ಮೈಸೂರು: ರಾಹುಲ್ ಗಾಂಧಿಯವರು ಗೂಡ್ಲೂರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದು, ಮಾರ್ಗ ಮಧ್ಯೆ ಭೇಟಿ ಮಾಡಿದ್ದೇನೆ. ಈ ಸಂದರ್ಭದಲ್ಲಿ ಅವರ ಜತೆ ಯಾವುದೇ ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಮಧ್ಯಾಹ್ನ 2.20ರಲ್ಲಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. ಈ ವೇಳೆ ಅವರ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ ಅವರು ದೆಹಲಿಗೆ ತೆರಳುವಾಗಲೂ ಬೀಳ್ಕೊಡಲಾಗುವುದು ಎಂದು ತಿಳಿಸಿದರು.
ಇನ್ನು ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಗೊಂದಲವಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ. ಶಾಸಕರಿಗೆ ಈ ಕುರಿತು ಮಾಹಿತಿ ಇರುವುದಿಲ್ಲ. ಈ ವಿಚಾರದಲ್ಲಿ ನಾನು ಅಥವಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಬೇಕು. ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ನಮ್ಮ ಪಕ್ಷದ ಶಾಸಕರಿಗಿಂತ ಮಾಧ್ಯಮಗಳು ಹೆಚ್ಚು ಆಸಕ್ತಿ ತೋರುತ್ತಿವೆ ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಬಿಜೆಪಿ – ಜೆಡಿಎಸ್ ಮೈತ್ರಿಯಿಂದ ಪಾಲಿಕೆ ಚುನಾವಣೆಗಳಲ್ಲಿ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಜನರು ನಮ್ಮನ್ನು ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಇನ್ನು ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು. ಮುಖ್ಯಮಂತ್ರಿಯಾಗಿ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಫೆಬ್ರವರಿ 13ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೇವಲ 2 ನಿಮಿಷವಷ್ಟೇ ಸಿಎಂ, ಡಿಸಿಎಂಗೆ ಭೇಟಿ: ಮೈಸೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನ ಗೂಡ್ಲೂರಿಗೆ ಪಯಣ ಬೆಳೆಸಿದರು. ನಂತರ ಸಂಜೆ 5:45 ಕ್ಕೆ ಹೆಲಿಕಾಪ್ಟರ್‌ನಲ್ಲಿ ತಮಿಳುನಾಡಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಂಜೆ 6 ಗಂಟೆಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸ್ ಆಗುವರು.
15 ನಿಮಿಷ ಅಷ್ಟೆ ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಇದ್ದರು. ತಮಿಳುನಾಡಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಜೆ ಹೆಲಿಕಾಪ್ಟರ್‌ನಲ್ಲಿ ಮೈಸೂರಿಗೆ ವಾಪಸ್ ಆಗಲಿದ್ದಾರೆ. ಹೀಗಾಗಿ ತರಾತುರಿಯಲ್ಲಿ ರಾಹುಲ್ ಗಾಂಧಿ ಹೊರಟರು. ಕೇವಲ 2 ನಿಮಿಷವಷ್ಟೇ ಸಿಎಂ, ಡಿಸಿಎಂಗೆ ಭೇಟಿಗೆ ಅವಕಾಶ ಸಿಕ್ಕಿತು. ಇಬ್ಬರೂ ನಾಯಕರು ಉಭಯ ಕುಶಲೋಪರಿ ವಿಚಾರಿಸಿದರು.
ಅಧಿಕಾರ ಹಂಚಿಕೆ ಗೊಂದಲ ಶುರುವಾದ ಮೇಲೆ ಮೊದಲ ಬಾರಿಗೆ ರಾಹುಲ್ ಗಾಂಧಿ ಅವರನ್ನು ಸಿದ್ದು-ಡಿಕೆಶಿ ಭೇಟಿಯಾಗಿದ್ದಾರೆ. ಆದರೂ ಈ ಭೇಟಿಯಲ್ಲಿ ಯಾವುದೇ ಮಾತುಕತೆ ಇರಲಿಲ್ಲ. ಉಭಯ ಕುಶಲೋಪರಿಗಷ್ಟೆ ಸಿಮೀತವಾಯಿತು.
ಮೈಸೂರಿನಲ್ಲಿ ಡಿಕೆಶಿ ಏಕಾಂಗಿ ಸಂಚಾರ ಮಾಡಿದರು. ಡಿಕೆ-ಸಿದ್ದು ನಾನೊಂದು ತೀರ, ನೀನೊಂದು ತೀರ ಎಂಬಂತಿದ್ದರು. ರಾಹುಲ್ ಗಾಂಧಿಯನ್ನು ಹೆಲಿಕಾಪ್ಟರ್ ಹತ್ತಿಸಿ ನಾಯಕರು ಹೊರಬಂದರು. ಏರ್‌ಪೋರ್ಟ್ ಹೊರಗೆ ಬರುತ್ತಿದ್ದಂತೆ ಇಬ್ಬರೂ ಪ್ರತ್ಯೇಕವಾಗಿ ತೆರಳಿದರು. ಸಿಎಂ ಜೊತೆ ಬಾರದೆ ದೂರ ನಡೆದು ಕಾರ್ ಹತ್ತಿ ಡಿಕೆಶಿ ಹೊರಟರು.
ರಾಹುಲ್ ಗಾಂಧಿಗೆ ಮೈಸೂರು ಅರಮನೆ ಪ್ರತಿಕೃತಿಯನ್ನು ಸಿಎಂ ಸಿದ್ದರಾಮಯ್ಯ ಉಡುಗೊರೆಯಾಗಿ ನೀಡಿದರು. ಆನೆ ಪ್ರತಿಕೃತಿಯನ್ನು ಸಚಿವ ಕೆ.ಜೆ.ಜಾರ್ಜ್ ಗಿಫ್ಟ್ ಕೊಟ್ಟರು.
Related










