NEWSನಮ್ಮಜಿಲ್ಲೆನಮ್ಮರಾಜ್ಯ

BMTC ಬಸ್‌ಗಳಲ್ಲಿ ಮೂರು ದಿನಗಳಿಂದ ಯುಪಿಐ ಸಮಸ್ಯೆ: ನಮಗೇನು ಗೊತ್ತಿಲ್ಲ ಹಣ ಕಟ್ಟಿ ಅಂತ ನಿರ್ವಾಹಕರಿಗೆ ತಾಕೀತು

ವಿಜಯಪಥ ಸಮಗ್ರ ಸುದ್ದಿ
  • ಪ್ರಯಾಣಿಕರಿಂದ ಸಂದಾಯವಾದ ಹಣ ಘಟಕದ ಡ್ಯಾಶ್‌ ಬೋರ್ಡ್‌ನಲ್ಲಿ ಕಾಣಿಸುತ್ತಿಲ್ಲ
  • ಸಮಸ್ಯೆ ಪರಿಹರಿಸಬೇಕಾದ ಕೇಂದ್ರ ಕಚೇರಿಯ ಅಧಿಕಾರಿಗಳು ಮೌನ
  • ಮೂರು ದಿನಗಳಿಂದ ಬಿಗಡಾಯಿಸಿದ ಸಮಸ್ಯೆ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲ ಘಟಕಗಳು ಹಾಗೂ ವಾಹನಗಳಲ್ಲಿ ಕಳೆದ ಮೂರು ದಿನಗಳಿಂದ ಸರ್ವರ್ ತೊಂದರೆಯಿಂದಾಗಿ ಪ್ರಯಾಣಿಕರು ವಾಹನಗಳಲ್ಲಿ ತಾವು ಕೊಂಡ ಟಿಕೆಟ್ ಮೌಲ್ಯದ ಹಣವನ್ನು ಯುಪಿಐ ಮುಖಾಂತರ ಸಂದಾಯ ಮಾಡುತ್ತಿದ್ದರೂ ಅದು ಡ್ಯಾಷ್ ಬೋರ್ಡ್‌ನಲ್ಲಿ ಕಾಣಿಸುತ್ತಿಲ್ಲ. ಹೀಗಾಗಿ ಆ ಹಣವನ್ನು ನಿರ್ವಾಹಕರು ತಮ್ಮ ಕೈನಿಂದ ಕಟ್ಟಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಬಿಎಂಟಿಸಿಯ ಎಲ್ಲ ಘಟಕಗಳ ಬಹುತೇಕ ಎಲ್ಲ ಬಸ್‌ಗಳಲ್ಲೂ ಈ ಸಮಸ್ಯೆ ಕಳೆದ ಮೂರು ದಿನಗಳಿಂದ ಆಗುತ್ತಿದ್ದರು ಸಂಸ್ಥೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಈವರೆಗೂ ಪರಿಹಾರ ಮಾಡುವಲ್ಲಿ ವಿಫಲರಾಗಿದ್ದಾರೆ. ಇದರಿಂದ ನಿರ್ವಾಹಕರು ಡ್ಯೂಟಿ ಮುಗಿಸಿ ಘಟಕಕ್ಕೆ ಬಂದು ಕ್ಯಾಶ್‌ ಕಟ್ಟುವಾಗ ಡಿಪೋ ಕ್ಯಾಶ್‌ ಕೌಂಟರ್‌ನಲ್ಲಿ ತಮ್ಮದಲ್ಲದ ತಪ್ಪಿಗೆ ಯುಪಿಐನಲ್ಲಿ ಸಂದಾಯವಾದ ಆ ಹಣ ಕಟ್ಟುತ್ತಿದ್ದಾರೆ.

ಪ್ರಯಾಣಿಕರು ಯುಪಿಐನಲ್ಲಿ ಸಂದಾಯ ಮಾಡಿರುವ ಟಿಕೆಟ್‌ ಮೌಲ್ಯದ ಹಣವನ್ನು ನಿರ್ವಾಹಕರು ಘಟಕಗಳಿಗೆ ಬಂದಾಗ ಘಟಕದ ಡ್ಯಾಶ್‌ ಬೋರ್ಡ್‌ನಲ್ಲಿ ಪರಿಶೀಲಿಸಿ ಆ ಮೌಲ್ಯದ ಹಣವನ್ನು ಬಿಟ್ಟು ಕ್ಯಾಶನ್ನು ಕಟ್ಟಬೇಕಿದೆ. ಆದರೆ ಯುಪಿಐನಲ್ಲಿ ಪ್ರಯಾಣಿಕರು ಸಂದಾಯ ಮಾಡಿರುವ ಹಣ ಘಟಕದ ಡ್ಯಾಶ್‌ ಬೋರ್ಡ್‌ನಲ್ಲಿ ತೋರಿಸುತ್ತಿಲ್ಲದ ಕಾರಣ ಕಂಡಕ್ಟರ್‌ಗಳು ಆ ಹಣವನ್ನು ಕಟ್ಟಬೇಕಾಗಿದೆ.

ಹೀಗೆ ನಿರ್ವಾಹಕರು ತಾವು ಮಾಡದ ತಪ್ಪಿಗೆ ಅಂದರೆ ಡ್ಯಾಶ್‌ ಬೋರ್ಡ್ ಘಟಕದ ಕಂಪ್ಯೂಟರ್ ಮತ್ತು ನಿರ್ವಾಹಕರ ಮೊಬೈಲ್‌ಗಳಲ್ಲಿ ಗೊತ್ತಾಗದ ಕಾರಣ (ಶೋ ಆಗದ ಕಾರಣ) ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೂ ಸಹ ಸಂಸ್ಥೆಯ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದರೆ ಈ ಸಮಸ್ಯೆ ಬಗ್ಗೆ ಯಾರಿಗೆ ಹೇಳಬೇಕು ಎಂಬ ಗೊಂದಲದಲ್ಲಿ ನೌಕರರು ಸಿಲುಕಿ ಕಳೆದ ಮೂರು ದಿನಗಳಿಂದಲೂ ತಮ್ಮ ಕೈನಿಂದ ಹಣ ಪಾವತಿಸುತ್ತಿದ್ದಾರೆ.

ಇನ್ನು ನಿರ್ವಾಹಕರಷ್ಟೇ ಅಲ್ಲದೆ ನಗದು ಶಾಖೆಯ ಸಿಬ್ಬಂದಿಗಳು ಕೂಡ ತೀವ್ರ ಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಕಚೇರಿಯಲ್ಲಿರುವ ಅಧಿಕಾರಿಗಳು ಶೀಘ್ರ ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಬಸ್‌ಗಳಲ್ಲಿ ಅಳವಡಿಸಿರುವ ಕ್ಯೂಆರ್‌ ಕೋಡ್‌ಅನ್ನು ತಾತ್ಕಾಲಿಕವಾಗಿ ಮರೆ ಮಾಡುವ ನಿರ್ಧಾರವನ್ನಾದರೂ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ನಿತ್ಯ ಜನರೊಂದಿಗೆ ಒಡನಾಟ ಇಟ್ಟುಕೊಂಡಿರುವ ಚಾಲನಾ ಸಿಬ್ಬಂದಿಗಳು ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ಕಳೆದ ಮೂರು ದಿನಗಳಿಂದ ಕಾಯುತ್ತಿದ್ದಾರೆ. ಆದರೆ ಈವರೆಗೂ ಅದಕ್ಕೆ ಮುಕ್ತಿ ಸಿಕ್ಕಿಲ್ಲ. ಇದರಿಂದ ಬಸ್‌ ಹತ್ತಿದ ಕೂಡಲೇ ಪ್ರಯಾಣಿಕರು ಕ್ಯೂಆರ್‌ ಕೋಡ್‌ನಲ್ಲಿ ಸ್ಕ್ಯಾನ್‌ ಮಾಡಿ ಟಿಕೆಟ್‌ಕೊಡಿ ಎಂದು ನಿರ್ವಾಹಕರಿಗೆ ಹೇಳುತ್ತಿದ್ದಾರೆ. ಇದರಿಂದ ನಿರ್ವಾಹಕರು ಕೂಡ ವಿಧಿ ಇಲ್ಲದೆ ಟಿಕೆಟ್‌ ಕೊಡಬೇಕಾದ ಸ್ಥಿತಿ ಇದೆ.

ಹೀಗಾಗಿ ತುರ್ತಾಗಿ ಸಂಸ್ಥೆಯ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಗಮನಿಸಿ ಪರಿಹಾರ ಮಾಡಬೇಕು. ಇಲ್ಲ ಎಂದರೆ ಕೂಡಲೇ ಕ್ಯೂಆರ್‌ ಕೋಡ್‌ಅನ್ನು ತಾತ್ಕಾಲಿಕವಾಗಿ ಪೇಪರ್‌ ಅಥವಾ ಯಾವುದಾದರೂ ಒಂದು ವಸ್ತುವಿನಿಂದ ಮರೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Megha
the authorMegha

Leave a Reply

error: Content is protected !!