ರಾಮನಗರ: ಹೊಸದಾಗಿ ಬೆಳೆದ ಅಂಗಾಂಶ ಬಾಳೆ, ಕಂದು ಬಾಳೆ, ದಾಳಿಂಬೆ, ಹೈಬ್ರೀಡ್ ತರಕಾರಿ ಮತ್ತು ಹೂವು ಬೆಳೆಗಳಿಗೆ ತೋಟಗಾರಿಕೆ ಇಲಾಖೆ ವತಿಯಿಂದ 2020-21 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.
ಹಸಿರು ಮನೆ ನಿರ್ಮಾಣ: ಉತ್ಕೃಷ್ಟ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಸಂರಕ್ಷಿತ ಬೇಸಾಯ ಪದ್ಧತಿ ಅಳವಡಿಸಿ ಬೆಳೆಯಲು ಹೊಸದಾಗಿ ಹಸಿರು ಮನೆ ನಿರ್ಮಿಸಲು ಸಹಾಯಧನ ನೀಡಲಾಗುವುದು.
ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) : ಭೂಮಿಯಲ್ಲಿ ತೇವಾಂಶವನ್ನು ಕಾಪಾಡಲು ಕಳೆಗಳನ್ನು ನಿಯಂತ್ರಿಸಲು ವಿವಿಧ ತೋಟಗಾರಿಕೆ ಬೆಳೆಗಳಿಗೆ ಶಿಫಾರಸು ಮಾಡಿದ ಹೈ ಡೆನ್ಸಿಟಿ ಪಾಲಿ ಎತಿಲಿನ್ , ನೆಲಹೊದಿಕೆ / ಮಲ್ಚಿಂಗ್‌ಕ್ಕೆ ಸಹಾಯಧನ ನೀಡಲಾಗುವುದು.
ತೋಟಗಾರಿಕೆ ಯಾಂತ್ರೀಕರಣ: ತೋಟಗಾರಿಕೆ ಬೆಳೆ ಚಟುವಟಿಕೆಗಳನ್ನು ಕೈಗೊಳ್ಳಲು ಅಗತ್ಯವಿರುವ ಗರಿಷ್ಠ 20 ಎಚ್.ಪಿ. ಸಾಮರ್ಥ್ಯದ ಟ್ರ‍್ಯಾಕ್ಟರ್ ಹಾಗೂ ಗರಿಷ್ಠ 8 ಎಚ್.ಪಿ. ಸಾಮರ್ಥ್ಯದ ಪವರ್ ಟಿಲ್ಲರ್ ಖರೀದಿಗೆ ಸಹಾಯಧನ ನೀಡಲಾಗುವುದು.
ರೈತರಿಗೆ ತರಬೇತಿ: ತೋಟಗಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಯ ರೈತರನ್ನು ಗುರುತಿಸಿ ತರಬೇತಿ ಏರ್ಪಡಿಸಿ ಉತ್ನತ ತಾಂತ್ರಿಕತೆ ಅಳವಡಿಕೆಗಳ ಬಗ್ಗೆ ಅರಿವು ಮೂಡಿಸುವುದು.
ಪ್ಯಾಕ್ ಹೌಸ್ ನಿರ್ಮಾಣ: ಕೊಯ್ಲಾದ ಹಣ್ಣು, ತರಕಾರಿ, ಪುಷ್ಪಗಳು ಹಾಗೂ ಇತರೆ ತೋಟಗಾರಿಕೆ ಪದಾರ್ಥಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ವಿವಿಧ ಪ್ರಕಾರದ ಕಂಟೇನರ್ ಗಳಲ್ಲಿ ಪ್ಯಾಕ್ ಮಾಡುವ ಉದ್ದೇಶದಿಂದ ಪ್ಯಾಕ್ ಹೌಸ್ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.
ಶೀಥಲ ವಾಹನ: ಉನ್ನತ ತಂತ್ರಜ್ಞಾನ ತೋಟಗಾರಿಕೆ ವಿಧಾನದಿಂದ ಉತ್ಪಾದಿಸಿದ ರಫ್ತು ಆಧಾರಿತ ಹೂವು, ಹಣ್ಣು ಮತ್ತು ತರಕಾರಿಗಳ ರಫ್ತುಗಾಗಿ ಈ ವಾಹನವು ಉಪಯೋಗವಾಗುತ್ತದೆ. ಈ ಸುಸಜ್ಜಿತ ಶೀಥಲ ವಾಹನಕ್ಕೆ ಸಹಾಯಧನ ನೀಡಲಾಗುವುದು.
ಸಹಾಯಧನಕ್ಕೆ ಅರ್ಜಿಯನ್ನು ಆಗಸ್ಟ್ 20 ರೊಳಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಕಚೇರಿಗೆ ಅರ್ಜಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ಜಿಪಂ) ಮತ್ತು ತೋಟಗಾರಿಕೆ ಉಪನಿರ್ದೇಶಕರ ಕಚೇರಿ (ಜಿಪಂ) ರಾಮನಗರ ಇವರನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.