CRIMENEWSನಮ್ಮಜಿಲ್ಲೆ

ಡಿ.13 ರಂದು ಲೋಕ ಅದಾಲತ್: ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ರೇಖಾ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು ಗ್ರಾಮಾಂತರ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದ ಮೇರೆಗೆ 2025 ರ ಡಿಸೆಂಬರ್ 13 ರಂದು ರಾಜ್ಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ. ಬಿ.ಎಸ್.ರೇಖಾ ತಿಳಿಸಿದ್ದಾರೆ.

ಈ ಲೋಕ್ ಅದಾಲತ್‌ನಲ್ಲಿ ಸಾರ್ವಜನಿಕರು ಜಿಲ್ಲೆಯ ಬೆಂಗಳೂರು ಗ್ರಾಮಾಂತರ, ಆನೇಕಲ್, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಬೆಂಗಳೂರು ಪೂರ್ವ ತಾಲೂಕು ಕೃಷ್ಣರಾಜಪುರಂ ನ್ಯಾಯಾಲಯಗಳಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ನಗರಸಭೆ, ಪುರಸಭೆ, ಗ್ರಾಮ ಪಂಚಾಯತಿಗೆ ಭರಿಸಬೇಕಾಗಿರುವ ನೀರಿನ ಕರ, ಆಸ್ತಿ ಕರ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಹಣ ವಸೂಲಾತಿ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು ಎಂದು ದಾಖಲಿಸಿ, ವಿವಿಧ ಪ್ರಕರಣಗಳಾದ ಮೋಟಾರು ವಾಹನ ಅಪಘಾತ ಪರಿಹಾರದ ಪ್ರಕರಣಗಳು.

ಅಸಲು ಧಾವೆಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಭೂಸ್ವಾಧೀನ ಪರಿಹಾರದ ಪ್ರಕರಣಗಳು, ವೈವಾಹಿಕ ಹಾಗೂ ಜೀವಾನಾಂಶ ಪ್ರಕರಣಗಳು, ಕಾನೂನಿನ ಅನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇಚ್ಚಿಸಿದಲ್ಲಿ ಮುಂಚಿತವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳು ಆನೇಕಲ್, ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ಹಾಗೂ ದೇವನಹಳ್ಳಿಗೆ ಆನ್ ಲೈನ್, ವಿಡಿಯೋ ಕಾನ್ಫರೆನ್ಸ್, ಇ-ಮೇಲ್, ಎಸ್.ಎಂ.ಎಸ್, ವಾಟ್ಸಪ್, ಎಲೆಕ್ಟ್ರಾನಿಕ್ ಮೋಡ್, ಖುದ್ದಾಗಿ ಹಾಜರಾಗುವ ಮುಖಾಂತರ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.

ಜತೆಗೆ ನ್ಯಾಯಾಲಯಗಳಲ್ಲಿ, ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು 13.12.2025 ರಂದು ಆಯಾ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಆದಾಲತನ್ನು ಏರ್ಪಡಿಸಲಾಗಿದ್ದು, ಕಕ್ಷಿದಾರರು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮತ್ತು ಖಾಯಂ ಜನತಾ ನ್ಯಾಯಾಲಯಗಳಲ್ಲಿ, ಆನ್ ಲೈನ್, ವಿಡಿಯೋ ಕಾನ್ಫರೆನ್ಸ್, ಇ-ಮೇಲ್, ಎಸ್.ಎಂ.ಎಸ್, ವಾಟ್ಸಪ್, ಎಲೆಕ್ಟ್ರಾನಿಕ್ ಮೋಡ್, ಖುದ್ದಾಗಿ ಹಾಜರಾಗುವ ಮೂಲಕ ಸಂಪರ್ಕಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್ ಮೂಲಕ ರಾಜೀ ಮಾಡಿಕೊಂಡರೆ ನ್ಯಾಯಾಲಯದ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುವುದು ಹಾಗೂ ಲೋಕ್ ಆದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ಮೇಲ್ಮನವಿಗೆ ಅವಕಾಶ ಇರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿ.ಎಸ್ ರೇಖಾ ತಿಳಿಸಿದ್ದಾರೆ.

Megha
the authorMegha

Leave a Reply

error: Content is protected !!