ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ ಮಳೆ ಆಗಿದ್ದು, ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ಈ ಸಂದರ್ಭದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿರುವ ಘಟನೆ ಶೇಷಾದ್ರಿಪುರಂ ಕಾನೂನು ಕಾಲೇಜು ಬಳಿ ಸಂಭವಿಸಿದೆ. ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ವಿವಿಧ ಪ್ರದೇಶಗಳಲ್ಲಿ 3.2 ಸೆಂ.ಮೀ.ವರೆಗೂ ಮಳೆಯಾಗಿದೆ. ಈ ಮಳೆ ಜತೆಗೆ ಭಾರಿ ಗಾಳಿಗೆ ಅಲ್ಲಲ್ಲಿ ಅವಾಂತರಗಳೂ ಸಂಭವಿಸಿವೆ. ಬೃಹತ್ ಮರಗಳು, ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಮಳೆ ಗಾಳಿಯಿಂದ ರಾತ್ರಿ ಬಿದ್ದ ಮರಗಳನ್ನು ಈವರೆಗೂ ತೆರವು ಮಾಡದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಾರೆ.
ಇನ್ನೂ ಸಂಜೆ 6:10ರ ವೇಳೆ ಶೇಷಾದ್ರಿಪುರಂ ಕಾನೂನು ಕಾಲೇಜು ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ 3 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಆದರೆ, ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇತ್ತ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರವನ್ನು ಈವರೆಗೂ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳು ತೆರವು ಮಾಡಿಲ್ಲ. ಅಲ್ಲದೇ ಎಂಜಿ ರೋಡ್ ಬಳಿಯ ಶಾಂತಲಾ ರಸ್ತೆಯ ಮುಖ್ಯರಸ್ತೆಯಲ್ಲೂ ಬೃಹತ್ ಗಾತ್ರದ ಮರ ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತು.
ಇನ್ನೂ 4 ದಿನ ಭಾರೀ ಮಳೆ -ಎಚ್ಚೆರಿಕೆ: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನಗಳವರೆಗೆ ಅಂದರೆ ಜುಲೈ 15ರ ವರೆಗೆ ಭಾರಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಸಾರ್ವಜನಿಕರು ಎಚ್ಚರ ಹಿಸುವಂತೆ ಸಲಹೆ ನೀಡಲಾಗಿದೆ.

ರಾಜ್ಯದಲ್ಲಿ ನೈಋತ್ಯ ಮುಂಗಾರು ತೀವ್ರತೆ ಹೆಚ್ಚಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಸಾಧರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
Related

 










