ಮೈಸೂರು/ಮಂಡ್ಯ: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಬಾಗಿನ ಅರ್ಪಿಸಿದರು.
ಕಪಿಲಾ, ಕಾವೇರಿ ನದಿಯು ಮೈದುಂಬಿ ಹರಿಯುತ್ತಿರುವ ಈ ಎರಡೂ ಜಲಾಶಯಕ್ಕೆ ಸಂಪ್ರದಾಯದಂತೆ ಬಾಗಿನ ಸಮರ್ಪಿಸಿ ಮಾತನಾಡಿದ ಅವರು, ಕಬಿನಿ, ಕಾವೇರಿ ಜಲಾಶಯವು ನಿರ್ಮಾಣವಾದಾಗಿನಿಂದ 29 ಬಾರಿ ತುಂಬಿದ್ದು, ಕಳೆದ 3 ವರ್ಷಗಳಿಂದ ಸತತವಾಗಿ ಜಲಾಶಯವು ಪೂರ್ಣಮಟ್ಟಕ್ಕೆ ತುಂಬುತ್ತಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ಈ ಬಾರಿ ವರುಣನ ಕೃಪೆಯಿಂದಾಗಿ ರೈತರು ಸಂಭ್ರಮದಿಂದ ಬೇಸಾಯದಲ್ಲಿ ಪಾಲ್ಗೊಂಡಿದ್ದಾರೆ. ಪ್ರಕೃತಿ ಮಾತೆ ಕನ್ನಡ ನಾಡನ್ನು ಸಂಪದ್ಭರಿತವಾಗಿಸಿದ್ದು, ಅದರ ಸದ್ಬಳಕೆ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ರಾಜ್ಯದ ನೀರಾವರಿ ಕ್ಷೇತ್ರದ ಹೆಚ್ಚಳಕ್ಕೆ ಸರ್ಕಾರ ಬದ್ಧವಾಗಿದ್ದು, ನೀರಾವರಿಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇದರಂತೆ ಈವರೆಗೆ ನಮ್ಮ ಸರ್ಕಾರ ಸುಮಾರು 7,400 ಕೋಟಿ ರೂ.ಗಳ 28 ವಿವಿಧ ಯೋಜನೆಗಳಿಗೆ ಮಂಜೂರಾತಿಗೆ ಅನುಮೋದನೆ ನೀಡಿದ್ದು, ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.
ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ 52 ಗ್ರಾಮಗಳಿಗೆ 212 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದ್ದು ಹಾಗೂ ಕಬಿನಿ ಬಲದಂಡೆ ನಾಲೆ ಆಧುನೀಕರಣಗೊಳಿಸಲಾಗಿದೆ. ಒಟ್ಟಾರೆಯಾಗಿ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ನಮ್ಮ ಸರ್ಕಾರವು ನೀರು ವ್ಯರ್ಥವಾಗದಂತೆ ತಡೆಯಲು ಜಲಾಶಯಗಳ ಕಾಲುವೆಗಳ ಆಧುನೀಕರಣ ಸೇರಿದಂತೆ, ಏತ ನೀರಾವರಿ ಹಾಗೂ ಕೆರೆಗಳನ್ನು ತುಂಬಿಸುವ ಯೋಜನೆಗಳನ್ನು ಕೈಗೊಂಡಿದೆ. ಈಗಿನ ಆರ್ಥಿಕ ಇತಿಮಿತಿಯಲ್ಲಿಯೂ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ನಮ್ಮ ಸರ್ಕಾರವು ನಿರ್ಧರಿಸಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಬಿನಿ ಜಲಾಶಯದ ಕೆಳಭಾಗದಲ್ಲಿ ಮೇಲ್ಮಟ್ಟದ ಸೇತುವ ಹಾಗೂ ಸಂಪರ್ಕ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗಳಿಗೂ ಅವರು ಶಂಕುಸ್ಥಾಪನೆ ನೆರವೇರಿಸಿದರು.
ತಾಲೂಕಿನ ಚೀಚನಹಳ್ಳಿ ಸೇರಿ ಸುತ್ತಮುತ್ತಲಿನ ಕೆಲವು ಗ್ರಾಮಗಳ ರಸ್ತೆಗಳು ಸಂಪರ್ಕ ಕಳೆದುಕೊಂಡು, ಜನರು ತೊಂದರೆಗಿಡಾಗಿದ್ದರಿಂದ ಈ ಸೇತುವೆ ನಿರ್ಮಾಣ ಬಹದಿನಗಳ ಬೇಡಿಕೆಯಾಗಿತ್ತು. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಮನಹರಿಸಿ ಈ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ಕೊಡಿಸಿದ್ದರಿಂದ ಶುಕ್ರವಾರ ಕಾಮಗಾರಿಗೆ ಚಾಲನೆ ನೀಡಲಾಯಿತು.
ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ಎಸ್.ಎ.ರಾಮದಾಸ್, ಅನಿಲ್ ಚಿಕ್ಕಮಾದು, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ, ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ, ಮುಖ್ಯ ಇಂಜಿನಿಯರ್ ಶಂಕರೇಗೌಡ ಇತರರು ಇದ್ದರು.