NEWSಕೃಷಿನಮ್ಮರಾಜ್ಯ

ಡಿ.23ರ ರೈತ ಸಮಾವೇಶದಲ್ಲಿ ಭಾಗವಹಿಸಲು ಬನ್ನೂರಲ್ಲಿ ಪೋಸ್ಟರ್ ಬಿಡುಗಡೆ: ದೇವರಾಜ್‌

ವಿಜಯಪಥ ಸಮಗ್ರ ಸುದ್ದಿ

ಬನ್ನೂರು: ವಿಶ್ವ ರೈತ ದಿನಾಚರಣೆ – ರೈತರ ಹಬ್ಬ ಅಂಗವಾಗಿ ಇದೇ ಡಿಸೆಂಬರ್ 23 ರಂದು ಕಲಬುರಗಿಯಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಸಮಾವೇಶದ ಪೋಸ್ಟರ್‌ಗಳನ್ನು ಬನ್ನೂರು ಗ್ರಾಮಾಂತರ ಘಟಕದಿಂದ ಬನ್ನೂರು ಪಟ್ಟಣದ ಸಂತೆಮಾಳದಲ್ಲಿ ಇಂದು ಬಿಡುಗಡೆ ಮಾಡಲಾಯಿತು.

ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಕಲಬುರಗಿಯ ಎಂ.ಎಸ್. ಪಂಡಿತ ರಂಗಮಂದಿರದಲ್ಲಿ (ಜಯದೇವ ಆಸ್ಪತ್ರೆ ಎದುರು) ಬೆಳಗ್ಗೆ 11 ಗಂಟೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ತಿ.ನರಸೀಪುರ ತಾಲೂಕಿನಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರೈತರ ಸಮಾವೇಶವನ್ನು ಯಶಸ್ವಿ ಗೋಳಿಸೋಣ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮನವಿ ಮಾಡಿದ್ದಾರೆ.

ರೈತರ ಬಗ್ಗೆ ಕಾಳಜಿಯುಳ್ಳ ಪ್ರಗತಿಪರ ಚಿಂತಕರು, ರೈತ ಸಂಘಟನೆಗಳ ಮುಖಂಡರು ಒಗ್ಗೂಡಿ ರೈತರ ಬಗ್ಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ರಾಜ್ಯ – ಕೇಂದ್ರ ಸರ್ಕಾರಕ್ಕೆ ಒತ್ತಾಯ ಪತ್ರ ಸಲ್ಲಿಸಲಿದ್ದೇವೆ ಎಂದರು.

ಸಮಾವೇಶದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗೆ ಐಎಎಸ್ ಪ್ರಶಸ್ತಿ ನೀಡಿ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ, ಈ ಸಮಾವೇಶಕ್ಕೆ ವಿವಿಧ ರಾಜ್ಯಗಳಿಂದ ರಾಷ್ಟೀಯ ರೈತ ಮುಖಂಡರು,ರೈತರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರೈತರ ಒತ್ತಾಯಗಳು?: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ, ಕಾನೂನು ಜಾರಿಯಾಗಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೈಬಿಡಬೇಕು. ಕೃಷಿ ಭೂಮಿ ಮುಟ್ಟುಗೊಲು ಕಾಯ್ದೆ ರದ್ದಾಗಬೇಕು. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಗಳ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿಯಾಗಬೇಕು.

ನಕಲಿ ಬಿತ್ತನೆ ಬೀಜ, ನಕಲಿ ರಸಗೊಬ್ಬರ, ನಕಲಿ ಕೀಟನಾಶಕ ಮಾರಾಟ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕಠಿಣ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಬೇಕು. ಕೃಷಿ ಭೂಮಿ, ನೀರು, ಅರಣ್ಯ ಪರಿಸರ ರಕ್ಷಿಸಲು ಜಲಾಶಯಗಳ ಹಾಗೂ ಎಲ್ಲಾ ಕೆರೆ ಕಟ್ಟೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಬಿಡಿಸುವ ಕಾರ್ಯ ಯೋಜನೆ ಜಾರಿಗೆ ತರಬೇಕು.

ಕಬ್ಬಿನ ಎಫ್ ಆರ್ ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪ್ರಮಾಣ ಕಡಿಮೆ ತೋರಿಸಿ ರೈತರಿಗೆ ಮೋಸ ಮಾಡುತ್ತಿರುವುದನ್ನು ತಪ್ಪಿಸಲು ಕಠಿಣ ಕಾನೂನು ಜಾರಿಯಾಗಬೇಕು. ಫಸಲ್ ಭೀಮ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಬೇಕು, ಪ್ರತಿ ರೈತನ ಹೊಲದ ಬೆಳೆವಿಮೆ ನಷ್ಟ ಪರಿಹಾರ ವಿಮೆ ಸಿಗುವಂತಾಗಬೇಕು.

ಎಪಿಎಂಸಿ ಗಳಲ್ಲಿ ದಲ್ಲಾಳಿಗಳು ರೈತರಿಂದ 10% ಕಮಿಷನ್ ತೆಗೆದುಕೊಳ್ಳುವುದನ್ನು ನಿಲ್ಲಿಸಲು ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಎನ್ ಡಿ ಆರ್ ಎಫ್ ಮಾನದಂಡ ಬದಲಾಗಬೇಕು. ಅತಿವೃಷ್ಟಿ ಮಳೆ ಹಾನಿ, ಬರ ಪರಿಹಾರ ಪ್ರಕೃತಿ ವಿಕೋಪ ಪರಿಹಾರದ ಮಾನದಂಡ ಬದಲಾಯಿಸಿ ಸಂಪೂರ್ಣ ಬೆಳೆ ನಷ್ಟ ಕೊಡಬೇಕು.

ಗ್ರಾಮೀಣ ಭಾಗದ ರೈತರ ಗಂಡು ಮಕ್ಕಳ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ 20 ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ಬರಬೇಕು. ತೆಲಂಗಾಣ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ 10,000/- ಸಾವಿರ ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಬೆಳಗ್ಗೆ 6 ರಿಂದ ಸಂಜೆ 6 ರ ವರಗೆ ಸಮರ್ಪಕ ವಿದ್ಯುತ್ ನೀಡಬೇಕು.

ಕೃಷಿ ಸಾಲ ವಸೂಲಾತಿಗಾಗಿ ರೈತರ ಜಮೀನು ವಸಪಡಿಸಿಕೊಳ್ಳುವ ಸರ್ಫೈಸಿ ಕಾಯ್ದೆ ರದ್ದು ಗೊಳಿಸಬೇಕು. ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು. ಉತ್ತರ ಕರ್ನಾಟಕದಲ್ಲಿ ಕಬ್ಬಿಗೆ ನಿಗದಿ ಪಡಿಸಿದ ದರದಂತೆ ದಕ್ಷಿಣ ಕರ್ನಾಟಕದ ಸಕ್ಕರೆ ಖಾರ್ಕಾನೆಗಳಲ್ಲೂ ಕೊಡಿಸಬೇಕು ಎಂಬ ಒತ್ತಾಯ ಮಾಡಲಾಗುವುದು.

ಪೋಸ್ಟರ್ ಬಿಡುಗಡೆ ವೇಳೆ ಸಂಘದ ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಬನ್ನೂರು ಗ್ರಾಮಾಂತರ ಘಟಕದ ಮುಖಂಡರಾದ ಅತ್ತಹಳ್ಳಿ ಲಿಂಗಣ್ಣ, ಅರುಣ್ ಕುಮಾರ್, ಬನ್ನೂರು ಸೂರಿ, ಶ್ರೀನಿವಾಸ್, ಕುಂತನಹಳ್ಳಿ ಕುಳ್ಳೆಗೌಡ, ಎ.ಪಿ.ನವೀನ್, ಮೆಡಿಕಲ್ ಮಹೇಶ್, ವೈ.ನಟೇಶ್, ಹೊನ್ನಯ್ಯ, ಬೀಡನಹಳ್ಳಿ ನಂಜುಂಡ, ಹೆಗ್ಗೂರು ವೀರಂಕೆಗೌಡ, ರಾಚಾಪ್ಪಾಜಿ, ಅಂಬರೀಷ್, ಶಿವಣ್ಣ ಇನ್ನು ಮುಂತಾದ ರೈತರು ಇದರು.

Megha
the authorMegha

Leave a Reply

error: Content is protected !!