- ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ ಚಿರತೆ ದಾಳಿಗೆ ಸಿಲುಕಿ ಮೃತಪಟ್ಟ ಯುವಕ
- ಚಿರತೆ ದಾಳಿ ಹಿನ್ನೆಲೆ ಬೆಟ್ಟಕ್ಕೆ ಪಾದಯಾತ್ರೆ, ಬೈಕ್ ಸಂಚಾರ ನಿರ್ಬಂಧಿಸಿ ಎಡಿಸಿ ಜವರೇಗೌಡ ಆದೇಶ
ಹನೂರು: ಪ್ರಸಿದ್ಧ ಯಾತ್ರಾಸ್ಥಳವಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ ಇಂದು (ಬುಧವಾರ) ಮುಂಜಾನೆ ನಡೆದಿದ್ದು, ಬೆಳಗ್ಗೆ 11 ಗಂಟೆ ಸುಮಾರಿಗೆ ಶವ ಪತ್ತೆಯಾಗಿದೆ. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ತಾಳುಬೆಟ್ಟದಲ್ಲಿ ಘಟನೆ ಜರುಗಿದೆ.

ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಎಂಬವರು ಚಿರತೆ ದಾಳಿಗೆ ಮೃತಪಟ್ಟಿರುವ ಪಾದಯಾತ್ರಿ. ಮಲೆಮಹದೇಶ್ವರ ಬೆಟ್ಟಕ್ಕೆ ಮಂಡ್ಯ ಚಿರನಹಳ್ಳಿ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಜನರು ಪಾದಯಾತ್ರೆ ತೆರಳಿದ್ದರು. ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ, ಬುಧವಾರ ಬೆಳಗ್ಗೆ ಅಲ್ಲಿಂದ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ಹೊರಟಿದ್ದರು.
ಈ ಸಂದರ್ಭದಲ್ಲಿ, ಬುಧವಾರ ಬೆಳಗ್ಗೆ ಸುಮಾರು 5.45ರಲ್ಲಿ ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಿಕರ ಮಾರ್ಗದಲ್ಲಿ ಕುಳಿತಿದ್ದ ಚಿರತೆಯು ಪ್ರವೀಣ್ ಮೇಲೆ ದಾಳಿ ಮಾಡಿ ಎಳೆದೊಯ್ದಿದೆ. ಈ ವೇಳೆ ಜತೆಯಲ್ಲಿದ್ದ ಐವರು ಸ್ನೇಹಿತರು ಕಿರುಚಾಡಿಕೊಂಡು ಚಿರತೆ ಓಡಿಸಲು ಎಷ್ಟೇ ಪ್ರಯತ್ನಪಟ್ಟರೂ ಪ್ರವೀಣ್ನನ್ನು ಅರಣ್ಯದೊಳಗೆ ಎಳೆದೊಯ್ದಿದೆ.
ಭಯಭೀತರಾದ ಸ್ನೇಹಿತರು ಮಲೆಮಹದೇಶ್ವರ ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಶವವನ್ನು ಪತ್ತೆ ಮಾಡಿದ್ದಾರೆ.
ಪಾದಯಾತ್ರೆಗೆ ಬ್ರೇಕ್: ಚಿರತೆ ದಾಳಿ ಹಿನ್ನೆಲೆ ಮೂರು ದಿನಗಳ ಕಾಲ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ, ಬೈಕ್ ಸಂಚಾರ ನಿರ್ಬಂಧಿಸಿ ಚಾಮರಾಜನಗರ ಎಡಿಸಿ ಜವರೇಗೌಡ ಆದೇಶಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ತಪ್ಪಲಾದ ತಾಳುಬೆಟ್ಟ ಸಮೀಪ ಚಿರತೆ ದಾಳಿಗೆ ವ್ಯಕ್ತಿ ಬಲಿಯಾದ ಹಿನ್ನೆಲೆ ಚಿರತೆ ಸೆರೆ ಕಾರ್ಯಾಚರಣೆ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜ.24ರ ತನಕ ಪಾದಯಾತ್ರೆ ಕೈಗೊಳ್ಳದಂತೆ ಆದೇಶ ಹೊರಡಿಸಿದ್ದಾರೆ.
ಪಾದಯಾತ್ರಿಗಳು, ಬೈಕ್ ಸವಾರರ ಮೇಲೆ ಚಿರತೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಬೈಕ್ ಸಂಚಾರ, ಕಾಲ್ನಡಿಗೆ ಮೂಲಕ ತೆರಳುವುದು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ರೈತರ ಪ್ರತಿಭಟನೆ: ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ಚಿರತೆ ದಾಳಿ ನಡೆಸಿರುವುದು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಾಮೂಹಿಕ ನಾಯಕತ್ವದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹೊನ್ನೂರು ಪ್ರಕಾಶ್ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಚಿರತೆ ಕುಳಿತಿರುವುದನ್ನು ಭಕ್ತಾದಿಗಳು ಹಾಗೂ ವಾಹನ ಸವಾರರು ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದರಿಂದ ಪಾದಯಾತ್ರಿಕ ಮೃತಪಟ್ಟಿದ್ದಾನೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್, ಹೆಚ್ಚುವರಿ ಪೊಲೀಸ್ ಅಧಿಕಾರಿ ಶಶಿಧರ್ ಭೇಟಿ ನೀಡಿ ಚಿರತೆಯನ್ನು ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಚಿರತೆ ಸೆರೆಗೆ ಬೋನ್: ಚಿರತೆ ದಾಳಿ ಮಾಡಿದ್ದ ತಾಳುಬೆಟ್ಟದ ಮಾರ್ಗದಲ್ಲಿರುವ ರಂಗಸ್ವಾಮಿ ಒಡ್ಡಿನ ಬಳಿ ನಾಯಿ ಕಟ್ಟಿ ಬೋನ್ ಇಡಲಾಗಿದ್ದು, ಚಿರತೆ ಸೆರೆಗೆ ಕೂಂಬಿಂಗ್ ನಡೆಸಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಭಾಸ್ಕರ್ ಮಾಹಿತಿ ನೀಡಿದ್ದು, ಈಗಾಗಲೇ ಚಿರತೆ ಸೆರೆಗೆ ತಜ್ಞರ ತಂಡ ಆಗಮಿಸಿದ್ದು ಡ್ರೋಣ್ ಹಾಗೂ ಥರ್ಮಲ್ ಡ್ರೋಣ್ ಮೂಲಕವೂ ಕೂಂಬಿಂಗ್ ನಡೆಸಲಾಗುತ್ತದೆ. ಆಯಕಟ್ಟಿನ ಸ್ಥಳದಲ್ಲಿ ಬೋನ್ ಇಡಲಾಗಿದೆ ಎಂದು ತಿಳಿಸಿದರು.
ಶಾಸಕ ಎಂ.ಆರ್.ಮಂಜುನಾಥ್ ಪ್ರತಿಕ್ರಿಯೆ: ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಮಂಜುನಾಥ್, ಮಲೆ ಮಹದೇಶ್ವರ ಬೆಟ್ಟದಲ್ಲಿ ಇದುವರೆಗೂ ಈ ರೀತಿ ಘಟನೆಯಾಗಿರಲಿಲ್ಲ. ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು ಚಿರತೆಯನ್ನು ಸೆರೆಹಿಡಿದು ಬೇರೆಡೆ ವರ್ಗಾವಣೆ ಮಾಡಲು ತಿಳಿಸಲಾಗಿದೆ. ಈ ರೀತಿ ಅವಘಡ ಕೊನೆಯಾಗಬೇಕು. ರಸ್ತೆಯಲ್ಲಿ ಹೆಚ್ಚಿನ ಅರಣ್ಯ ವೀಕ್ಷಕರ ನಿಯೋಜನೆ ಮಾಡುವಂತೆ ನಿರ್ದೇಶಿಸಿದ್ದೇನೆ. ಅಲ್ಲದೇ, ಪಾದಯಾತ್ರಿಗಳಿಗೆ ಅರಣ್ಯ ಇಲಾಖೆ ಜಾಗೃತಿ ಮೂಡಿಸಬೇಕು. ಈ ಘಟನೆ ಬೆಳ್ಳಂಬೆಳಗ್ಗೆ ಆಗಿದ್ದು ಭಕ್ತರು ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಪಾದಯಾತ್ರೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಪ್ರವೀಣ್ ಸಂಬಂಧಿಗಳು: ಮೃತ ಪ್ರವೀಣ್ ಜತೆ ಯಾತ್ರೆ ಕೈಗೊಂಡಿದ್ದ ಸಂಜೀವ್ ಮತ್ತು ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಮಂಡ್ಯದ ಚೀರನಹಳ್ಳಿ ಹಾಗೂ ಸುತ್ತಾಮುತ್ತಾ ಗ್ರಾಮಗಳಿಂದ 150ಕ್ಕೂ ಹೆಚ್ಚು ಮಂದಿ ಪಾದಯಾತ್ರೆಗೆ ಬಂದಿದ್ದೆವು. ಇಂದು ಮುಂಜಾನೆ 5.45ರ ವೇಳೆ ರಂಗಸ್ವಾಮಿ ಒಡ್ಡಿನ ಬಳಿ ನಡೆದುಕೊಂಡು ಬರುವಾಗ ಚಿರತೆ ಎದುರಾಯಿತು. ಮೊದಲು ಸರಿಯಾಗಿ ಕಾಣಲಿಲ್ಲ, ಬಳಿಕ ಹತ್ತಿರ ಹೋದಂತೆ ಎಲ್ಲರೂ ಕೂಗಿಕೊಂಡು ಇಳಿಜಾರಿನ ಕಡೆ ಓಡಿದೆವು.
ಆದರೆ, ಪ್ರವೀಣ್ ದಿಬ್ಬದ ಮೇಲೆ ಓಡಿ ಹೋಗೋಕೆ ಶುರು ಮಾಡಿದ್ದ. ಹಿಂದಿನಿಂದ ಬಂದ ಚಿರತೆ ಪ್ರವೀಣ್ ಕತ್ತು ಸೀಳಿ ರಕ್ತ ಹೀರಿ ಬಳಿಕ ಕಾಡಿನೊಳಕ್ಕೆ ಎಳೆದುಕೊಂಡು ಹೋಯಿತು. ಯಾರಿಗಾದರೂ ವಿಚಾರ ತಿಳಿಸೋಣ ಎಂದರೆ ನೆಟ್ವರ್ಕ್ ಇರಲಿಲ್ಲ. ಓಡಿಕೊಂಡು ಹೋಗಿ ಆನೆತಲೆದಿಂಬದ ಬಳಿ ನೆಟ್ವರ್ಕ್ ಸಿಗುವ ಜಾಗದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದೆವು. ಬಳಿಕ ಪೊಲೀಸರು ಅರಣ್ಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಶವ ಹೊರತಂದರು ಎಂದು ತಿಳಿಸಿದರು.
Related










