ಬೆಂಗಳೂರು: ಕೊರೊನಾ ಸೋಂಕಿನಿಂದ ಬಿಎಂಟಿಸಿ ಕಂಡಕ್ಟರ್ ಕಂ ಡ್ರೈವರ್ ಮೃತಪಟ್ಟಿದ್ದು, ಆಸ್ಪತ್ರೆ ಬಿಲ್ ಪಾವತಿಸಲಾಗದೆ ಆತನ ಪತ್ನಿ ಮತ್ತು ಮಕ್ಕಳು ಆಸ್ಪತ್ರೆ ಎದುರು ಕಣ್ಣೀರಿಡುತ್ತಿದ್ದ ಘಟನೆ ನಗರದಲ್ಲಿ ಜರುಗಿದೆ.
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ನಿವಾಸಿಯಾಗಿರುವ ಮೃತ ನಿರ್ವಾಹಕ ಸದ್ಯ ಪೀಣ್ಯ ಡಿಪೋ 22ರಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಪ್ರಶಾಂತ್ ಮೃತರು. ಇವರಿಗೆ 10 ದಿನಗಳ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಚಿಕ್ಕಬಾಣವಾರದ ಎನ್‌ಆರ್‌ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ.
ಮೊದಲೇ ಕುಟುಂಬಕ್ಕೆ ಆಸರೆಯಾಗಿದ್ದ ಪತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಪತ್ನಿಗೆ ಆಸ್ಪತ್ರೆ ಆಡಳಿತ ಮಂಡಳಿ 1.8 ಲಕ್ಷ ರೂಪಾಯಿ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ಹೇಳಿದೆ. ಆದರೆ ಕೈಯಲ್ಲಿ ಬಿಡುಗಾಸು ಇಲ್ಲದೇ ಮೃತನ ಪತ್ನಿ ತನ್ನ ಮಗುವಿನೊಂದಿಗೆ ಆಸ್ಪತ್ರೆ ಎದುರು ಪರದಾಡುತ್ತಿದ್ದರು.
ಒಬ್ಬ ಸರ್ಕಾರಿ ನೌಕರಿಯಲ್ಲಿರುವವರಿಗೆ ಸರ್ಕಾರ ಆರೋಗ್ಯ ಸಂಬಂಧ ವಿಮೆ ಮೊತ್ತ ಕೊಡದೆ ಈ ರೀತಿ ನಡು ನೀರಿನಲ್ಲಿ ನಿಲ್ಲಿಸಿ ನೋಡುತ್ತಿರುವುದು ಇಂದಿನ ಸರ್ಕಾರದ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಸಿಎಂ, ಸಚಿವರು, ಮಾಜಿ ಸಿಎಂಗಳಿಗೆ ಉಚಿತ ಚಿಕಿತ್ಸೆ: ಮುಖ್ಯಮಂತ್ರಿಗಳು ಸಚಿವರು ಮತ್ತು ಮಾಜಿ ಸಿಎಂ, ಮಾಜಿ ಸಚಿವರು ಒಂದು ವೇಳೆ ಅನಾರೋಗ್ಯಕ್ಕೆ ತುತ್ತಾದರೆ ಅವರು ಕೇಳಿದ ಆಸ್ಪತ್ರೆಗಳಲ್ಲಿ ಉತ್ತಮ ಹಾಸಿಗೆಯೊಂದಿಗೆ ಎಲ್ಲಾ ಸೌಲಭ್ಯ ನೀಡಿ ಚಿಕಿತ್ಸೆ ಪಡೆಯುತ್ತಾರೆ. ಅದೇ ಒಬ್ಬ ಸರ್ಕಾರಿ ನೌಕರ ಅದು ಕರ್ತವ್ಯದಲ್ಲಿದ್ದು ಅನಾರೋಗ್ಯಕ್ಕೀಡಾದರೆ ಯಾವುದೋ ಒಂದು ಆಸ್ಪತ್ರೆಯಲ್ಲಿ ಅದೂ ಸೌಲಭ್ಯವಿಲ್ಲದೆ ಚಿಕಿತ್ಸೆ ಪಡೆಯಬೇಕು.
ಇದು ಹಿಂದಿನ ಹಾಗೂ ಇಂದಿನ ಸರ್ಕಾರಗಳನ್ನು ನಡೆಸುತ್ತಿರುವವರು ಪಾಲಿಸಿ ಕೊಂಡು ಬಂದಿರುವ ನಿಯಮ, ಸರ್ಕಾರದ ಕಾಯ್ದೆಯಲ್ಲಿ ರೂಪಿಸಿರುವಂತೆ ಇದುವರೆಗೂ ಯಾವೊಬ್ಬ ಸಿ ಮತ್ತು ಡಿ ದರ್ಜೆ ನೌಕರರಿಗೂ ಸೂಕ್ತ ಚಿಕಿತ್ಸೆ ಸಿಗದಿರುವುದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಇನ್ನಾದರು ಇಂಥ ನೌಕರರಿಗೆ ಸಿಗಬೇಕಾದ ಕಾನೂನಿನಾತ್ಮಕ ಸೌಲಭ್ಯಗಳನ್ನು ಸರ್ಕಾರ ನೀಡಿ ಅವರ ಆರೋಗ್ಯವನ್ನು ಕಾಪಾಡಬೇಕು ಎಂಬುವುದು ನೊಂದ ನೌಕರರ ಮನವಿ.