ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರಿಗಾಗಿ ಅಭಿವೃದ್ಧಿಪಡಿಸಿರುವ ಸುಧಾರಿತ ಆವೃತ್ತಿಯ 2.0 ಸಾರಿಗೆ ಮಿತ್ರ ಎಚ್ಆರ್ಎಂಎಸ್ ಮೊಬೈಲ್ ಆ್ಯಪನ್ನು ಗುರುವಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಲೋಕಾರ್ಪಣೆಗೊಳಿಸಿದರು.

ಈ ಆಪ್ ಮುಖ್ಯವಾಗಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸುವುದರ ಜತೆಗೆ ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಲಿದೆ. ಹೀಗಾಗಿ ಹೊಸ ವರ್ಷದ ಉಡುಗೊರೆಯಾಗಿ ನಿಗಮವು ಈ ನೂತನ ಆ್ಯಪನ್ನು ಬಿಡುಗಡೆಗೊಳಿಸಿದೆ.
ಆಪ್ ವೈಶಿಷ್ಟ್ಯವೇನು?: ಸಂಸ್ಥೆಯ ನೌಕರರಿಗೆ ತ್ವರಿತ ಸಮಯದಲ್ಲಿ ಮಾನವ ಸಂಪನ್ಮೂಲ ಸೇವೆಗಳನ್ನು ಸ್ಮಾರ್ಟ್ ಫೋನ್ ಮೂಲಕ ಒದಗಿಸುವ ಉದ್ದೇಶದಿಂದ ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಎಚ್ಆರ್ಎಂಸ್ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಇದರಲ್ಲಿ ಜಿಯೋ-ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ, ಮಾಸಿಕ ಹಾಜರಾತಿ ವೀಕ್ಷಣೆ, ವೈಯಕ್ತಿಕ ವಿವರಗಳು, ಸೇವಾ ದಾಖಲಾತಿ (ಸರ್ವಿಸ್ ರಿಜಿಸ್ಟರ್) ವಿವರಗಳು, ಕುಟುಂಬ ಸದಸ್ಯರ ಮಾಹಿತಿ ಹಾಗೂ ನಾಮನಿರ್ದೇಶಿತ (ನಾಮಿನಿ) ವಿವರಗಳ ವೀಕ್ಷಣೆ ಮಾಡಬಹುದಾಗಿದೆ.
ಇನ್ನು ಮಾಸಿಕ ವೇತನ ಪಟ್ಟಿ (ಪೇ ಸ್ಲಿಷ್)ಗಳನ್ನು ಒಂದೇ ಕ್ಲಿಕ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ರಜೆ ನಿರ್ವಹಣೆ ವ್ಯವಸ್ಥೆ ಮೂಲಕ ಖಾತೆಯಲ್ಲಿರುವ ರಜೆ ವಿವರಗಳ ಪರಿಶೀಲನೆ ಜತೆಗೆ ನಿಗಮದ ವಿವಿಧ ವಿಭಾಗಗಳಿಂದ ಹೊರಡಿಸಲಾಗುವ ಸುತ್ತೋಲೆ ವಿವರಗಳ ಲಭ್ಯತೆ ಬೆರಳಂಚಿನಲ್ಲಿಯೇ ಸಿಗಲಿದೆ.
ಅಲ್ಲದೆ ನೌಕರರ ಶ್ರೇಯೋಭಿವೃದ್ಧಿಗೆ ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಆ್ಯಪ್ ಬಿಡುಗಡೆ ವೇಳೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ, ನಿರ್ದೇಶಕರಾದ ಡಾ. ನಂದಿನಿ ದೇವಿ ಸೇರಿದಂತೆ ಸಂಬಂಧಿಸಿದ ಇತರೆ ಅಧಿಕಾರಿಗಳು ಇದ್ದರು.
Related










