ಲಾಲ್‌ಬಾಗ್: 219ನೇ ಫಲಪುಷ್ಪ ಪ್ರದರ್ಶನಕ್ಕೆ ಡಿಸಿಎಂ ಡಿಕೆಶಿ ಚಾಲನೆ- “ಪೂರ್ಣಚಂದ್ರ ತೇಜಸ್ವಿ ಪ್ರಕೃತಿ ವಿಸ್ಮಯ” ಅನಾವರಣ

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆಯು ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಮತ್ತು ಕೃತಿಗಳ ಕುರಿತಾದ “ತೇಜಸ್ವಿ ವಿಸ್ಮಯ” ಥೀಮ್ ಅಡಿ ಇಂದಿನಿಂದ ಜನವರಿ 26ರವರೆಗೆ ಫಲಪುಷ್ಪ ಪ್ರದರ್ಶನ ಆಯೋಜಿಸಿದೆ.

ಈ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರೊಂದಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ.
ಇಂದು ಲಾಲ್‌ಬಾಗ್‌ನಲ್ಲಿ ತೇಜಸ್ವಿಯವರ ಪ್ರಕೃತಿ ವಿಸ್ಮಯವೇ ಅನಾವರಣಗೊಂಡಿದೆ. ಕರ್ವಾಲೋ ಕಾದಂಬರಿ ಕಾಲ್ಪನಿಕ ಚಿತ್ರಣ, ಬಿಳಿಗಿರಿ ರಂಗನ ಬೆಟ್ಟದ ಹಳ್ಳಿ ಸೊಗಡು, ಜಾನಪದ, ಡೊಳ್ಳು ಕುಣಿತ, ನಂದಿಗಿರಿಧಾಮ, ನಾರುಬೇರಿನ ಪ್ರದರ್ಶನ ಇದ್ದು, ಎಲ್ಲರೂ ಈ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಬನ್ನಿ ಬನ್ನಿ ಎಂದು ಕೈಬೀಸಿ ಕರೆಯುತ್ತಿದೆ.
ಹೌದು! ಪ್ರದರ್ಶನದಲ್ಲಿ ಹೂವಿನ ಮೂಲಕವೇ ತೇಜಸ್ವಿ ವಿಸ್ಮಯ ಲೋಕವನ್ನು ಸೃಷ್ಟಿಸಿದ್ದಾರೆ. ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನವನ್ನು ಡಿಕೆಶಿ ಉದ್ಘಾಟಿಸಿದ್ದಾರೆ. ಫಲಪುಷ್ಪ ಪ್ರದರ್ಶನದಲ್ಲಿ ಗಾಜಿನ ಮನೆ ತುಂಬೆಲ್ಲ ತೇಜಸ್ವಿ ಬದುಕಿನ ಕುರಿತ ಪರಿಕಲ್ಪನೆ ಮೂಡಿಸಿದ್ದಾರೆ.
ಹಾರುವ ಓತಿ ಹಾಗೂ ಆನೆಯ ಮುಖದ ಪ್ರವೇಶದ್ವಾರ, ಪೂರ್ಣಚಂದ್ರ ತೇಜಸ್ವಿ ಅವರ ನಾನಾ ಪ್ರತಿಮೆ ಹೂವಿನಿಂದಲೇ ನಿರ್ಮಿಸಿದ್ದಾರೆ. ಇನ್ನೂ ಐದು ಕಡೆ ತುರ್ತುಘಟಕ ವ್ಯವಸ್ಥೆ, ಜೇನುಹುಳು, ನಾಯಿಯಿಂದ ತೊಂದರೆಯಾದ್ರೆ ಚಿಕಿತ್ಸೆ ನೀಡಲು ವ್ಯವಸ್ಥೆ, 15 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಪ್ರದರ್ಶನಕ್ಕೆ ಬರಲು ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರ ಮೂಲಕ ಎಂಟ್ರಿ ಪಡೆಯಲು ಅವಕಾಶವಿದೆ.
ಈ ಬಾರಿ ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ. ಹಾಗೂ ರಜೆ ದಿನಗಳಲ್ಲಿ 100 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಜತೆಗೆ ಮಕ್ಕಳಿಗೆ 30 ರೂ. ಹಾಗೂ ಆರು ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಉಚಿತ ನೀಡಲಾಗಿದೆ.
ಉದ್ಘಾಟನೆ ಬಳಿಕ ಡಿಕೆಶಿ ಶಿಡ್ಲಘಟ್ಟ ಬ್ಯಾನರ್ ವಿಚಾರವಾಗಿ ಮಾತನಾಡಿ, ಇದು ಪವಿತ್ರ ಜಾಗ. ಚಿಲ್ಲರೆ ವಿಚಾರಗಳನ್ನು ಇಲ್ಲಿ ಚರ್ಚೆ ಮಾಡೋದು ಬೇಡ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ಹೆಣ್ಣು ಮಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಶಾಸಕ ಉದಯ ಗರುಡಚಾರ್, ಎಂಎಲ್ಸಿ ಶರವಣ ಸೇರಿದಂತೆ ಹಲವರು ಭಾಗಿಯಾಗಿದ್ದರು.
Related









