ನ್ಯೂಡೆಲ್ಲಿ: ನಮ್ಮ ದೇಶದ ರೂಪಾಯಿ ಡಾಲರ್ ವಿರುದ್ಧ ದಾಖಲೆ ಮಟ್ಟದಲ್ಲಿ ಮಹಾ ಕುಸಿತ ಕಾಣುತ್ತಿದೆ. ಕಳೆದ ಮೇ ತಿಂಗಳಿನಲ್ಲಿ 1 ಡಾಲರ್ 84 ರೂ.ಗೆ ವಿನಿಮಯ ಆಗುತ್ತಿದ್ದರೆ ಈಗ 90.16ರೂ. ಗಡಿ ದಾಟಿದೆ.

ಈ ವರ್ಷ ರೂಪಾಯಿ ಮೌಲ್ಯ 5% ಕುಸಿದಿದೆ. ವಿಶ್ವದ ಜಿಡಿಪಿ (GDP) ಬೆಳವಣಿಗೆಯಲ್ಲಿ ಭಾರತ ನಿರಂತರವಾಗಿ ಮೊದಲ ಸ್ಥಾನದಲ್ಲಿ ಮುಂದುವರಿಯುತ್ತಿದೆ. ಹೀಗಿದ್ದರೂ ರೂಪಾಯಿ ಮೌಲ್ಯ (Rupee Value) ಕುಸಿಯುತ್ತಿದೆ.
ರೂಪಾಯಿ ಮೌಲ್ಯ ಕುಸಿಯುತ್ತಿರುವುದಕ್ಕೆ ಏನು ಕಾರಣ? ರೂಪಾಯಿ ಮೌಲ್ಯ ಕುಸಿಯದಂತೆ ಮಾಡಲು ಸರ್ಕಾರ ಮತ್ತು ಆರ್‌ಬಿಐ (RBI) ಏನು ಕ್ರಮಕೈಗೊಂಡಿದೆ ಇತ್ಯಾದಿ ವಿವರಗಳ ಇಲ್ಲಿ ವಿವರವಾಗಿ ನೋಡೋಣ.
ಪವರ್‌ಫುಲ್ ಕರೆನ್ಸಿ ಡಾಲರ್!: ರೂಪಾಯಿ ಮೌಲ್ಯ ಯಾಕೆ ಕುಸಿಯುತ್ತಿದೆ ಅಂತ ತಿಳಿದುಕೊಳ್ಳುವ ಮೊದಲು ಡಾಲರ್ (Dollar) ಇಷ್ಟೊಂದು ಪವರ್‌ಫುಲ್ ಕರೆನ್ಸಿ ಹೇಗಾಯಿತು ಎಂಬ ಪ್ರಶ್ನೆ ಕಾಡುತ್ತದೆ. ಡಾಲರ್ ವಿಶ್ವದ ಪವರ್‌ಫುಲ್ ಕರೆನ್ಸಿ ಯಾಕಾಯ್ತು ಎನ್ನುವುದಕ್ಕೆ ಹಲವು ಕಾರಣ ನೀಡಬಹುದು.
ಅದರಲ್ಲೀ ಮುಖ್ಯವಾಗಿ ಸಿಫ್ಟ್ ನೆಟ್‌ವರ್ಕ್‌ನಿಂದ ಪವರ್‌ಫುಲ್ ಆಗಿದೆ. ಈಗ ವಿವಿಧ ದೇಶಗಳ ನಡುವೆ ವೇಗವಾಗಿ ನಗದು ವ್ಯವಹಾರ ಸ್ವಿಫ್ಟ್ ವ್ಯವಸ್ಥೆಯ (SWIFT -Society for Worldwide Interbank Financial Telecommunication) ಮೂಲಕ ನಡೆಯುತ್ತಿದೆ. ಈ ಸ್ವಿಫ್ಟ್ ನೆಟ್‍ವರ್ಕ್‌ನಲ್ಲೂ ಡಾಲರ್ ಅನ್ನೇ ಪರಿಗಣನೆ ಮಾಡಲಾಗಿದೆ.
ಅರಬ್ ರಾಷ್ಟ್ರಗಳಿಗೆ ಅಮೆರಿಕ ಸೇನಾ ನೆರವು ನೀಡುತ್ತಿದೆ. ಅಷ್ಟೇ ಅಲ್ಲದೇ ಹಲವು ಕಡೆ ತನ್ನ ನೆಲೆಗಳನ್ನು ಸಹ ಸ್ಥಾಪನೆ ಮಾಡಿದೆ. ಅರಬ್ ರಾಷ್ಟ್ರಗಳು ಕಚ್ಚಾ ತೈಲವನ್ನು ಡಾಲರ್‌ನಲ್ಲೇ ಮಾರಾಟ ಮಾಡುತ್ತಿವೆ. ಅಮೆರಿಕ ಮಾತ್ರವಲ್ಲ ಕೆಲ ಮುಂದುವರಿಯುತ್ತಿರುವ ಮತ್ತು ಕೆಲ ಹಿಂದುಳಿದ ದೇಶಗಳಲ್ಲೂ ಡಾಲರ್ ಅನ್ನೇ ಕರೆನ್ಸಿಯಾಗಿ ಬಳಸಲಾಗುತ್ತಿದೆ.
ರೂಪಾಯಿ ಕುಸಿತಕ್ಕೆ ಕಾರಣ?: ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಕರೆನ್ಸಿ ಕುಸಿತ ಹೆಚ್ಚಾಗಿದೆ. ರಷ್ಯದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ದಂಡವಾಗಿ ಟ್ರಂಪ್ (Donald Trump) ಭಾರತದ ಕೆಲ ವಸ್ತುಗಳ ಮೇಲೆ 50% ಸುಂಕ ವಿಧಿಸಿದ್ದಾರೆ. ಈ ನಿರ್ಧಾರದಿಂದ ವ್ಯಾಪಾರಕ್ಕೆ ಪೆಟ್ಟು ಬಿದ್ದಿದೆ.
ಭಾರತದಿಂದ ಅಮೆರಿಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳು ರಫ್ತಾದರೆ ಅಲ್ಲಿಂದ ಕಡಿಮೆ ಪ್ರಮಾಣದಲ್ಲಿ ವಸ್ತುಗಳು ಆಮದಾಗುತ್ತಿವೆ. ಭಾರತದ ಜತೆ ವ್ಯಾಪಾರ ಕೊರತೆ ಇರುವ ಕಾರಣ ಟ್ರಂಪ್ ಈಗ ಸುಂಕ ಏರಿಸಿದ್ದಾರೆ. ಇದರಿಂದ ವ್ಯಾಪಾರದಲ್ಲಿ ಅನಿಶ್ಚಿತತೆ ಎದ್ದಿದೆ.
FII ಹೂಡಿಕೆ ಹಿಂತೆಗೆತ: ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದ ಹಣವನ್ನು ಹಿಂದಕ್ಕೆ ಪಡೆಯತ್ತಿದ್ದಾರೆ. ಮೊದಲು ಭಾರತದ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಆಡಿದ್ದೇ ಆಟ ಎನ್ನುವಂತಿತ್ತು. ಅವರು ಲಾಭ ಮಾಡುತ್ತಿದ್ದರೆ ಭಾರತದ ಹೂಡಿಕೆದಾರರಿಗೆ ನಷ್ಟವಾಗುತ್ತಿತ್ತು. ಈ ಕಾರಣಕ್ಕೆ ಕೇಂದ್ರ ಸರ್ಕಾರ 2025-26 ಬಜೆಟ್‌ನಲ್ಲಿ ಎಫ್‌ಐಐ ಅಂದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಕ್ಯಾಪಿಟಲ್ ಗೇನ್ಸ್ 10% ಇದ್ದ ತೆರಿಗೆಯನ್ನು 12.5% ಏರಿಕೆ ಮಾಡಿತ್ತು. ಈ ಕಾರಣಕ್ಕೆ ಹೂಡಿಕೆದಾರರು ಭಾರತದ ಮಾರುಕಟ್ಟೆಯಿಂದ ಹಿಂದೆ ಸರಿಯುತ್ತಿದ್ದಾರೆ.
ವಿದೇಶಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಿದರೆ ಡಾಲರ್ ರೂಪಾಯಿ ಆಗಿ ಪರಿವರ್ತನೆ ಆಗುತ್ತದೆ. ಆದರೆ ಟ್ರಂಪ್ ತೆರಿಗೆ ಸಮರ ಆರಂಭಿಸಿದ ಬಳಿಕ ನಿರಂತರವಾಗಿ ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ಜುಲೈನಿಂದ ಹಿಡಿದು ನವೆಂಬರ್‌ವರೆಗೆ ನಿರಂತರವಾಗಿ ಹಣವನ್ನು ಹಿಂದಕ್ಕೆ ತೆಗೆದಿದ್ದಾರೆ. ಹಣವನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆ ಈಗಿನಿಂದ ಆರಂಭವಾಗಿದಲ್ಲ. 2021 ರಿಂದಲೇ ಆರಂಭವಾಗಿತ್ತು. 2024 ರಲ್ಲಿ 3.04 ಲಕ್ಷ ಕೋಟಿ ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದರೆ ಈ ವರ್ಷ 2.80 ಲಕ್ಷ ಕೋಟಿ ರೂ. ಹಣವನ್ನು ಹಿಂದಕ್ಕೆ ಪಡೆದಿದ್ದಾರೆ.
ಅಮೆರಿಕದ ಡಾಲರ್ ಬಲಗೊಂಡಿದೆ ಜತೆಗೆ ಕೋವಿಡ್ ನಂತರ ಮತ್ತೆ ಚೀನಾದ ಆರ್ಥಿಕತೆ ಉತ್ತಮವಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಚೀನಾದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಪರಿಣಾಮ ಭಾರತದಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಣವನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ಹಣವನ್ನು ಹಿಂದಕ್ಕೆ ಪಡೆದರೂ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆಯನ್ನು ಹಣ ಹಾಕುತ್ತಿರುವ ಕಾರಣ ಭಾರತ ಮಾರುಕಟ್ಟೆಯ ಮೇಲೆ ಅಷ್ಟೊಂದು ದೊಡ್ಡ ಮಟ್ಟದ ಕುಸಿತ ಸಂಭವಿಸಿಲ್ಲ.
ತೈಲ ಆಮದು: ಕಚ್ಚಾ ತೈಲ ಮತ್ತು ಎನ್‌ಎನ್‌ಜಿ ಅಂದರೆ ದ್ರವೀಕೃತ ನೈಸರ್ಗಿಕ ಅನಿಲವನ್ನು ಅರಬ್ ರಾಷ್ಟ್ರಗಳಿಂದ ಭಾರತ ಅಮದು ಮಾಡಿಕೊಳ್ಳುತ್ತಿದೆ. ಈ ಎಲ್ಲ ವ್ಯವಹಾರಗಳು ಡಾಲರ್‌ನಲ್ಲೇ ನಡೆಯುವ ಕಾರಣ ಅಟೋಮ್ಯಾಟಿಕ್ ಆಗಿ ಡಾಲರ್ ಬಲಗೊಳ್ಳುತ್ತಿದೆ.
ಚಿನ್ನ ಆಮದು: ಭಾರತ ಈಗ ಭಾರೀ ಪ್ರಮಾಣದಲ್ಲಿ ಚಿನ್ನವನ್ನು ಆಮದು ಮಾಡುತ್ತಿದೆ. ಹಬ್ಬ ಹರಿದಿನಗಳು ಬಂದಾಗ ಜನ ಚಿನ್ನ ಖರೀದಿಸುತ್ತಾರೆ. ಇನ್ನೊಂದು ಕಡೆ ಆರ್‌ಬಿಐ ಚಿನ್ನವನ್ನು ಖರೀದಿಸುತ್ತಿದೆ. ಚಿನ್ನ ಭಾರತಕ್ಕೆ ಬರಬೇಕಾದರೆ ಡಾಲರ್‌ನಲ್ಲೇ ಖರೀದಿ ಮಾಡಬೇಕಾಗುತ್ತದೆ. ಇದರ ಜತೆ ಇಸ್ರೇಲ್-ಹಮಾಸ್ ಯುದ್ಧ, ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಲ್ಲಿ ಅನಿಶ್ಚಿತತೆ ಇದೆ. ಈ ಎಲ್ಲ ಕಾರಣಕ್ಕೆ ರೂಪಾಯಿ ಮೌಲ್ಯ ಕಡಿಮೆಯಾಗುತ್ತಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ? ರೂಪಾಯಿ ಮೌಲ್ಯ ಕುಸಿದರೆ ಡಾಲರ್‌ನಲ್ಲಿ ತಮ್ಮ ಉತ್ಪನ್ನ- ಸೇವೆಗಳಿಗೆ ಹಣ ಸ್ವೀಕರಿಸುವ ಐಟಿ ಕಂಪನಿಗಳಿಗೆ ಲಾಭವಾಗಲಿದೆ. ಆದರೆ ವಿದೇಶ ಪ್ರವಾಸ, ಶಿಕ್ಷಣ ವೈದದ್ಯಕೀಯ ಸೇವೆ ಬಯಸುವ ಭಾರತೀಯರಿಗೆ ದರ ಏರಿಕೆಯಿಂದ ತೊಂದರೆಯಾಗಲಿದೆ.
1 ಡಾಲರ್ – ಯಾವ ವರ್ಷ ಎಷ್ಟು ರೂಪಾಯಿ?
1975 – 8.39 ರೂ.
1990 -17.01 ರೂ.
2000 – 44.31 ರೂ.
2012 – 53.06 ರೂ.
2014 – 60.75 ರೂ.
2018 – 70.64 ರೂ.
2024 – 83.28 ರೂ.
2025 ಜನವರಿ – 85.56 ರೂ.
2025 ಡಿಸೆಂಬರ್ – 90.16 ರೂ.
ಸರ್ಕಾರ, ಆರ್‌ಬಿಐ ಏನು ಮಾಡುತ್ತಿದೆ? ಭಾರತ ಸರ್ಕಾರ ಈಗ ಕಚ್ಚಾ ತೈಲ ಅವಲಂಬನೆ ಕಡಿಮೆ ಮಾಡಲು ಇ20 ನೀತಿಯನ್ನು ಈಗಾಗಲೇ ಜಾರಿ ಮಾಡಿದೆ. ಪರಿಣಾಮ ಈಗ 80% ಪೆಟ್ರೋಲ್ 20% ಎಥೆನಾಲ್ ಇರುವ ಪೆಟ್ರೋಲ್ ಬಂಕ್‌ನಲ್ಲಿ ಸಿಗುತ್ತಿದೆ.
ಎರಡನೇ ಭಾರತ ಮತ್ತು ಅಮೆರಿಕದ ಮಧ್ಯೆ ವ್ಯಾಪಾರ ಒಪ್ಪಂದ ಆಗದೇ ಇರುವುದು ಮುಖ್ಯ ಕಾರಣ. ಈ ವರ್ಷದ ಒಳಗಡೆ ಭಾರತ ಮತ್ತು ಅಮೆರಿಕ ಮಧ್ಯೆ ಮಹತ್ವದ ಟ್ರೇಡ್ ಡೀಲ್ ಅಂತಿಮವಾಗುವ ಸಾಧ್ಯತೆಯಿದೆ. ಸಹಿ ಬಿದ್ದರೆ ಹೂಡಿಕೆದಾರರು ಭಾರತಕ್ಕೆ ಮತ್ತೆ ಮರಳಬಹುದು.
ರೂಪಾಯಿ ಕುಸಿತವನ್ನು ತಡೆಯಲು ಆರ್‌ಬಿಐ ಜುಲೈ ತಿಂಗಳಲ್ಲಿ ಡಾಲರ್ ಖರೀದಿಸುವುದನ್ನೇ ಸ್ಥಗಿತಗೊಳಿಸಿತ್ತು. ಈ ಮೂಲಕ 11 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಡಾಲರ್ ಖರೀದಿಯನ್ನು ಕೇಂದ್ರೀಯ ಬ್ಯಾಂಕ್ ಸ್ಥಗಿತಗೊಳಿಸಿತ್ತು. ರೂಪಾಯಿ ಮೌಲ್ಯ ಕುಸಿತ ತಡೆಯಲು 2.54 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿತ್ತು.
ಅಕ್ಟೋಬರ್ 1ರಂದು ನಡೆದ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಆರ್‌ಬಿಐ ರೂಪಾಯಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಬಲ ಕರೆನ್ಸಿಯಾಗಿ ರೂಪಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಭೂತಾನ್, ನೇಪಾಳ ಮತ್ತು ಶ್ರೀಲಂಕಾದ ಅನಿವಾಸಿಗಳಿಗೆ ವ್ಯಾಪಾರ ಸಂಬಂಧಿತ ವಹಿವಾಟುಗಳಿಗಾಗಿ ಭಾರತೀಯ ರೂಪಾಯಿಗಳಲ್ಲಿ ಸಾಲ ನೀಡಲು ಆರ್‌ಬಿಐ ಅನುಮತಿ ನೀಡಿದೆ.
ಡಾಲರ್ ಅವಲಂಬನೆ ತಪ್ಪಿಸಲು ಇನ್ನೊಂದು ದೇಶದ ಮಧ್ಯೆ ರೂಪಾಯಿಯಲ್ಲಿ ವ್ಯವಹಾರ ನಡೆಸಲು ಆರ್‌ಬಿಐ ಮುಂದಾಗಿದೆ. ಇದು ಹೇಗೆ ಅಂದರೆ ಈಗ ಹೇಗೆ ನಡೆಯುತ್ತಿದೆಯೋ ಅದೇ ರೀತಿ ವ್ಯವಹಾರ ನಡೆಯುತ್ತದೆ. ಆದರೆ ಅಮೆರಿಕದ ಬ್ಯಾಂಕ್‌ನಲ್ಲಿ ಅಲ್ಲ. ರೂಪಾಯಿಯಲ್ಲಿ ವ್ಯವಹಾರ ನಡೆಸಲು ವೊಸ್ಟ್ರೋ ಮತ್ತು ನೋಸ್ಟ್ರೋ ಖಾತೆಯನ್ನು ತೆರೆಯಬೇಕಾಗುತ್ತದೆ.
ವಿದೇಶದ ಬ್ಯಾಂಕು ಭಾರತದಲ್ಲಿ ಬ್ರ್ಯಾಂಚ್ ಓಪನ್ ಮಾಡಿ ರೂಪಾಯಿ ಖಾತೆಯನ್ನು ತೆರೆದರೆ ಅದನ್ನು ವೊಸ್ಟ್ರೋ ಖಾತೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಬ್ರ್ಯಾಂಚ್ ಓಪನ್ ಮಾಡದ ವಿದೇಶಿ ಬ್ಯಾಂಕ್ ಭಾರತೀಯ ಬ್ಯಾಂಕ್‌ನಲ್ಲಿ ರೂಪಾಯಿ ಖಾತೆ ತೆರೆದರೆ ಅದನ್ನು ನೋಸ್ಟ್ರೋ ಎಂದು ಕರೆಯಲಾಗುತ್ತದೆ. ಆಗಸ್ಟ್‌ನಲ್ಲಿ ವಿದೇಶಿ ಹೂಡಿಕೆದಾರರು ತಮ್ಮ ವೋಸ್ಟ್ರೋ ಖಾತೆಗಳಮೂಲಕ ಕೇಂದ್ರ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಲು ಆರ್‌ಬಿಐ ಅವಕಾಶ ನೀಡಿತ್ತು.
ಆರ್‌ಬಿಐ ಹಣಕಾಸು ನೀತಿ ಸಮಿತಿ ಸಭೆ ಡಿ.3 ರಿಂದ ಆರಂಭವಾಗಿದ್ದು ನಾಳೆ ಮುಕ್ತಾಯವಾಗಲಿದೆ. ಈ ಸಭೆಯಲ್ಲಿ ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯದಂತೆ ಮಾಡಲು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಹಾವು ಏಣಿಯಂತೆ ಒಮ್ಮೆ ಡಾಲರ್ ಮೌಲ್ಯ ಏರಿಕೆ ಕಂಡರೆ ಮತ್ತೊಮ್ಮೆ ರೂಪಾಯಿ ಮೌಲ್ಯ ಏರಿಕೆ ಕಂಡು ಕುಸಿತ ಕಾಣುತ್ತಿದೆ. ಎಲ್ಲಿಯವರೆಗೆ ಅಮೆರಿಕದ ಜತೆ ವ್ಯಾಪಾರ ಮಾತುಕತೆಗೆ ಸಹಿ ಬೀಳೋದಿಲ್ವೋ ಅಲ್ಲಿಯವರೆಗೆ ರೂಪಾಯಿ ಮೌಲ್ಯ ಕುಸಿಯವ ಸಾಧ್ಯತೆಯಿದೆ.
Related










