ಮೈಸೂರು: ಕನಿಷ್ಠ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೂಡಲೇ ಆರಂಭಿಸಬೇಕು ಹಾಗೂ ಬಣ್ಣಾರಿ ಕಾರ್ಖಾನೆ ಕಬ್ಬು ಹಣ ಪಾವತಿಸಬೇಕು ಎಂದು ಒತ್ತಾಯಿಸಿ ನೂರಾರು ರೈತರು ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನಾ ಧರಣಿ ಮಾಡಿದರು.

ಧರಣಿ ನೇತೃತ್ವ ವಹಿಸಿದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಭತ್ತ ಖರೀದಿ ಕೇಂದ್ರ ಆರಂಭಿಸಿದ್ದೇವೆ ಎಂದು ರೈತರ ನೋಂದಣಿಯನ್ನು ಮಾಡಿಕೊಳ್ಳುವ ಮೂಲಕ ವಿಳಂಬ ಮಾಡುತ್ತಿದ್ದಾರೆ. ಭತ್ತದ ಬೆಲೆ ಖುಷಿಯುತ್ತಿದೆ, ವಿಳಂಬವಾಗಿ ಕನಿಷ್ಠ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭವಾದರೆ ರೈತರಿಗೆ ಅನುಕೂಲವಲ್ಲ, ದಳ್ಳಾಳಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಹೀಗಾಗಿ ಕೂಡಲೇ ಭತ್ತ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕಬ್ಬಿಗೆ ಹೆಚ್ಚುವರಿ ಟನ್ ಕಬ್ಬಿಗೆ ನೂರು ರೂಪಾಯಿ ನಿಗದಿ ಮಾಡಿರುವುದನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೂಡಲೇ ಕೊಡಿಸಬೇಕು. ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ರೈತರಿಗೆ ಕೊಡಿಸಬೇಕು ಎಂದು ಆಗ್ರಹಿಸಿದರು.
ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ನ್ಯಾಯ ಸಮ್ಮತ ಬೆಲೆ ನೀಡುತ್ತಿಲ್ಲ. ಆದರೆ ರೈತರನ್ನು ಹೆಚ್ಚು ಕಬ್ಬು ಬೆಳೆಯುವಂತೆ ಆಮಿಷ ಒಡುತ್ತಿದ್ದಾರೆ ಇಂಥ ಆಮಿಷಕ್ಕೆ ರೈತರು ಬಲಿ ಆಗಬಾರದು ಎಂದು ಎಚ್ಚರಿಸಿದರು.
ಇನ್ನು ಜನಸಾಮಾನ್ಯರು ತಿನ್ನುವ ಭತ್ತಕ್ಕೆ ಎಂಎಸ್‌ಪಿ ಕುಂಟಾಲ್‌ಗೆ 2,369 ರೂ. ದನ, ಕರುಗಳು, ಪ್ರಾಣಿಗಳು ತಿನ್ನುವ ಮೆಕ್ಕೆಜೋಳಕ್ಕೆ 2,400 ಈ ರೀತಿಯ ಬೆಲೆ ನಿಗದಿ ಮಾಡುವುದರಿಂದ ರೈತರ ಬದುಕು ನರಕವಾಗುತ್ತಿದೆ. ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಭತ್ತದ ಬೆಂಬಲ ಬೆಲೆಯನ್ನು 3000 ರೂ.ಗೆ ಹೆಚ್ಚಳ ಮಾಡಬೇಖು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಇದೇ ಡಿ.11ರಿಂದ ರೈತರಿಂದ ಭತ್ತ, ರಾಗಿ ಖರೀದಿ ಕೇಂದ್ರ ಆರಂಭಿಸುವುದಾಗಿ ಹಾಗೂ ಕಬ್ಬುದರ ಹೆಚ್ಚುವರಿ ಹಣ ಕೊಡಿಸುವ ಬಗ್ಗೆ ಹಾಗೂ ಸಮಸ್ಯೆಗಳ ಚರ್ಚಿಸುವ ಬಗ್ಗೆ ಡಿ. 29ರಂದು ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆ ಕರೆಯುವ ಭರವಸೆ ನೀಡಿದರು.
ಪಿ.ಆರ್.ಪಾಂಡೆನ್ ಬಿಡುಗಡೆ ಮಾಡಿ:
ತಮಿಳುನಾಡಿನ ರೈತ ನಾಯಕ ಪಿ.ಆರ್. ಪಾಂಡೆನ್ ಅವರನ್ನು ಕೂಡಲೇ ಬಿಡುಗಡೆಯಾಗಬೇಕು ಎಂದು ಇದೇ ಪ್ರತಿಭಟನೆಯ ವೇಳೆ ಒತ್ತಾಯಿಸಲಾಯಿತು. 15 ವರ್ಷಗಳ ಹಿಂದೆ ಕೃಷಿ ಜಮೀನಿನಲ್ಲಿ ಒಎನ್‌ಜಿಸಿ ಕಂಪನಿಯವರು ಅನಿಲ ತೆಗೆಯುತ್ತಿದ್ದಾಗ ಅದನ್ನು ವಿರೋಧಿಸಿ ರೈತರು ಹಾಗೂ ಜನರ ಪರವಾಗಿ ಹೋರಾಟ ನಡೆಸಿದ ತಮಿಳುನಾಡು ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪಿ.ಆರ್.ಪಾಂಡೆನ್ ಅವರನ್ನು ಬಂಧಿಸಿ ಜೈಲು ಶಿಕ್ಷೆ ವಿಧಿಸಿರುವುದು ನ್ಯಾಯ ಸಮ್ಮತವಲ್ಲ ಕೂಡಲೇ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ದೇಶಾದ್ಯಂತ ರೈತರು ರೈತ ಸಂಘಟನೆಯ ಮುಖಂಡರು ತಮಿಳುನಾಡು ಚಲೋ ಮಾಡಬೇಕಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಸೋಮಶೇಖರ್, ಬರಡನಪುರ ನಾಗರಾಜ್, ಮೂಕಳ್ಳಿ ಮಹದೇವಸ್ವಾಮಿ, ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ದೇವನೂರು ವಿಜಯೇಂದ್ರ, ಪಟೇಲ್ ಶಿವಮೂರ್ತಿ, ಮಾರ್ಬಳ್ಳಿ ನೀಲಕಂಠಪ್ಪ, ಉಡಿಗಾಲ ರೇವಣ್ಣ, ಬಿ.ಪಿ.ಪರಶಿವಮೂರ್ತಿ, ಕೆಂಡಗಣಪ್ಪ, ಅಂಬಳೆ ಮಂಜುನಾಥ್, ಹೆಚ್.ಡಿ.ಕೋಟೆ ಸುನೀಲ್, ದೇವನೂರು ಮಹಾದೇವ, ಕೆಂಡಗಣಸ್ವಾಮಿ, ಕುರುಬೂರು ಪ್ರದೀಪ್, ಸಾತಗಳ್ಳಿ ಬಸವರಾಜ, ಬನ್ನೂರು ಸೂರಿ, ಸಿಂಧುವಳ್ಳಿ ಬಸವಣ್ಣ, ಕಾಟೂರು ನಾಗೇಶ್, ಗಿರೀಶ್, ಪುಟ್ಟೇಗೌಡನಹುಂಡಿ ರಾಜು, ಹೆಗ್ಗೊಠಾರ ಶಿವಸ್ವಾಮಿ, ವಾಜಮಂಗಲ ನಾಗೇಂದ್ರ, ಕೂರ್ಗಳ್ಳಿ ರವಿ, ಹೆಗ್ಗೂರು ರಂಗರಾಜು, ಸಿದ್ಧರಾಮ, ನಂಜುಂಡಸ್ವಾಮಿ, ರಾಮಚಂದ್ರ, ಶಿವಣ್ಣ, ಬಾಲು, ಕಮಲಮ್ಮ, ರೂಪ ಮತ್ತಿತರರು ಇದ್ದರು.
Related










