NEWSಕೃಷಿಮೈಸೂರು

ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ರೈತರಿಗೆ ನ್ಯಾಯ ಸಮ್ಮತ ಪರಿಹಾರ ನೀಡಲು ಪಟ್ಟು: ಡಿಸಿ ಕಚೇರಿ ಬಳಿ ರೈತ ಮುಖಂಡರ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಮೈಸೂರು: 66/11 ಕೆ.ವಿ. ಮತ್ತು 220 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ನಿಗಮದ ತಂತಿ ರೈತರ ಜಮೀನಿನ ಮೇಲೆ ಹಾದು ಹೋಗಿರುವುದರಿಂದ ಕೃಷಿ ಭೂಮಿ ಕಳೆದು ಕೊಳ್ಳುತ್ತಿರುವ ರೈತರಿಗೆ ತಕ್ಷಣವೇ ಬದುಕು ರೂಪಿಸಿ ಕೊಳ್ಳಲು ಮೌಲ್ಯಾಧಾರಿತ ನ್ಯಾಯ ಸಮ್ಮತ ಭೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಮುಖಂಡರು ಪ್ರತಿಭಟನೆ ಮಾಡಿದರು.

ಇಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ನೇತೃತ್ವದಲ್ಲಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡ ರೈತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಹುಣಸೂರು ಉಪ ವಿಭಾಗದ ಗೆಜ್ಜೆಯನವಡ್ಡರಗುಡಿ ಗ್ರಾಮದ ಮಿನಿ ಸ್ಟೇಷನ್‌ನಿಂದ ಹಾದು ಹೋಗುವ ಲೈನ್‌ಗಳ ಊರುಗಳಾದ ಗೆಜ್ಜಯ್ಯನ ವಡ್ಡರಗುಡಿ, ಧರ್ಮಾಪುರ, ಕರಿಮುದ್ದನಹಳ್ಳಿ, ಆಸ್ಪತ್ರೆ ಕಾವಲ್, ಬಸ್ತಿ ಮಾರನಹಳ್ಳಿ, ಹಳ್ಳದಕೊಪ್ಪಲು, ಉದ್ಭೂರು ಕಾವಲ್, ತರಿಕಲ್, ತರಿಕಲ್ ಕಾವಲ್ ಮುಂತಾದ ಗ್ರಾಮಗಳ ರೈತರ ಜಮೀನುಗಳ ಮೇಲೆ ವಿದ್ಯುತ್ ಲೈನ್ ಹಾದು ಹೋಗಿರುವ ಮತ್ತು ಟವರ್ ನಿರ್ಮಾಣ ಮಾಡಿರುವ ರೈತರ ಜಾಗಕ್ಕೆ ಭೂಮಿ ಪರಿಹಾರ ನೀಡಬೇಕು. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಕ್ರಮ ಜಾರಿಯಾಗಿಲ್ಲ ಎಂದು ಕಿಡಿಕಾರಿದರು.

ಇನ್ನು ಅಧಿಕಾರಿಗಳು ಈ ಸಂಬಂಧ ಕಾರ್ಯ ನಿರ್ವಹಿಸಲು ಸಭೆ ನಡೆಸಿದ್ದು, ಜಮೀನಿನ ರೈತರ ಗಮನಕ್ಕೂ ತರದೆ ಹಾಗೂ ಅನುಮತಿಯನ್ನೂ ಪಡೆಯದೆ ಸುಳ್ಳು ವರದಿ ಸೃಷ್ಟಿಸಿ, ರೈತರ ಕಣ್ಣಿಗೆ ಮಣ್ಣು ಎರಚಿ ಬದುಕು ನಾಶ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನ ಆದೇಶದ ಪ್ರತಿಯಂತೆ ರೈತರು ಮತ್ತು ಭೂ ಮಾಲೀಕರನ್ನು ಕರೆದು ದರ ನಿರ್ಧಾರ ಮಾಡಿದ್ದೇವೆಂದು 05-03-2024 ರಂದು ಉಪ ವಿಭಾಗಾಧಿಕಾರಿಗಳು ಸುಳ್ಳು ಮಾಹಿತಿಯನ್ನು ನೀಡಿದ್ದಾರೆ.

ಅಲ್ಲದೆ ನಾವು ಮತ್ತೆ ಮಾಹಿತಿ ಹಕ್ಕಿನಡಿಯಲ್ಲಿ ಯಾವ ರೈತರು, ಜಮೀನುಗಳ ಮಾಲೀಕರು ಸಭೆಯಲ್ಲಿ ಹಾಜರಿದ್ದರು ಎಂದು ಮಾಹಿತಿ ಹಕ್ಕಿನಡಿಯಲ್ಲಿ ಕೋರಿದಾಗ, ಯಾರು ಸಭೆಯಲ್ಲಿ ಹಾಜರಾತಿಗೆ ಸಮ್ಮತಿಸದೇ ನಿರಾಕರಿಸಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಇದು ರೈತರು ಸಭೆಗೆ ಗೈರು ಆಗಿರುವ ಬಗ್ಗೆ ಸ್ಪಷ್ಟ ಸಂದೇಶ ನೀಡುತ್ತದೆ.

ಮತ್ತೆ ರೈತರ ಜಮೀನಿಗೆ ನ್ಯಾಯ ಸಮ್ಮತ ದರ ನಿರ್ಧಾರವಾಗಿರುವುದು ಕಂಡುಬಂದಿಲ್ಲ. ಈ ಭಾಗದ ರೈತರ ಜಮೀನುಗಳ ಬೆಲೆ 1 ಗುಂಟೆಗೆ 2 ಲಕ್ಷ ರೂಪಾಯಿ ಇದೆ. ಇಂತಹ ಸಂದರ್ಭದಲ್ಲಿ ರೈತರು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು ನ್ಯಾಯಸಮ್ಮತ ಬೆಲೆ ನಿಗದಿಮಾಡಿ ನಾಲ್ಕು ಪಟ್ಟು ಹೆಚ್ಚು ಕೊಡಿಸಬೇಕೆಂದು ಈಗಾಗಲೇ ಒತ್ತಾಯಿಸಿದ್ದೇವೆ ಎಂದು ಹೇಳಿದರು.

ಅಲ್ಲದೆ ಈ ಹಿಂದೆ ವಿದ್ಯುತ್ ನಿಗಮದ ಅಧಿಕಾರಿಗಳು ರೈತರ ಅನುಮತಿ ಪಡೆಯದೇ ಲೈನ್‌ ಚಾರ್ಜ್ ಮಾಡಿದ್ದಾರೆ. ರೈತರು ಸಭೆಗೆ ಭಾಗವಹಿಸದೇ ಇರುವ ಬಗ್ಗೆ ಮಾಹಿತಿ ಹಕ್ಕಿನ ಪ್ರತಿ ಲಗತ್ತಿಸಿದೆ. ಕೇವಲ ವಿದ್ಯುತ್ ಪ್ರಸರಣಾ ನಿಗಮದ ಅಧಿಕಾರಿಗಳು ನಿರ್ಧಾರ ಮಾಡಿ ಭೂಮಿ ಮೌಲ್ಯವನ್ನು ನಿಗದಿ ಪಡಿಸಿರುವ ಬಗ್ಗೆ ಆದೇಶದ ಪ್ರತಿಯನ್ನೂ ಲಗತ್ತಿಸಿದೆ.

ಅದೇ ರೀತಿ ಮೈಸೂರು ತಾಲೂಕು ಕಡಕೋಳದಿಂದ ವಾಜಮಂಗಲಕ್ಕೆ ಹೋಗುವ 220 ಕೆವಿ ಈ ಯೋಜನೆಗೆ ಸಂಬಂಧಪಟ್ಟಂತೆ ಕೂಡನಹಳ್ಳಿ ದೇವಲಾಪುರ ಮಾರಶೆಟ್ಟಳ್ಳಿ, ಚೋರನಹಳ್ಳಿ, ವರುಣ, ವಾಜಮಂಗಲ ಹಳ್ಳಿಗಳ ರೈತರಿಗೂ ಸರಿಯಾದ ಪರಿಹಾರ ನೀಡದೆ ದಬ್ಬಾಳಿಕೆಯಿಂದ ಕೆಲಸ ಮಾಡಲು ಹೋಗಿದ್ದಾರೆ. ಹಳ್ಳಿಗಳಲ್ಲಿರುವ ರೈತರ ಜಮೀನುಗಳ ಅಕ್ಕ ಪಕ್ಕದಲ್ಲಿ ಲೇಔಟ್‌ಗಳು ಇದ್ದು ಒಂದು ಗುಂಟೆಗೆ 6 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಬೆಲೆ ಆಗುತ್ತಿದೆ. ಆದರೆ, ಇಲಾಖೆಯವರು ಕೇವಲ 50,000 – 60,000 ರೂ.ಗಳನ್ನು ಹೇಳುತ್ತಿದ್ದಾರೆ, ಆದ್ದರಿಂದ ಒಂದು ಗುಂಟೆಗೆ ಕನಿಷ್ಠ 6 ಲಕ್ಷ ರೂ. ನಿಗದಿ ಮಾಡಬೇಕೆಂದು ಆಗ್ರಹಿಸಿದರು.

ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಮಾತನಾಡಿ, ಕೃಷಿ ಪಂಪ್ ಸೆಟ್ ಬಳಕೆ ರೈತರಿಗೆ ಆಧಾರ್ ನೋಂದಣಿ ಮಾಡಿ ಮೀಟರ್ ಅಳವಡಿಕೆ ಕೈ ಬಿಡಬೇಕು. ಅಕ್ರಮ ಸಕ್ರಮ ಯೋಜನೆ ಮುಂದುವರಿಸಿ ಕೃಷಿ ಪಂಪ್‌ಸೆಟ್ ವಿದ್ಯುತ್ ಬಳಕೆ ರೈತರಿಗೆ 5000 ರೂ. ಕಟ್ಟಿಸಿಕೊಂಡು ಸಂಪರ್ಕ ಕಲ್ಪಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ ಹೈ ಪವರ್ ವಿದ್ಯುತ್ ತಂತಿ ಹಾದು ಹೋಗಿರುವ ಜಮೀನುಗಳ ರೈತರಿಗೆ ಕೃಷಿ ಪಂಪ್‌ಸೆಟ್ ವಿದ್ಯುತ್ ಬಳಕೆಗೆ ಸರ್ಕಾರದಿಂದಲೇ ಉಚಿತ ಸಂಪರ್ಕ ಕಲ್ಪಿಸಿ ಕೊಡಬೇಕು. ರೈತರು ತಮ್ಮ ತೋಟ ಹಾಗೂ ಕೃಷಿ ಜಮೀನಿನಲ್ಲಿ ವಾಸದ ಮನೆ ನಿರ್ಮಾಣ ಮಾಡಿ ಕೊಂಡಿರುವ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಟ್ಟು ವಿದ್ಯಾರ್ಥಿಗಳಿಗೆ ಹಾಗೂ ವಯೋ ವೃದ್ಧರಿಗೆ ಬೆಳಕಿನ ವ್ಯವಸ್ಥೆಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಬಳಿಕ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಶಿವರಾಜ್ ಅವರಿಗೆ ಸಲ್ಲಿಸಲಾಯಿತು.

ಸಂಘದ ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಕುರುಬೂರು ಸಿದ್ದೇಶ್, ವರಕೋಡು ನಾಗೇಶ್, ಕೆಂಡಗಣಪ್ಪ, ಕುರುಬೂರು ಪ್ರದೀಪ್, ಕೋಟೆ ರಾಜೇಶ್, ಕೂಡನಹಳ್ಳಿ ಸೋಮಣ್ಣ, ಬನ್ನೂರು ಸೂರಿ, ರಂಗರಾಜು, ಕುರುಬೂರು ಪ್ರಸಾದ್, ಕಾಟೂರು ಮಹದೇವಸ್ವಾಮಿ, ನಾಗೇಶ್, ಕಿರಗನೂರು ಪ್ರಸಾದ್ ನಾಯಕ, ಪುಟ್ಟಸ್ವಾಮಿ, ಮಹೇಶ, ಕೆಂಪನಂಜಪ್ಪ, 100 ಕ್ಕೂ ಹೆಚ್ಚು ರೈತರು ಇದ್ದರು.

Megha
the authorMegha

Leave a Reply

error: Content is protected !!