ಕನಿಷ್ಠ ಹೆಚ್ಚುವರಿ ಪಿಂಚಣಿ, ವೈದ್ಯಕೀಯ ಸೌಲಭ್ಯಕ್ಕೆ ಆಗ್ರಹಿಸಿ ಸಾರಿಗೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ

ಬೆಂಗಳೂರು: ಕನಿಷ್ಠ ಹೆಚ್ಚುವರಿ ಪಿಂಚಣಿ 7500 ರೂ. ಜತೆಗೆ ಭತ್ಯೆ ಹಾಗೂ ವೈದ್ಯಕೀಯ ಸೌಲಭ್ಯವನ್ನು ಇಪಿಎಸ್ ನಿವೃತ್ತರಿಗೆ ಹಾಗೂ ಇಪಿಎಸ್ ವ್ಯಾಪ್ತಿಯಲ್ಲಿ ಬರದ ನಿವೃತ್ತರಿಗೆ 5000 ರೂ.ಗಳನ್ನು ಕೂಡಲೇ ನೀಡಬೇಕೆಂದು ಜತೆಗೆ ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಇಪಿಎಸ್ ಪಿಂಚಣಿದಾರರು ಬೃಹತ್ ಪ್ರತಿಭಟನೆ ಮಾಡಿದರು.

ಬಿಎಂಟಿಸಿ & ಕೆಎಸ್‌ಆರ್‌ಟಿಸಿ ಹಾಗೂ ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತರ ಟ್ರಸ್ಟ್ ವತಿಯಿಂದ ಸೋಮವಾರ ಡಿ.29ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಇಪಿಎಸ್ ಪಿಂಚಣಿದಾರರು 35ನೇ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪ್ರತಿಭಟನಾಕಾರರು ಕಚೇರಿ ಆವರಣದಲ್ಲಿ ಹರತಾಳ ನಡೆಸಿ, ಧಿಕ್ಕಾರದ ಘೋಷಣೆ ಕೂಗಿದ್ದು ಮುಗಿಲು ಮುಟ್ಟಿತು. ಬಳಿಕ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ (minister for labour & employment) ಸಚಿವರಾದ ಮುನ್ಸೂಕ್ ಮಾಂಡವೀಯ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಉಲ್ಲೇಖಿಸಿದ ಮನವಿ ಪತ್ರವನ್ನು ಅಧಿಕಾರಿಗಳಿಗೆ ಕೊಟ್ಟು ಕೂಡಲೇ ಕೇಂದ್ರ ಸಚಿವರಿಗೆ ಕಳುಹಿಸಲು ಆಗ್ರಹಿಸಿದರು.

ಇದಕ್ಕೂ ಮೊದಲು ಪ್ರತಿಪಟನಾಕಾರರು ಕೇಂದ್ರ ಸರ್ಕಾರ ಹಾಗೂ ಇಪಿಎಫ್ಒ ಅಧಿಕಾರಿಗಳನ್ನು ತೀವ್ರ ತಾರಾಟೆಗೆ ತೆಗೆದುಕೊಂಡರು. ಅಧಿಕಾರಿಗಳಾದ ತಮಗೆ ಇದುವರೆಗೂ ಪ್ರತಿಭಟನೆ ಮೂಲಕ 34 ಮನವಿ ಪತ್ರಗಳನ್ನು ನೀಡಿದ್ದರೂ ಸಹ ಕೇಂದ್ರ ಸರ್ಕಾರದಿಂದ ಯಾವುದೇ ಮನವಿ ಪತ್ರಕ್ಕೂ ಕೂಡ ಸೂಕ್ತ ಪ್ರತಿಕ್ರಿಯೆ ಬಂದಿಲ್ಲ. ಒಂದು ವೇಳೆ ಇದೇ ಪ್ರವೃತ್ತಿಯನ್ನು ಮುಂದುವರಿಸಿದಲ್ಲಿ ಉಗ್ರ ಪ್ರತಿಭಟನೆಗೆ ಸಿದ್ದವಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇನ್ನು ಮದುರೈ ಉಚ್ಚ ನ್ಯಾಯಾಲಯವು 02.09.2025 ರಂದು, ಕೋಲ್ಕತ್ತಾ ಉಚ್ಚ ನ್ಯಾಯಾಲಯವು 14.11.2025 ರಂದು ಇಪಿಎಸ್ ನಿವೃತ್ತರ ಪರ ನೀಡಿರುವ ಆದೇಶ ನಮಗೂ ಅನ್ವಯವಾಗಲಿದ್ದು ಈ ಆದೇಶವನ್ನು ಕೂಡಲೇ ಅನುಷ್ಠಾನಗೊಳಿಸಿ, ಅಧಿಕ ಹೆಚ್ಚುವರಿ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ಜೇಮ್‌ಷೇಡ್ಪುರದಲ್ಲಿರುವ M/s ಟಾಟಾ ಸ್ಟೀಲ್ ಪ್ರವೇಟ್ ಲಿಮಿಟೆಡ್ ಕಂಪನಿಯ ಇಪಿಎಸ್ ನಿವೃತ್ತರಿಗೆ ಅದರ ಟ್ರಸ್ಟ್ ರೂಲ್ಸ್ ಅನ್ವಯ ಅಧಿಕ ಪಿಂಚಣಿ ನೀಡಲು ಜಂಮ್‌ಷೇಡ್ಪುರ ಇಪಿಎಫ್ಒ ಅಧಿಕಾರಿಗಳು 11.09.2025 ರಂದು ಸುತ್ತೋಲೆ ಹೊರಡಿಸಿದ್ದು, ಈ ನಿಯಮವನ್ನು ನಮ್ಮ ನಾಲದಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೂ ಸಹಾ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಇನ್ನು 10.10.2025 ರಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಇಪಿಎಸ್ ನಿವೃತ್ತರ ಪರ ಉಲ್ಲೇಖಿಸಿರುವ ಪತ್ರಕ್ಕೆ ಸಂಬಂಧಿಸಿದಂತೆ ಕೂಡಲೇ ಕ್ರಮ ಕೈಗೊಂಡು ಎಲ್ಲ ಜಂಟಿ ಆಯ್ಕೆ ಪತ್ರಗಳನ್ನು ಟ್ರಸ್ಟ್ ನಿಯಮಾವಳಿಯನ್ವಯ ಪುನರ್ ಸ್ಥಾಪಿಸಿ, ಎಲ್ಲ ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಸಂಘಟನಾ ಕಾರ್ಯದರ್ಶಿ ಮನೋಹರ್ ಅವರು ಎಲ್ಲ ಹೋರಾಟಗಾರರನ್ನು ಸ್ವಾಗತಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ನಂಜುಂಡೇಗೌಡ, ಕಾರ್ಯಾಧ್ಯಕ್ಷ ಶಂಕರ ಕುಮಾರ್, ಕೆಎಸ್ಆರ್‌ಟಿಸಿ ಚಿಕ್ಕಬಳ್ಳಾಪುರ ಟ್ರಸ್ಟ್ ಅಧ್ಯಕ್ಷ ಬ್ರಹ್ಮಚಾರಿ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ರಂಗನಾಥ್, ಕೃಷ್ಣಮೂರ್ತಿ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
ಅಂತಿಮವಾಗಿ ಇಪಿಎಫ್ಒ ಅಧಿಕಾರಿಗಳು ಪ್ರತಿಭಟನಾಕಾರರ ಮನವಿ ಪತ್ರ ಸ್ವೀಕರಿಸಿ ಮಾತನಾಡುತ್ತಾ, ಇಂದಿನ ಪ್ರತಿಭಟನಾ ಸಭೆಯ ಸಂಪೂರ್ಣ ವಿವರಗಳನ್ನು ಕೇಂದ್ರ ಸಚಿವರ ಕಾರ್ಯಾಲಯಕ್ಕೂ ಹಾಗೂ ನವದೆಹಲಿಯ ತಮ್ಮ ಮೇಲಧಿಕಾರಿಗಳಿಗೂ ಕಳಿಸಿ ಕೊಡುವುದಾಗಿ ತಿಳಿಸಿ ಸ್ವೀಕೃತಿ ನೀಡಿದರು.
Related









