KSRTC: 2020ರ ನಂತರ ನಿವೃತ್ತರಾದ ನೌಕರರು ಸಂಸ್ಥೆಯಿಂದ ಬರಬೇಕಾದ 38 ತಿಂಗಳ ವೇತನ ಹಿಂಬಾಕಿ, ಪಿಎಫ್ ಇತರೆ ಸೌಲಭ್ಯ ಪಡೆಯಲು ಸಂಘಟಿತರಾಗಲು ಕರೆ

ಜ.4ರಂದು EPS-95 ಪಿಂಚಣಿದಾರರ 96ನೇ ಮಾಸಿಕ ಸಭೆಯಲ್ಲೂ ಚರ್ಚೆಗೆ ಬರಲಿದೆ ಈ ವಿಷಯ. ಆಯಾಯಾ ಜಿಲ್ಲೆಯಲ್ಲಿ ಹತ್ತು ಜನ ಸೇರಿ ನೋಂದಣಿ ಶುಲ್ಕ 1,000 ರೂ.ಗಳನ್ನು ಜಿಲ್ಲೆಯ ಕರ್ನಾಟಕ ಸಹಕಾರ ಸಂಘಗಳ ಕಚೇರಿಯಲ್ಲಿ ನೀಡಿ, ಸಂಘ ನೋಂದಾವಣೆ ಮಾಡಿಕೊಂಡು ಮುಂದುವರಿಯಿರಿಯುವಂತೆ ನಂಜುಂಡೆಗೌಡ ಕರೆ

ಬೆಂಗಳೂರು: ಇಪಿಎಸ್-95 ಪಿಂಚಣಿದಾರರ 96ನೇ ಮಾಸಿಕ ಸಭೆ EPS-95, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘ ವತಿಯಿಂದ ಇದೇ ಜನವರಿ 4ರ ಭಾನುವಾರದಂದು ಲಾಲ್‌ಬಾಗ್ ಆವರಣದಲ್ಲಿ ಜರುಗಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಫದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರು ತಮ್ಮ ಸೇವೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಸ್ಥೆಯ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಏರಿಸಿದ್ದು, ಅಂದು ನೌಕರರು ಸಲ್ಲಿಸಿದ್ದ ಸೇವೆಯನ್ನು (ಚಾಲಕ, ನಿರ್ವಾಹಕ ಹಾಗೂ ಬಸ್ ರೂಟ್) ಆ ಭಾಗದ ಜನರು ಗುರುತಿಸಿ ಇಂದಿಗೂ ಅವರ ಬಗ್ಗೆ ಪ್ರಶಾಂಶನೀಯ ಮಾತುಗಳನ್ನಾಡುತ್ತಿದ್ದಾರೆ. ತಮ್ಮ ಸರಳತೆ, ಸಜ್ಜನಿಕೆ, ಸಂಯಮದಿಂದ ನಾಡಿನ ಜನತೆಗೆ ಇಂದಿಗೂ ನಾವು ಪ್ರೀತಿ ಪಾತ್ರರಾಗಿದ್ದೇವೆ. ಆದರೆ ನಮ್ಮ ನಿವೃತ್ತಿ ಬದುಕಿನಲ್ಲಿ ಸಾರ್ಥಕತೆ ಕಾಣಲಿಲ್ಲ. ಅಂದು, ಇಂದು, ಎಂದೆಂದಿಗೂ ಹೋರಾಟವೇ ತಮ್ಮ ಜೀವನ ಎಂಬಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ದೇಶದಲ್ಲಿರುವ 78 ಲಕ್ಷ ಇಪಿಎಸ್ ನಿವೃತ್ತರ ಪರ ಹತ್ತಾರು ಸಂಘಟನೆಗಳು ದೇಶಾದ್ಯಂತ ನಿರಂತರವಾಗಿ ಹೋರಾಟ ಮಾಡುತ್ತಿದ್ದು, ಕೆಲವರು ನಾವೇ ಶ್ರೇಷ್ಠ, ತನ್ನಿಂದಲೇ ಎಲ್ಲವೂ ಎನ್ನುತ್ತಾರೆ. ಈ ರೀತಿ ಹೇಳುವುದರಿಂದ ಯಾವುದೇ ಗುರಿ ಮುಟ್ಟಲು ಸಾಧ್ಯವಿಲ್ಲ. 78 ಲಕ್ಷ ನಿವೃತ್ತರು ಸಂಕಷ್ಟದಲ್ಲಿದ್ದು, ಅವರೇ ಶ್ರೇಷ್ಠರು, ಅವರ ಬೆಂಬಲವಿಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ. ಇದನ್ನು ತಿಳಿದು ಅವರ ಒಳಿತಿಗಾಗಿ ಒಟ್ಟಾಗಿ ಹೋರಾಡೋಣ ಬನ್ನಿ ಎಂದು ಕರೆ ನೀಡಿದ್ದಾರೆ.
ಕಳೆದ ತಿಂಗಳು ಅಂದರೆ ಡಿಸೆಂಬರ್‌ನಲ್ಲಿ ನಗರದ ಇಪಿಎಫ್ಒ ಕಚೇರಿ ಆವರಣದಲ್ಲಿ ಇಪಿಎಸ್ ಪಿಂಚಣಿದಾರರು ನಡೆಸಿದ ಪ್ರತಿಭಟನೆಯ ಕೂಗೂ ಪತ್ರಿಕೆ ಹಾಗೂ ದೃಶ್ಯ ಮಧ್ಯಮಗಳ ಮೂಲಕ ಮೂಲಕ ಸಂಚಲನ ಮೂಡಿಸಿದ್ದು, ಇಪಿಎಫ್ಒ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಿದೆ. ಈ ಪ್ರತಿಭಟನೆ ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರಲ್ಲಿ ಸಾಕಷ್ಟು ಜಾಗೃತಿ ಹಾಗೂ ಅರಿವು ಮೂಡಿಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
ಇನ್ನು ಪಾರ್ಲಿಮೆಂಟಿನ ಬಜೆಟ್ ಅಧಿವೇಶನ ಮಾರ್ಚ್ 23, 2026 ರಿಂದ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಸಿಬಿಟಿ ಸಭೆ ದೆಹಲಿಯಲ್ಲಿ ನಡೆಯಲಿದೆ. ಈ ಮಾಸಿಕ ಸಭೆಯಲ್ಲಿ, ನಮ್ಮ ಮುಂದಿನ ಹೋರಾಟದ ರೂಪುರೇಷೆಯನ್ನು ಚರ್ಚಿಸಿ, ಸಿದ್ದ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ. ಹಾಗಾಗಿ ಅದರಲ್ಲೂ ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ನಿವೃತ್ತರು, ಇತರೆ ಎಲ್ಲ ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.
ಕಳೆದ 11 ವರ್ಷಗಳಿಂದ ಇಪಿಎಸ್ ನಿವೃತ್ತರಿಗೆ ಕನಿಷ್ಠ ಪಿಂಚಣಿ 1,000 ರೂ. ಮಾತ್ರ ನೀಡುತ್ತಿದ್ದು, ಇದು ಯಾವುದಕ್ಕೂ ಸಾಲದಂತಾಗಿದೆ. ಅಲ್ಲದೆ ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ನಿವೃತ್ತರ ಕನಿಷ್ಠ ಮಾಸಿಕ ಪಿಂಚಣಿ ಈಗ 7,500 ರೂ. ಆಗುತ್ತದೆ. ಸರ್ವೋಚ್ಚ ನ್ಯಾಯಾಲಯವು ಇಪಿಎಸ್ ನಿವೃತ್ತರಿಗೆ ಅಧಿಕ ಪಿಂಚಣಿಗೆ ಸಂಬಂಧಿಸಿದಂತೆ ನೀಡಿರುವ ಆದೇಶ ಇಪಿಎಸ್ ನಿವೃತ್ತರ ಪರ ಇದ್ದು, ಈ ತೀರ್ಪಿನಿಂದ ಇಪಿಎಫ್ಒ ಅಧಿಕಾರಿಗಳು ತಪ್ಪಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ, ಇಂದಲ್ಲ, ನಾಳೆ ನಮಗೆ ಜಯ ಶತಸಿದ್ಧ. ಈ ದೃಷ್ಟಿಯಿಂದ ನಿವೃತ್ತರ ಹೋರಾಟ ಅನಿವಾರ್ಯ ಎಂದು ತಿಳಿಸಿದ್ದಾರೆ.
2020ರ ನಂತರ ನಿವೃತ್ತರಾದ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರು ತಮ್ಮ ನಿವೃತ್ತಿಯ ನಂತರ ಸಂಸ್ಥೆಯಿಂದ ತಮಗೆ ಬರಬೇಕಾದ 38 ತಿಂಗಳ ವೇತನ ಪರಿಷ್ಕರಣೆ ಬಾಕಿ, ಗ್ರ್ಯಾಚುಟಿ, ಪಿಎಫ್, ರಜೆ ನಗದೀಕರಣ ಹಾಗೂ ಹೈಯರ್ (higher) ಪಿಂಚಣಿ, ಇತ್ಯಾದಿ ಬಾಕಿ ಮೊತ್ತಕ್ಕೆ ಸಂಬಂಧಿಸಿದಂತೆ ಕೂಡಲೆ ಎಚ್ಚೆತ್ತುಕೊಂಡು, ಪ್ರತಿ ಜಿಲ್ಲೆಯಲ್ಲಿಯೂ ಸಂಸ್ಥೆಯ ಹೆಸರಿನಲ್ಲಿ ಪಿಎಫ್ ಟ್ರಸ್ಟ್ ಅಥವಾ ಸಂಘ ಸ್ಥಾಪಿಸಿ, ಮನವಿ ಪತ್ರ ನೀಡುವ ಮೂಲಕ ಹೋರಾಟದ ಮಾಡದ ಹೊರೆತು, ಈಗಿನ ಕಾಲದಲ್ಲಿ ಸುಖ ಸುಮ್ಮನೇ ಸವಲತ್ತು ಪಡೆಯಲು ಸಾಧ್ಯವಿಲ್ಲ. ಹತ್ತು ಜನ ಸೇರಿ ನೋಂದಣಿ ಶುಲ್ಕ 1,000 ರೂ ಗಳನ್ನು ಜಿಲ್ಲೆಯ ಕರ್ನಾಟಕ ಸಹಕಾರ ಸಂಘಗಳ ಕಚೇರಿಯಲ್ಲಿ ನೀಡಿ, ಸಂಘವನ್ನು ನೋಂದಾವಣೆ ಮಾಡಿಕೊಂಡು ಮುಂದುವರೆಯುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾನವೀಯ ಮೌಲ್ಯಗಳು ಹಾಗೂ ಭರವಸೆ ಎಂಬುದು ಬದುಕಿನ ಜೀವ ಜಲ, ಅದನ್ನು ಎಂದಿಗೂ ಬತ್ತಲು ಬಿಡಬಾರದು. ಸಂಘರ್ಷವಿಲ್ಲದೆ ಏನನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ತಮಗೂ ತಿಳಿದಿದೆ. ಏನೇ ಆಗಲಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಇನ್ನು 78 ಲಕ್ಷ ಇಪಿಎಸ್ ನಿವೃತ್ತರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ಇದಕ್ಕೆ ಯಾರು ಕಾರಣ? ಎಂದು ಹೇಳಬೇಕಾಗಿಲ್ಲ, ಇಪಿಎಫ್ಒ ಅಧಿಕಾರಿಗಳ ಧೋರಣೆ, ಅಸಹಕಾರ, ನಿರ್ಲಜ್ಜ ನಡೆ, ಇಪಿಎಸ್ ನಿವೃತ್ತರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಏನೇ ಆಗಲಿ ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ನಮ್ಮ ಗುರಿ ಮುಟ್ಟಲು ಪ್ರಯತ್ನಿಸೋಣ ಎಂದು ಸಲಹೆ ನೀಡಿದ್ದಾರೆ.
ಈ 96ನೇ ಮಾಸಿಕ ಸಭೆಗೆ ರಂಗಭೂಮಿ ಕಲಾವಿದರು, ಉತ್ತಮ ವಾಗ್ಮಿಯು ಆಗಿರುವ ಬಿಎಂಟಿಸಿ ನಿರ್ವಾಹಕಿ ಪಿ.ಉಮಾ, ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳು, ಸದಸ್ಯರು, ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ಸಭೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲಾ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಮಾತನಾಡಲಿದ್ದಾರೆ.
ಹೀಗಾಗಿ ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್‌ಬಾಗ್ ಹೂದೋಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಜ.4ರ ಭಾನುವಾರ ಬೆಳಗ್ಗೆ 8ಗಂಟೆಗೆ ಆಗಮಿಸಬೇಕು ಎಂದು ಕಾರ್ಯಕಾರಿ ಸಮಿತಿ ಪರವಾಗಿ ಮನವಿ ಮಾಡಿದ್ದಾರೆ.
Related









