CRIMENEWSನಮ್ಮರಾಜ್ಯ

KSRTC ಮಂಡ್ಯ: ಫ್ರೀ ಟಿಕೆಟ್‌ ಪಡೆದು ಮಾರ್ಗಮಧ್ಯೆ ಇಳಿದ ಮಹಿಳೆ- ಕೇಳಿದ ಕಂಡಕ್ಟರ್‌ಗೆ ಕಾಲರ್‌ ಹಿಡಿದು ಹೊಡೆದಳು

ವಿಜಯಪಥ ಸಮಗ್ರ ಸುದ್ದಿ

ಶ್ರೀರಂಗಪಟ್ಟಣ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಶಕ್ತಿ ಯೋಜನೆಯಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬಸ್‌ ನಿರ್ವಾಹಕರ ಮೇಲೆ ಹಲ್ಲೆ ಮಾಡಿ ರಂಪಾಟ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ಭಾನುವಾರ ಮೈಸೂರಿನಿಂದ ತುಮಕೂರಿಗೆ ಕೆಎಸ್‌ಆರ್‌ಟಿಸಿ ಬಸ್ ತೆರಳುತ್ತಿತ್ತು. ಮಹಿಳೆಯು ಮೈಸೂರಿನಿಂದ ಬಸ್ ಹತ್ತಿ ತುಮಕೂರಿಗೆ ಶಕ್ತಿ ಯೋಜನೆಯಡಿ ಉಚಿತ ಟಿಕೆಟ್ ಪಡೆದಿದ್ದರು. ಆದರೆ, ಶ್ರೀರಂಗಪಟ್ಟಣದಲ್ಲಿ ಇಳಿದು ಹೊರಟಿದ್ದಾರೆ. ಅದನ್ನು ಗಮನಿಸಿದ ಕಂಡಕ್ಕರ್ ಇಲ್ಲಿ ಏಕೆ ಇಳಿಯುತ್ತಿದ್ದೀರಿ ಎಂದು ಕೇಳಿ, ನಿಯಮವನ್ನು ಪಾಲಿಸುವಂತೆ ತಿಳಿಸಿದ್ದಾರೆ.

ಅಲ್ಲದೆ ನೀವು ತುಮಕೂರಿಗೆ ಟಿಕೆಟ್ ಪಡೆದಿರುವುದು ಹೀಗೆ ಮಧ್ಯದಲ್ಲಿ ಇಳಿದರೆ ಚೆಕಿಂಗ್ ಬಂದಾಗ ನಮಗೆ ತೊಂದರೆಯಾಗುತ್ತದೆ ಎಂದು ಮುಂದೆ ಆಗುವ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ. ಆದರೂ ಕೂಡ ಮಹಿಳೆ ಹೋಗಲು ಮುಂದಾಗಿದ್ದು ಅಲ್ಲದೆ ಬಾಯಿಗೆ ಬಂದಂತೆ ಉತ್ತರ ನೀಡಿದ್ದಾರೆ. ವಾಗ್ವಾದ ಮಾಡಿದ್ದಾಳೆ.

ಆಗ ಬಸ್‌ ನಿಲ್ದಾಣದಲ್ಲಿದ್ದ ಟಿಸಿ ಬಳಿ ನಿರ್ವಾಹಕರು ಕರೆದುಕೊಂಡು ಹೋಗಿದ್ದಕ್ಕೆ ಕೆಂಡಾಮಂಡಲವಾದ ಮಹಿಳೆ ನಿಲ್ದಾಣದಲ್ಲೇ ಡ್ಯೂಟಿ ಮೇಲೆ ಇರುವ ಕಂಡಕ್ಟರ್ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ರಂಪಾಟ ಮಾಡಿದ್ದಾಳೆ. ಅಷ್ಟೇ ಅಲ್ಲದೇ ಒಂದೆರಡು ಏಟು ಕೂಡ ಹೊಡೆದಿದ್ದಾಳೆ.

ಮಾರ್ಗ ಮಧ್ಯೆಯೇ ಇಳಿದು ಹೋದರೆ ನಮಗೆ ಸಮಸ್ಯೆ!: ಶಕ್ತಿ ಯೋಜನೆಯಡಿ ಟಿಕೆಟ್ ಪಡೆದ ಮಹಿಳೆಯರು ಮಾರ್ಗ ಮಧ್ಯೆ ಬಸ್ನಿಂದ ಇಳಿದಾಗ ಕಂಡಕ್ಟರ್‌ಗಳಿಗೆ ಸಮಸ್ಯೆ ಆಗುತ್ತಿದೆ. ಟಿಕೆಟ್ ಚೆಕಿಂಗ್‌ಗೆ ಬಂದಾಗ ಕಂಡಕ್ಟರ್ ಉತ್ತರ ನೀಡಬೇಕಾಗುತ್ತದೆ. ಹೀಗಾಗಿ, ಮಾರ್ಗ ಮಧ್ಯೆ ಇಳಿದು ಹೋಗದಂತೆ ಮಹಿಳೆಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಮಹಿಳೆ ಬಾಯಿಗೆ ಬಂದಂತೆ ಮಾತನಾಡಿ ಎಳೆದಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿ ಬಸ್ ಕಂಡಕ್ಟರ್‌ ಒಬ್ಬರು ತಿಳಿಸಿದ್ದಾರೆ.

ಸಂಸ್ಥೆಯ ನೌಕರರ ಸುರಕ್ಷತೆ ಎಲ್ಲಿ?: ಈ ಬಗ್ಗೆ ಕರ್ನಾಟಕ ಪೋರ್ಟ್ ಪೋಲೀಯೋ ಎಕ್ಸ್ ಪೇಜ್‌ನಲ್ಲಿ ವಿಡಿಯೋ ಹಂಚಿ ಕೊಂಡು ಮಹಿಳೆಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ. ಆಘಾತಕಾರಿ ಸಂಗತಿಯೆಂದರೆ, ಹಲವಾರು ಸಿಬ್ಬಂದಿ ಇದ್ದರೂ ಮಹಿಳೆಯು ಕಂಡಕ್ಟರ್‌ನ ಕಾಲರ್ ಹಿಡಿದು ಬಲವಂತವಾಗಿ ಎಳೆದರು, ಇದು ಸರ್ಕಾರಿ ಉದ್ಯೋಗಿಯೊಬ್ಬರಿಗೆ ಮಹಿಳೆ ಮಾಡಿದ ಅಗೌರವ. ಯಾವುದೇ ವ್ಯಕ್ತಿಯ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಅಥವಾ ಅವಮಾನಿಸುವ ಹಕ್ಕಿಲ್ಲ.

ಇಂತಹ ಘಟನೆಗಳು ಸಾರಿಗೆ ಸಿಬ್ಬಂದಿಯನ್ನು ಕುಗ್ಗಿಸುವುದಲ್ಲದೆ ಶಕ್ತಿ ಯೋಜನೆಯಡಿ ಸಾರಿಗೆ ನೌಕರರ ಸುರಕ್ಷತೆ ಮತ್ತು ಘನತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತವೆ. ಸಾರಿಗೆ ನೌಕರರನ್ನು ರಕ್ಷಿಸಲು ಸಂಬಂಧಪಟ್ಟ ಇಲಾಖೆ ಕರಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ಶಕ್ತಿ ಯೋಜನೆ ಜಾರಿ ಬಳಿಕ ಪ್ರತಿದಿನ, ವಿವಿಧ ಬಸ್ ಸೇವೆಗಳಲ್ಲಿ ಮೌಖಿಕ ನಿಂದನೆ, ಕಿರುಕುಳ, ವಾದಗಳು ಮತ್ತು ದೈಹಿಕ ಹಲ್ಲೆಯ ಘಟನೆಗಳು ವರದಿಯಾಗುತ್ತಿವೆ. ಲಕ್ಷಾಂತರ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾರಿಗೆ ನೌಕರರು, ಇಂತಹ ದೌರ್ಜನ್ಯ ಮತ್ತು ಅಸುರಕ್ಷಿತ ವಾತಾವರಣವನ್ನು ಎದುರಿಸುತ್ತಿದ್ದಾರೆ ಎಂದು ಈ ವಿಡಿಯೋ ನೋಡಿದ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

ಕಂಡಕ್ಷರ್‌ಗಳು ಕೆಲಸ ಕಳೆದುಕೊಂಡಿದ್ದಾರೆ: ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಉಚಿತ ಟಿಕೆಟ್ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದೂರದ ಊರುಗಳಿಗೆ ಟಿಕೆಟ್ ಪಡೆದು ದಾರಿ ಮಧ್ಯೆಯೇ ಇಳಿಯುತ್ತಾರೆ. ಟಿಕೆಟ್ ಚೆಕಿಂಗ್ ಬಂದ ಸಂದರ್ಭದಲ್ಲಿ ಸರಿಯಾದ ಲೆಕ್ಕ ನೀಡದ ಕಾರಣ ಕಂಡಕ್ಷರ್‌ಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ನೌಕರರ ಸಂಘಟನೆಗಳ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Megha
the authorMegha

Leave a Reply

error: Content is protected !!