ಅಧಿವೇಶನದಲ್ಲಿ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ: ಹಳೇ ಟೇಪ್‌ರೇಕಾರ್ಡಾದ ಸಾರಿಗೆ ಸಚಿವರು!

ಇತ್ತ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳದೇ ಸಾರಿಗೆ ನೌಕರರನ್ನು ಮೂರ್ಖರನ್ನಾಗಿ ಮಾಡುತ್ತಿರುವ ಸಂಘಟನೆಗಳ ಊಸರವಳ್ಳಿ ಮುಖಂಡರು
ಬೆಳಗಾವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ನ್ಯಾಯಯುತವಾಗಿ ಕೊಡಬೇಕಿರುವ ಸೌಲಭ್ಯಗಳನ್ನು ಕೊಡದೆ ಕಾಡುತ್ತಿರುವ ಸರ್ಕಾರ. ಈಗ ಮತ್ತೆ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಾನ್ಯ ಸದಸ್ಯರು ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆ ಬಗ್ಗೆ ಪ್ರಸ್ತಾಪ ಮಾಡಿದರೆ ಕಳೆದ ಎರಡೂವರೆ ವರ್ಷದಿಂದಲೂ ಹೇಳಿದ್ದನ್ನೇ ಹೇಳುತ್ತಾ ಬಂದಿದ್ದು ಈಗ ಹಳೇ ಟೇಪ್‌ರೇಕಾರ್ಡರ್ ತರ ಮತ್ತೆಮತ್ತೆ ಅದನ್ನೇ ಹೇಳುತ್ತಿದೆ.

ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿವೇಶನದಲ್ಲಿ ಮಾತನಾಡಿದ್ದು, ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಲ್ಲಿ ಒಂದು ಲಕ್ಷ ಸಿಬ್ಬಂದಿ ಇದ್ದಾರೆ. ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗುತ್ತದೆ. ಆದರೆ, ಕೊರೊನಾ ಸಮಯದಲ್ಲಿ ನೌಕರರ ವೇತನ ಪರಿಷ್ಕರಣೆ ಆಗಿರಲಿಲ್ಲ. ಬದಲಿಗೆ ಕಳೆದ 2023ರಲ್ಲಿ ಸಿಬ್ಬಂದಿ ವೇತನ ಪರಿಷ್ಕರಣೆ ಆಗಿತ್ತು.
ಈ ಸಾರಿಗೆ ಸಿಬ್ಬಂದಿ ವೇತನ ಪರಿಷ್ಕರಣೆಯ ಆದೇಶದಲ್ಲಿ ಗೊಂದಲವಿತ್ತು ಬಜೆಟ್ ನಲ್ಲೂ ಹಣ ಇಟ್ಟಿರಲಿಲ್ಲ. ಈ ಬಗ್ಗೆ ಸಂಘಟನೆಗಳು ಹೋರಾಟ ನಡೆಸಿವೆ. ಸಭೆ ಮಾಡಿದ್ದೇವೆ ಅಧಿವೇಶನ ಮುಗಿದ ನಂತರ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಅಂದರೆ ಮತ್ತೆ ಮತ್ತೆ ಸಭೆ ಮಾಡುತ್ತೇವೆ ಚರ್ಚಿಸುತ್ತೇವೆ ಎಂಬುವುದು ಬಿಟ್ಟರೆ ಸಾರಿಗೆ ಸಚಿವರಿಗೆ ಬೇರೆ ಏನು ಮಾಡಬೇಕು ಎಂಬುವುದು ಗೊತ್ತಾಗುತ್ತಿಲ್ಲವೇ? ಇಲ್ಲ ಸರ್ಕಾರ ಆರ್ಥಿಕವಾಗಿ ದೀವಾಳಿಯಾಗಿದೆ ಹೀಗಾಗಿ ನಾವು ನೌಕರರಿಗೆ ಕೊಡಬೇಕಿರುವುದು ಮುಂದಕ್ಕೆ ಹಾಕುತ್ತ ಬಂದು ಕೊನೆಗೆ ಮತ್ತೆ ಚುನಾವಣೆ ಬಂದಾಗ ಯಾರು ಅಧಿಕಾರಕ್ಕೆ ಬರುತ್ತಾರೋ ಅವರು ನೋಡಿಕೊಳ್ಳುತ್ತಾರೆ ಎಂಬ ಭಾವನೆಯನ್ನು ಹೊಂದಿದ್ದಾರೆಯೇ?
ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮತ್ತೆ ಈ ರೀತಿ ಕುಂಟುನೆಪ ಹೇಳಿಕೊಂಡು ಸಾರಿಗೆ ನೌಕರರನ್ನು ಯಾಮಾರಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಸಾರಿಗೆ ನೌಕರರ ಸಂಘಟನೆಗಳಲ್ಲಿ ಬಣ ಬಡಿದಾಟವಾಗುತ್ತಿರುವುದು.
ಸರ್ಕಾರಿ ನೌಕರರ ಸಂಘಟನೆ ಕೊಡುವ ಎಚ್ಚರಿಕೆ ಸರ್ಕಾರವೇ ತತ್ತರಿಹೋಗುತ್ತದೆ: ನೋಡಿ ಸರ್ಕಾರಿ ನೌಕರರ ಸಂಘಟನೆ ಒಂದೆ ಇರುವುದರಿಂದ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಿರುವುದಕ್ಕೆ ಮನವಿ ಕೊಟ್ಟು ಅದಕ್ಕೆ ಒಂದು ಕಾಲವಕಾಶವ ಕೊಟ್ಟು ಆ ಕೊಟ್ಟ ಕಾಲವಕಾಶದೊಳಗೆ ಬೇಡಿಕೆಯನ್ನು ಸರ್ಕಾರ ಈಡೇರದಿದ್ದರೆ ಹೋರಾಟ ಎಚ್ಚರಿಕೆ ಕೊಡುತ್ತಾರೆ. ಆ ಎಚ್ಚರಿಕೆ ಕೊಡುವುದು ಹೇಗಿರುತ್ತದೆ ಎಂದರೆ ಸರ್ಕಾರವೇ ತತ್ತರಿಹೋಗುತ್ತದೆ. ಆ ಮಟ್ಟಿಗೆ ಇದೆ. ಆದರೆ ಸಾರಿಗೆ ನೌಕರರ ಸಂಘಟನೆಗಳ ಮುಖಂಡರಲ್ಲಿ ಒಂದು ಸ್ಟ್ರಾಂಗ್ ಹೇಳಿಕೆಯೂ ಬರುವುದಿಲ್ಲ ಜತೆಗೆ ಊಸರವಳ್ಳಿಯಂತೆ ನಡೆದುಕೊಳ್ಳುವ ಚಾಳಿ ಹೊಂದಿದ್ದಾರೆ. ಈ ನಡೆಯಿಂದಲೇ ಸಾರಿಗೆ ನೌಕರರಿಗೆ ಸಿಗಬೇಕಿರುವ ಸೌಲಭ್ಯ ಸಿಗದಿರುವುದಕ್ಕೆ ಮುಖ್ಯ ಕಾರಣವಾಗಿದೆ.
ಸಿಎಂ, ಸಾರಿಗೆ ಸಚಿವರ ನಾಮ್ ಕೇ ವಾಸ್ತೆ ಸಭೆ: ಇನ್ನು ಈ ಸಂಘಟನೆಗಳ ಮುಖಂಡರ ಊಸರವಳ್ಳಿತನವನ್ನು ಅರಿತಿರುವ ಸಿಎಂ ಹಾಗೂ ಸಾರಿಗೆ ಸಚಿವರು ನಾಮ್ ಕೇ ವಾಸ್ತೆ ಎಂಬಂತೆ ಸಭೆ ಕರೆಯುತ್ತಾರೆ. ಆ ಸಭೆಗಳಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಮತ್ತೆ ಮುಂದೂಡಿದ್ದು ಬಳಿಕ ಕರೆಯುತ್ತೇವೆ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಈ ನಾಟಕವನ್ನು ಹೀಗೆ ಇನ್ನು ಎಷ್ಟು ದಿನ ನೋಡಬೇಕು ಸಾರಿಗೆ ನೌಕರರು ಸ್ವಾಮಿ?
ಇನ್ನಾದರೂ ಕೆಲಸಕ್ಕೆ ಬಾರದ ಸಾರಿಗೆ ನೌಕರರ ಮುಖಂಡರಾದ ತಾವುಗಳು ಸಾರಿಗೆ ಸಚಿವರು ಮತ್ತು ಸಿಎಂ ಕರೆಯುವ ಸಭೆಯಲ್ಲಿ ದೃಢನಿರ್ಧಾರ ತೆಗೆದುಕೊಂಡಿಲ್ಲ ಎಂದರೆ ಆ ತಕ್ಷಣವೇ ನೌಕರರಿಗೆ ಮಾಹಿತಿ ನೀಡಿ, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಕರೆ ನೀಡಿ. ಆಗ ನಿಮ್ಮ ನಡೆ ಏನು ಎಂದು ಗೊತ್ತಾಗುತ್ತದೆ ಅದನ್ನು ಬಿಟ್ಟು ಉತ್ತರನ ಪೌರುಷ ಒಲೆಮುಂದೆ ಎಂಬುಂತೆ ನಡೆದುಕೊಂಡು ನಿಮ್ಮ ಗೌರವಕ್ಕೆ ನೀವು ಮಸಿ ಬಳಿದುಕೊಳ್ಳಬೇಡಿ.
ದಿಢೀರ್ ಮುಷ್ಕರಕ್ಕೆ ಹೋಗುತ್ತೇವೆ ಎಂಬಿತ್ಯಾದಿ..?: ಇನ್ನು ಇದೇ ಡಿ.13ರಂದು ಸಚಿವರ ಜತೆ ಸಭೆ ನಡೆದು ಅದೂ ಕೂಡ ವಿಫಲವಾಯಿತು. ಬಳಿಕ ಹೊರಬಂದು ಹೋರಾಟಕ್ಕೆ ಕರೆ ಕೊಡುತ್ತೇವೆ, ಇಲ್ಲ ನಾವು ಮಾಹಿತಿ ಕೊಡದೆ ದಿಢೀರ್ ಮುಷ್ಕರಕ್ಕೆ ಹೋಗುತ್ತೇವೆ ಎಂಬಿತ್ಯಾದಿ ಎಲ್ಲವನ್ನು ಮಾಧ್ಯಗಳಿಗೆ ಹೇಳಿಕೆ ಕೊಟ್ಟು ಈಗ ಮತ್ತೆ ಮೌನವಹಿಸಿದ್ದೀರಿ.. ಕ್ಷಮಿಸಿ ಮೌನ ವಹಿಸಿಲ್ಲ ಇವನ ಮೇಲೆ ಅವನು ಅವನ ಮೇಲೆ ಇವರು ಮತ್ತೆ ಆರೋಪ ಪ್ರತ್ಯಾರೋಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದೀರಿ ನಾಚಿಕೆಯಾಗಬೇಕು ನಿಮಗೆ.
ಮತ್ತೆಮತ್ತೆ ಚರ್ಚಿಸುವ ಹೊಸ ವಿಷಯ ಏನಿದೆ?: ಸಾರಿಗೆ ಸಚಿವರು ಅಧಿವೇಶನ ಮುಗಿದ ಮೇಲೆ ಸಿಎಂ ಜತೆ ಚರ್ಚಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದರಲ್ಲಿ ಮತ್ತೆಮತ್ತೆ ಚರ್ಚಿಸುವ ಹೊಸ ವಿಷಯ ಏನಿದೆ? ಅದೇ ವಿಷಯವನ್ನು ಎಷ್ಟು ಬಾರಿ ಚರ್ಚಿಸುತ್ತೀರಿ ಎಂದು ಏಕೆ ನೀವು ಸಭೆಯಲ್ಲಿ ಕೇಳಿಲ್ಲ? ಏಕೆಂದರೆ ನೀವು ಊಸರವಳ್ಳಿಗಳು ಬಣ್ಣ ಬದಲಿಸಿಕೊಂಡು ಬಣ ಬಡಿದಾಟದಲ್ಲಿ ತೊಡಗಿ ನೌಕರರ ಯಾಮಾರಿಸಿ ಅವರನ್ನು ಮೂರ್ಖರನ್ನಾಗಿಸುವ ಮೂರನ್ನು ಬಿಟ್ಟ ಕೆಲಸಕ್ಕೆ ಬಾರದ ಮುಖಂಡರು ನೀವು, ಅದಕ್ಕೆ ಸಾರಿಗೆ ಸಚಿವರನ್ನು ಪ್ರಶ್ನಿಸದೆ ಸಭೆ ವಿಫಲ ಎಂದು ಹೇಳಿಕೊಂಡು ಬಂದಿದ್ದೀರಿ ಅಲ್ವಾ?
ನಿಮ್ಮಂಥವರು ಸಂಘಟನೆಗಳ ಹೆಸರಿನಲ್ಲಿ ಇದ್ದರೆ ನೌಕರರ ಪಾಡು ಇತ್ತ ಹಾವು ಸಾಯಬಾರದು ಅತ್ತ ಕೋಲು ಮುರಿಯಬಾರದು ಎಂಬಂತೆಯೇ ಆಗಿರುತ್ತದೆ. ಇನ್ನಾದರೂ ಈ ಬಗ್ಗೆ ಯೋಚಿಸಿ ಒಂದು ದೃಢ ನಿರ್ಧಾರ ತೆಗೆದುಕೊಳ್ಳಿ ಕಾರಣ ಈಗಾಗಲೇ ಒಕ್ಕೂಟ ಎಲ್ಲರೂ ಒಟ್ಟಿಗೆ ಹೋಗೋಣ ಎಂದು ಲಿಖಿತವಾಗಿ ಕರೆದಿದೆ ಅದಕ್ಕೆ ಮನ್ನಣೆಕೊಟ್ಟು ಒಂದಾಗಿ ಹೋಗಿ ಇಲ್ಲ ನೌಕರರ ವೇತನ ಪರಿಷ್ಕರಣೆ ಬಗ್ಗೆ ಏನನ್ನು ಮಾತನಾಡದೆ ಎಲ್ಲರೂ ತಟಸ್ಥರಾಗಿದ್ದುಬಿಡಿ ಅದೇ ನೀವು ನೌಕರರಿಗೆ ಮಾಡುವ ಒಳ್ಳೆಯ ಕೆಲಸವಾಗುತ್ತದೆ.
Related









