೇ ಭ್ರಷ್ಟಮುಕ್ತ ಬಿಎಂಟಿಸಿ ಎಂಬ ನಾಮಫಲಕ ಘೋಷಣೆಯಾಗಿದೆ, ನಿಜವಾಗಲೂ ಬಿಎಂಟಿಸಿ ಭ್ರಷ್ಟ ಯುಕ್ತವಾಗಿದೆಯೇ? ಎಲ್ಲಾ ಘಟಕಗಳಲ್ಲಿ ಭದ್ರತಾ ಆರಕ್ಷಕರು, ಚೀಟಿ ಶಾಖೆಯ ಕಿರಿಯ ಸಹಾಯಕರು ಸಂಚಾರ ಸಿಬ್ಬಂದಿಗಳು ಲಂಚ ಪಡೆದೆ ಕರ್ತವ್ಯ ನಿರ್ವಹಿಸುತ್ತಾರೆ. ವೇತನ ಹೆಚ್ಚಳದ ಸಂಬಂಧ ಪ್ರಶ್ನೆ ಮಾಡಿದಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಎಲ್ಲ ವ್ಯವಸ್ಥಾಪಕ ನಿರ್ದೇಶಕರು ಬೆರಳು ಮಾಡಿ ತೋರಿಸುತ್ತೀರಿ. ವಿಪರ್ಯಾಸ ಎಂದರೆ ಕೆಎಸ್ಆರ್ಟಿಸಿಯಲ್ಲಿ ಹಸಿರು ಕಾರ್ಡ್ ಮಾಫಿಯಾ ಮುಂದುವರಿದಿದೆ, (ಹಸಿರು ಕಾರ್ಡ್ ಮಾಫಿಯಾ ಎಂದರೆ ಕೆಎಸ್ಆರ್ಟಿಸಿಯ ಭದ್ರತಾ ಮತ್ತು ಜಾಗೃತ ಇಲಾಖೆಯ ತನಿಖಾಧಿಕಾರಿಗಳಿಂದಲೇ ಮೇಲಧಿಕಾರಿಗಳು ಅಧಿಕಾರಿಗಳು ಸೇರಿ ನಿರ್ವಾಹಕರಿಂದ ಕಳ್ಳತನ ಮಾಡಿಸುವುದು ಎಂದರ್ಥ). ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ಈ ಗಾದೆಯ ಅರ್ಥ ಮೇಲಧಿಕಾರಿಗಳು, ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದರೆ ಪ್ರಾಮಾಣಿಕ ನೌಕರ ಉತ್ತಮ ಪಡೆಯುವುದಾದರೂ ಹೇಗೆ?

ಗಾರ್ಮೆಂಟ್ಸ್, ಗಾರೆ ಕೆಲಸ ಇನ್ನೂ ಅನೇಕ ಖಾಸಗಿ ಕಂಪನಿಯಲ್ಲೂ ಕೂಡ ಬೋನಸ್ ನೀಡುತ್ತಾರೆ. ಉನ್ನತಾಧಿಕಾರಿಗಳು ಮತ್ತು ಅಧಿಕಾರಿಗಳ ಭ್ರಷ್ಟಾಚಾರದಿಂದ ಅವೈಜ್ಞಾನಿಕ ಖಾಸಗಿ ಒಡಂಬಡಿಕೆಯಿಂದ ಸಂಸ್ಥೆಯು ನಷ್ಟದ ಹಾದಿ ತುಳಿದಿದ್ದು, ನಷ್ಟದ ನೆಪ ಹೇಳಿ, ಬೋನಸ್‌ ಎಸ್ ಗ್ರೇ ಸಿಯ ಕೊಡುವುದನ್ನೇ ಮರೆತುಬಿಟ್ಟಿದ್ದೀರಿ. ಆಯುಧ ಪೂಜೆಯ ದಿನ ಎಲ್ಲ ಸಣ್ಣ ಕೈಗಾರಿಕಾ, ದೊಡ್ಡ ಕೈಗಾರಿಕಾ ಉದ್ಯಮಿಗಳು ನೌಕರರಿಗೆ ಕನಿಷ್ಠ ಅರ್ಧ ಕೆಜಿ ಸಿಹಿ ಹಂಚುತ್ತಾರೆ. ಕೈಗಾರಿಕಾ ಒಪ್ಪಂದದ ನಿಯಮದಡಿ ಇರುವ ಈ ಸಂಸ್ಥೆಯ ನೌಕರರಿಗೆ ಕನಿಷ್ಠ ಒಂದು ಚಾಕ್ಲೇಟ್ ಅಥವಾ 50 ಗ್ರಾಂ ಸಿಹಿ ಹಂಚಲು ಸಾಧ್ಯವಾಗದ ಮೇಲಧಿಕಾರಿಗಳ, ಅಧಿಕಾರಿಗಳಿಗೆ ನನ್ನ ಕೋಟಿ ನಮನ.

ನೌಕರರ ಸಂಬಂಧ ಸಂಸ್ಥೆಯ ಸಂಬಂಧ ಇನ್ನು ಅನೇಕ ಜವಾಬ್ದಾರಿಗಳನ್ನು ಮೇಲಧಿಕಾರಿಗಳು, ಅಧಿಕಾರಿಗಳು ಕಾಲಹರಣ ಮಾಡಿದ್ದೀರಿ ಎಂದು ನನ್ನ ವಾದವಾಗಿದೆ. ಒಂದು ವಿಷಯ ಹೇಳಲೇಬೇಕಾಗಿದೆ 2020ರ ವೇತನ ಪರಿಷ್ಕಾರಣೆಯ ವಿಷಯಕ್ಕೆ ಸಂಬಂಧಿಸಿದ ಮೇಲಧಿಕಾರಿಗಳು, ಅಧಿಕಾರಿಗಳು ನಿಯಮಾನಸಾರ ನ್ಯಾಯ ಸಮ್ಮತವಾಗಿ 01.01.2020ಕ್ಕೆ ನೀಡಬೇಕಾದ ವೇತನ ಪರಿಷ್ಕಣೆಯನ್ನು ಮೋಸದ ಹಾದಿಯಲ್ಲಿ 2023 ಎಂದು ಬೆರಳಚ್ಚಿನಿಂದ ನಮೂದಿಸಿ ನೌಕರರಿಗೆ ಮೋಸ ಮಾಡುತ್ತಿರಲ್ಲ ಇದು ಎಷ್ಟರ ಮಟ್ಟಿಗೆ ಸರಿ? ಈ ಭಾರತ ದೇಶದ ಪ್ರಜೆಯಾಗಿ, ಪ್ರಜಾಪ್ರಭುತ್ವದ ಅಡಿ ಸಂವಿಧಾನದ ಮಾತಿನ ಸ್ವಾತಂತ್ರದ ನ್ಯಾಯದ ಅಡಿಯಲ್ಲಿ ವೇತನ ಸಂಬಂಧ ಕರ್ತವ್ಯದ ಸಂಬಂಧ ಸಾಮಾನ್ಯ ನೌಕರನಾದ ನಾನು ಮೇಲಧಿಕಾರಿಗಳನ್ನು ಪ್ರಶ್ನೆ ಮಾಡುವ ಹಕ್ಕನ್ನು ಕಿತ್ತುಕೊಂಡಿದ್ದೀರಿ. ಈ ಅಧಿಕಾರವನ್ನು ಕೊಟ್ಟಿದ್ದು ಯಾರು ನಿಮಗೆ?

ವೇತನ ಸಂಬಂಧ ಕರ್ತವ್ಯ ಸಂಬಂಧ ನಿಮ್ಮ ಇಷ್ಟ ಬಂದ ಹಾಗೆ ನೀವು ನಡೆದುಕೊಂಡು ಹೋಗುವುದೇ ಆದರೆ ಈ ನನ್ನ ಭಾರತ ದೇಶಕ್ಕೆ ಸಂವಿಧಾನ ಏತಕೆ ಬೇಕು? ನನ್ನ ಭಾರತ ದೇಶಕ್ಕೆ ನ್ಯಾಯಾಂಗ ಕಾರ್ಯಂಗ ಶಾಸಕಾಂಗ ಏತಕ್ಕೆ ಬೇಕು? ನೀವುಗಳೇ ಸರ್ವಾಧಿಕಾರಿಗಳಲ್ಲವೇ ಉತ್ತರ ನೀಡಿ. ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದರು ಈ ರೀತಿ ಹಿಟ್ಲರ್ ಆಳ್ವಿಕೆ ಮಾಡುತ್ತೀರಾ ಎಂದರೆ ಅಕಸ್ಮಾತ್ ಸಂವಿಧಾನ ನಮ್ಮ ಪಾಲಿಗೆ ಇರಲಿಲ್ಲವೆಂದರೆ ನಿಮ್ಮ ಅಟ್ಟಹಾಸ ಊಹಿಸಲು ಸಾಧ್ಯವಾಗುವುದಿಲ್ಲ. ನೌಕರರನ್ನು ಶಿಕ್ಷಿಸುವುದು ನೌಕರರನ್ನು ಗುಲಾಮಗಿರಿಯಂತೆ ನಡೆಸಿಕೊಳ್ಳುವುದು ಇದು ಹಿಟ್ಲರ್ ಆಳ್ವಿಕೆ ಅಲ್ಲದೆ ಮತ್ತೆ ಎಂತಹ ಆಳ್ವಿಕೆ ಎಂದು ಕರೆಯಬೇಕು?

ವೇತನ ಸಂಬಂಧ ಕರ್ತವ್ಯ ಸಂಬಂಧ ಸಂವಿಧಾನಾತ್ಮಕವಾಗಿ ಕಪ್ಪುಪಟ್ಟಿ ಪ್ರದರ್ಶನ ನಮ್ಮ ಭಾರತ ದೇಶದ ಪಿತಾಮಹ ಮಹಾತ್ಮ ಗಾಂಧೀಜಿಯವರ ಶಾಂತಿಯುತ ಉಪವಾಸ ಹೋರಾಟದ ಹಕ್ಕನ್ನು ನನ್ನಿಂದ ಕಿತ್ತುಕೊಂಡಿದ್ದೀರಿ. ಹಾಗಾಗಿ ಮನನೊಂದು ಒಂದು ತೀರ್ಮಾನಕ್ಕೆ ಬಂದಿದ್ದೇನೆ. ನಿಮ್ಮಂತಹ ಭ್ರಷ್ಟ ಮೇಲಧಿಕಾರಿಗಳ ಅಧಿಕಾರಿಗಳಿಂದ ನೌಕರರಿಗೆ ಈ ಸಂಸ್ಥೆಗೆ ಒಳಿತು ಮಾಡುವುದು ಸಾಧ್ಯವಿಲ್ಲ. ಹಾಗಾಗಿ ನನ್ನ ಕುಟುಂಬದ ರಕ್ಷಣೆಗಾಗಿ ಬೇರೊಂದು ಸ್ವಯಂ ಉದ್ಯೋಗ ಮಾಡಲು ಇಚ್ಚಿಸಿದ್ದೇನೆ. ಕರ್ತವ್ಯ ಸಂಬಂಧ ನಿಮ್ಮ ಅವೈಜ್ಞಾನಿಕ ನೀತಿಗಳಿಂದ ಮತ್ತು ವೇತನ ಹೆಚ್ಚಳದ ಸಂಬಂಧ ಮೋಸದ ಹಾದಿಯಲ್ಲಿ ಸುಳ್ಳು ಲೆಕ್ಕಗಳನ್ನು ನೀಡಿ ಸರ್ಕಾರವನ್ನು ಮೆಚ್ಚಿಸುವ ನಿಮ್ಮಂತಹ ಚಾಣಕ್ಯ ಮೇಲಧಿಕಾರಿಗಳ, ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡಲು ನನಗೆ ಇಷ್ಟವಿಲ್ಲ. ಈ ಮೇಲ್ಕಂ ಡ ವಿಷಯದ ಉಲ್ಲೇಖಗಳ ಬಗ್ಗೆ ಸಂಬಂಧಿಸಿದ ಅಧಿಕಾರಿ ಮೇಲಧಿಕಾರಿಯು ಸ್ಪಷ್ಟಿಕರಣ ದೊಂದಿಗೆ ಹಿಂಬರಹ ನೀಡಿ ಮುಂದುವರಿದು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಬೇಸತ್ತು ರಾಜೀನಾಮೆ ನೀಡುತ್ತಿದ್ದೇನೆ.

ಈ ರಾಜೀನಾಮೆಯನ್ನು ಅಂಗೀಕರಿಸಿ ನನಗೆ ಬರಬೇಕಾದ ಹಣವನ್ನು ಒಂದೇ ಕಂತಿನಲ್ಲಿ ಕೊಟ್ಟು ಬೇರೊಂದು ಉದ್ಯೋಗ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ವೇತನ ಸಂಬಂಧ ಕರ್ತವ್ಯ ಸಂಬಂಧ ನಿಮ್ಮ ತಪ್ಪನ್ನು ಒಪ್ಪಿಕೊಂಡು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕಾಗಿ ವಿನಯ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ, ಇಂತಿ ತಮ್ಮ ವಿಶ್ವಾಸಿ ಮಂಜುನಾಥ ವಿ. ಬಿಲ್ಲೆ ಸಂಖ್ಯೆ 94 81 ಬಿಎಂಟಿಸಿ ಘಟಕ 22ರ ಹಿರಿಯ ನಿರ್ವಾಹಕ. BMTC ಇಂದ ಬೇಸತ್ತು ಹಿರಿಯ ನಿರ್ವಾಹಕರ ರಾಜೀನಾಮೆ

Megha
the authorMegha

Leave a Reply

error: Content is protected !!