NEWSಕೃಷಿಮೈಸೂರು

ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಮುಂದುವರಿಸಿದರೆ ಅರಣ್ಯ ಕಚೇರಿಗೆ ಮುತ್ತಿಗೆ-ಉಗ್ರ ಪ್ರತಿಭಟನೆ: ರೈತ ಮುಖಂಡರ ಎಚ್ಚರಿಕೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: ನಾಗರಹೊಳೆ, ಬಂಡೀಪುರದಲ್ಲಿ ಸಫಾರಿ ಮುಂದುವರಿಸಿದರೆ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ದಿನದಿಂದ ದಿನಕ್ಕೆ ನಾಗರಹೊಳೆ ಮತ್ತು ಬಂಡೀಪುರ ಕಾಡಂಚಿನಲ್ಲಿ ಹುಲಿ, ಚಿರತೆ ದಾಳಿಯಿಂದ ರೈತರು ಮೃತಪಡುತ್ತಿರುವ ಪ್ರಕರಣ ಹೆಚ್ಚಾದ್ದರಿಂದ ಸಫಾರಿ ಮತ್ತು ರೆಸಾರ್ಟ್‌ಗಳನ್ನು ನಾಟಕೀಯವಾಗಿ ಸ್ಥಗಿತಗೊಳಿಸಿದ್ದು ಮತ್ತೆ ಪುನರ್ ಆರಂಭಮಾಡಲು ಚಿಂತನೆ ನಡೆಸುತ್ತಿರುವುದನ್ನು ಕೈ ಬಿಡದ್ದಿದ್ದರೆ ಅರಣ್ಯ ಇಲಾಖೆಗೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಾಗರಹೊಳೆ, ಬಂಡೀಪುರ ಅಭಯಾರಣ್ಯದ ಕಾಡಂಚಿನ ಪ್ರದೇಶದಲ್ಲಿರುವ ಜಂಗಲ್ ರೆಸಾರ್ಟ್, ಸಫಾರಿ ಮತ್ತು ಹೋಂ ಸ್ಟೇ ಗಳನ್ನು ಸ್ಥಗಿತ ಗೋಳಿಸಿದ್ದು ರಾಜಕಾರಿಣಿಗಳ, ಬಂಡವಾಳ ಹೂಡಿಕೆದಾರರ ಲಾಭಕ್ಕಾಗಿ ಹಾಗೂ ಶ್ರೀಮಂತರ ಮೋಜಿಗಾಗಿ ಕಾಡಂಚಿನ ಗ್ರಾಮಗಳ ರೈತರನ್ನು ಕಾಡು ಪ್ರಾಣಿಗಳಿಗೆ ಬಲಿ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ಕಟುವಾಗಿ ಪ್ರಶ್ನಿಸಿದೆ.

ಬಂಡವಾಳ ಶಾಹಿಗಳು ಹಾಗೂ ರಾಜಕಾರಣಿಗಳ ಪಟ್ಟಭದ್ರ ಹಿತಾಸಕ್ತಿಗಳ ಹೆಸರಿನಲ್ಲಿ ರೆಸಾರ್ಟ್ ನಿರ್ಮಿಸಿ ಅರಣ್ಯ ಸಂಪತ್ತನ್ನು ನಾಶಪಡಿಸಿ ಕಾಡು ಪ್ರಾಣಿಗಳಾದ ಹುಲಿ, ಸಿಂಹ, ಚಿರತೆ, ನವಿಲು ಜಿಂಕೆ ಹೀಗೆ ಅನೇಕ ಪ್ರಾಣಿ ಪಕ್ಷಿಗಳು ಅರಣ್ಯವನ್ನು ಆಶ್ರಯಿಸಿವೆ.

ಈ ನಡುವೆ ರೆಸಾರ್ಟ್ ಮತ್ತು ಸಪಾರಿಗಳ ಹಾವಳಿಯಿಂದ ಕಾಡಿನೊಳಗೆ ರೆಸಾರ್ಟ್ ಗೆ ಬರುವ ಪ್ರವಾಸಿಗರ ವಾಹನ ಶಬ್ದ ಮುಂತಾದ ಕಾರಣಗಳಿಂದ ಪ್ರಾಣಿಗಳು ಕಾಡನ್ನು ಬಿಟ್ಟು ನೀರು, ಆಹಾರಕ್ಕಾಗಿ ನಾಡಿಗೆ ಬರುವುದರಿಂದ ಮಾನವ ಸಂಘರ್ಷಕ್ಕೆ ಕಾರಣವಾಗುತ್ತಿದ್ದು, ರೈತರ ಸಾಕು ಪ್ರಾಣಿಗಳು ಹಾಗೂ ರೈತರನ್ನೇ ಬಲಿ ಪಡೆಯುತ್ತಿವೆ.

ರೈತ ತನ್ನ ಕುಟುಂಬದ ಬದುಕು ಕಟ್ಟಿಕೊಂಡು ದೇಶಕ್ಕಾಗಿ ಆಹಾರ ಬೆಳೆಯುವ ರೈತ ಕಾಡಂಚಿನಲ್ಲಿ ವ್ಯವಸಾಯ ಮಾಡಲು ಹಿಂಜರಿಯುತ್ತಿದ್ದು ಅವರ ಬದುಕು ನಾಶವಾಗುತ್ತಿದೆ. ಸರ್ಕಾರಗಳು ಬಂಡವಾಳ ಶಾಹಿಗಳ ಹಿಡಿತದಲ್ಲಿರುವ ಕಾರಣ ರೆಸಾರ್ಟ್, ಸಫಾರಿ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನು ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಸರಗೂರಿನಲ್ಲಿ ನಾಲ್ಕು ಜನ ರೈತರನ್ನು ಬಲಿ ಪಡೆದ ಹುಲಿ ದಾಳಿಯ ಬಗ್ಗೆ ರಾಜ್ಯಾದ್ಯಂತ ಅರಣ್ಯದ ಒಳಗಿನ ರೆಸಾರ್ಟ್, ಸಫಾರಿಗಳನ್ನು ಮುಚ್ಚುವಂತೆ ರೈತ ಸಂಘಟನೆಗಳು ವಿರೋಧ ಮಾಡುತ್ತಿದ್ದರೂ ಸರ್ಕಾರ ಯಾವುದೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದೆ ನಾಟಕವಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜಕಾರಣಿಗಳ, ಬಂಡವಾಳ ಶಾಹಿಗಳ ಕೆಲವು ಪಟ್ಟ ಭದ್ರ ಹಿತಾ ಶಕ್ತಿಗಳು ರೆಸಾರ್ಟ್ ಪರವಾಗಿ ಪತ್ರಿಕೆ ಮತ್ತು ಮಾಧ್ಯಮಗಳ ಮೂಲಕ ಹೇಳಿಕೆ ಕೊಡುತ್ತಿರುವುದು ಸರಿಯಾದ ಕ್ರಮವಲ್ಲ, ಕಾಡಿನೊಳಗಿರುವ ರೆಸಾರ್ಟನ್ನು ಬೇರೆ ಎಲ್ಲಿಯಾದರೂ ನಿರ್ಮಿಸಿ ಕೆಲಸ ಮಾಡುವ ಸಿಬ್ಬಂದಿಗೆ ಕೆಲಸ ಕೊಡಬಹುದು. ಆದರೆ ಕಾಡಿನ ಕ್ರೂರ ಮೃಗಗಳಾದ ಹುಲಿ, ಚಿರತೆ ಕಾಡುಪ್ರಾಣಿಗಳನ್ನು ನಾಡಿನಲ್ಲಿ ವಾಸಮಾಡಲು ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಆದಕಾರಣ ಅರಣ್ಯದೊಳಗೆ ಅಕ್ರಮವಾಗಿ ತಲೆಯೆತ್ತಿರುವ ರೆಸಾರ್ಟ್ ಗಳನ್ನು ಮುಖ್ಯಮಂತ್ರಿಗಳು ಸಂಬಂಧಪಟ್ಟ ಅರಣ್ಯ ಇಲಾಖೆ ಸಚಿವರು ಕ್ರಮ ಕೈಗೊಂಡು ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು ನಮ್ಮ ಎಚ್ಚರಿಕೆಯನ್ನು ಕಡೆಗಣಿಸಿ ಮುಂದುವರಿದರೆ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಉಗ್ರ ಹೋರಾಟವನ್ನು ಎದುರಿಸ ಬೇಕಾಗುತ್ತದೆ ಎಂದು ಜಂಟಿ ಪತ್ರಿಕಾ ಹೇಳಿಕೆ ಮೂಲಕ ಎಚ್ಚರಿಸಿದ್ದಾರೆ.

Megha
the authorMegha

Leave a Reply

error: Content is protected !!