NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 38 ತಿಂಗಳ ವೇತನ ಪರಿಷ್ಕರಣೆ ಬಾಕಿ ಇತರೆ ಸೇವಾ ಭತ್ಯೆ ನೀಡಲು ಒತ್ತಾಯಿಸಿ ನಿವೃತ್ತ ನೌಕರರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2020ರ ಜನವರಿ 1ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿರುವ ಶೇ.15ರಷ್ಟು ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಿವೃತ್ತ ನೌಕರರ ಹಿತ ರಕ್ಷಣಾ ವೇದಿಕೆ ಪದಾಧಿಕಾರಿಗಳು ಇಂದು ಪ್ರತಿಭಟನೆ ಮಾಡಿ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ (ಕೆಎಸ್ಆರ್‌ಟಿಸಿ ) ನಿವೃತ್ತ ನೌಕರರು ಫ್ರೀಡಂ ಪಾರ್ಕ್ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಒಕ್ಕೂಟ ಪದಾಧಿಕಾರಿಗಳು ಹಾಗೂ ಇಪಿಎಸ್-95, ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸುವ ಮೂಲಕ ಬೆಂಬಲ ನೀಡಿದರು.

ಈ ವೇಳೆ ಪ್ರತಿಭಟನಾ ನಿರತರು, ಈ ಪ್ರತಿಭಟನೆ ನಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಅಂದರೆ ಸಾರಿಗೆ ನಿವೃತ್ತರು, ಹಾಲಿ ನೌಕರರಿಗೆ ಸರ್ಕಾರದಿಂದ ನ್ಯಾಯಯುತವಾಗಿ ಬರಬೇಕಿರುವ 38 ತಿಂಗಳ ಹಿಂಬಾಕಿಯನ್ನು ಪಡೆಯುವುದಕ್ಕೆ. ಸರ್ಕಾರ ನಮ್ಮನ್ನು ಭಾರಿ ಕೀಳಾಗಿ ನಡೆಸಿಕೊಳ್ಳುತ್ತಿದೆ. ನಮಗೆ ನಕೊಡಬೇಕಿರುವುದನ್ನು ಕೊಡುವುದಕ್ಕೆ ಮೀನಾಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಕೆಎಸ್‌ಆರ್‌ಟಿಸಿ ಹಾಲಿ, ನಿವೃತ್ತ ನೌಕರರಿಗೆ ಆಗಿರುವಷ್ಟು ಅನ್ಯಾಯ ಬೇರೆ ಯಾವುದೇ ಸರ್ಕಾರ ಸಂಸ್ಥೆಗಳ ನೌಕರರಿಗೆ ಅದರಲ್ಲೂ ನಿವೃತ್ತರಿಗೆ ಆಗಿಲ್ಲ. ಸಾರಿಗೆ ಸಂಸ್ಥೆಯ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತುಂಗಕ್ಕೆರಿಸಿದ ನೌಕರರನ್ನು ರಾಜ್ಯ ಸರ್ಕಾರ ಕಡೆಗಣಿಸಿರುವುದು ಭಾರಿ ನೋವಿನ ವಿಷಯ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ಕೆಎಸ್‌ಆರ್‌ಟಿಸಿ ನೌಕರರ 38 ತಿಂಗಳ ವೇತನ ಪರಿಷ್ಕರಣೆ ಬಾಕಿ ಸೇರಿದಂತೆ ಇತರೆ ಸೇವಾ ಭತ್ಯೆಗಳನ್ನು ನೀಡದೆ, ನೌಕರರು ತಮ್ಮ ಸಂಧ್ಯಾ ಕಾಲದಲ್ಲಿ ಹೋರಾಟಕ್ಕೆ ಇಳಿಯುವಂತೆ ಮಾಡಿರುವುದು ಅತ್ಯಂತ ದುಃಖದ ವಿಷಯ. ಇದು ಎಂದೆಂದಿಗೂ ಹೋರಾಟವೇ ನಿವೃತ್ತರ ಬದುಕು ಎಂಬಂತಾಗಿದೆ. ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಇನ್ನಾದರೂ ನಮಗೆ ಬರಬೇಕಿರುವುದು ಕೊಡಿ ಎಂದು ಒತ್ತಾಯಿಸಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ಸಾರಿಗೆ ಸಂಸ್ಥೆಯ ಮುಖ್ಯ ಭದ್ರತಾ ಮತ್ತು ಜಾಗೃತ ಅಧಿಕಾರಿ ಜಿ.ಎನ್.ಲಿಂಗರಾಜು, ನಂದಿನಿ ಹಾಗೂ ಮತ್ತಿತರ ಅಧಿಕಾರಿಗಳು ಪ್ರತಿಭಟನಾ ನಿರತ ನಿವೃತ್ತ ನೌಕರರ ಮನವಿ ಪತ್ರಸ್ವೀಕರಿಸಿ ಈ ನಿಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರ ಹಾಗೂ ಆಡಳಿತ ಮಂಡಳಿ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು.

ಪ್ರತಿಭಟನೆ ವಿವಿಧ ಸಂಘಟನೆಗಳು ಮುಖಂಡರು ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.

Megha
the authorMegha

Leave a Reply

error: Content is protected !!