ಮಂಡ್ಯ: ನಾನು ಅಂದು ಕೊಂಡಂತೆ ಸಾಧನೆ ಮಾಡಲು ಆಗುತ್ತಿಲ್ಲ ಎಂದು ನೊಂದ ಬ್ಯಾಂಕ್‌ನ ವ್ಯವಸ್ಥಾಪಕಿಯೊಬ್ಬರು ಆತ್ಮಹತ್ಯೆ ಮಾಡಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿಯ ಮ್ಯಾನೇಜರ್ ಶ್ರುತಿ (30) ಎಂಬುವರೆ ನಗರದ ವಿನಾಯಕ ಬಡಾವಣೆಯ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದವರು.
ಐಎಎಸ್ ಮಾಡಬೇಕು ಎಂಬ ಕನಸು ನನಸಾಗಲಿಲ್ಲ. ಇದರ ಜತೆಗೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ನನ್ನ ಐಎಎಸ್ ಕನಸು ಮತ್ತು ಜೀವನದ ವೈಫಲ್ಯದಿಂದ ಇಹಲೋಕ ತ್ಯಜಿಸುತ್ತಿದ್ದೇನೆ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾರೆ ಎನ್ನಲಾಗಿದೆ.
ಕೊಳ್ಳೇಗಾಲದ ನಿವಾಸಿ ಮಲ್ಲಪ್ಪ ಎಂಬುವರ ಪುತ್ರಿಯಾದ ಶ್ರುತಿ ಕಾವೇರಿ ಗ್ರಾಮೀಣ ಬ್ಯಾಂಕ್‌ನ ಉದ್ಯೋಗಿಯಾಗಿ ನೇಮಕಗೊಂಡು ಚಿಕ್ಕಮಗಳೂರಿನ ಶಾಖೆಯಲ್ಲಿ ಕಳೆದ ಏಳು ವರ್ಷ ಕಾರ್ಯನಿರ್ವಹಿಸಿದ್ದು, ಅಲ್ಲಿಂದ ಮಂಡ್ಯದ ಪ್ರಾದೇಶಿಕ ಕಚೇರಿಗೆ ಎರಡು ತಿಂಗಳ ಹಿಂದೆಯಷ್ಟೇ ವರ್ಗಾವಣೆ ಆಗಿ ಬಂದಿದ್ದರು.
ಅವಿವಾಹಿತರಾಗಿದ್ದ ಶ್ರುತಿ ಮಂಡ್ಯದ ವಿನಾಯಕ ಬಡಾವಣೆಯಲ್ಲಿ ರಾಜಣ್ಣ ಎಂಬುವರ ಮನೆಯನ್ನು ಬಾಡಿಗೆಗೆ ಪಡೆದು ಒಬ್ಬರೆ ವಾಸವಾಗಿದ್ದರು.
ಭಾನುವಾರ ರಾತ್ರಿ 7ಗಂಟೆ ಸುಮಾರಿಗೆ ತಂದೆ ಮಲ್ಲಪ್ಪ ಅವರಿಗೆ ಕರೆ ಮಾಡಿ ನಾನು ದೇವರ ಬಳಿ ಹೋಗುತ್ತಿದ್ದೇನೆ, ನನ್ನನ್ನು ಕ್ಷಮಿಸಿ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಈ ಮಾತಿನಿಂದ ಗಾಬರಿಗೊಂಡ ತಂದೆ ತಕ್ಷಣ ಮತ್ತೆ ಕರೆ ಮಾಡಿದ್ದಾರೆ. ಆದರೆ ಅಷ್ಟರಲ್ಲೇ ಮೊಬೈಲ್ ಸ್ವಿಚ್ ಆಫ್ ಆಗಿತ್ತು.
ಇನ್ನಷ್ಟು ಗಾಬರಿಗೊಂಡ ತಂದೆ ಮಲ್ಲಪ್ಪ ಮಂಡ್ಯದಲ್ಲಿದ್ದ ಸಂಬಂಧಿಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಸಂಬಂಧಿಕರು ಮನೆ ಬಳಿ ಬಂದು ನೋಡುವಷ್ಟರಲ್ಲೇ ನೇಣು ಬಿಗಿದುಕೊಂಡಿದ್ದರು.
ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತ ದೇಹವನ್ನು ಮಿಮ್ಸ್‌ಗೆ ರವಾನಿಸಿದ್ದಾರೆ.