ಕಾಂಗ್ರೆಸ್ ಕಾರ್ಯಕರ್ತನ ಸಾವು ಪ್ರಕರಣ: ನಿನ್ನೆ ಅಧಿಕಾರ ಸ್ವೀಕರಿಸಿದ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಇಂದು ಅಮಾನತು

ಬೆಂಗಳೂರು: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ತಲೆದಂಡವಾಗಿದೆ.

ನಿನ್ನೆ ಗುರುವಾರ ಜ.1ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಈಗ ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿದೆ.
ಬಳ್ಳಾರಿ ರೇಂಜ್ ಡಿಐಜಿ ಅವರು ಈ ಪ್ರಕರಣವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವರದಿ ನೀಡಿದ್ದರು. ಇನ್ನೊಂದು ಕಡೆ ಡಿಜಿ ಅಂಡ್ ಐಜಿಪಿ ಕಡೆಯಿಂದ ಸರ್ಕಾರಕ್ಕೆ ಅಮಾನತುಗೊಳಿಸುವಂತೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಪವನ್ ನೆಜ್ಜೂರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಪ್ರಕಟಿಸಿದೆ.
ಸಿಎಂ ಹೇಳಿದ್ದೇನು?: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆಯಲ್ಲಿ ರಾಜಶೇಖರ್ ಎಂಬ ಕಾಂಗ್ರೆಸ್ ಕಾರ್ಯಕರ್ತನ ಸಾವಾಗಿದೆ. ಇದು ಅತ್ಯಂತ ನೋವಿನ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಇನ್ನು ಈ ಪ್ರಕರಣದ ತನಿಖೆಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ. ಸತೀಶ್ ರೆಡ್ಡಿಯವರು ಗಾಳಿಯಲ್ಲಿ ಗುಂಡು ಹಾರಿಸಲು ಹೋಗಿ ರಾಜಶೇಖರ ಅವರಿಗೆ ತಗುಲಿರಬಹುದು, ಆದ್ದರಿಂದ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
Related









