
ಮಂಡ್ಯ: ಪ್ರೀತಿಸಿದವಳನ್ನೇ ಮೂರು ದಿನಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತನೊಬ್ಬ ಹೃದಯಾಘಾತದಿಂದ ನಿಧನವಾಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಹಾಲಿ ಬೆಂಗಳೂರು ನಗರದ ಖಾಸಗಿ ಐಟಿ ಕಂಪನಿಯ ಉದ್ಯೋಗಿ ಶಶಾಂಕ್ (28) ಜವರಾಯನ ಅಟ್ಟಹಾಸಕ್ಕೆ ಶರಣಾಗಿ ಕೊನೆಯುಸಿರೆಳೆದವರು.
ಇನ್ನು ತಾನು ಪ್ರೀತಿಸುತ್ತಿದ್ದ ಜಾರ್ಖಂಡ್ ಮೂಲದ ಅಷ್ಣಾರ ಎಂಬ ಯುವತಿಯ ಬಗ್ಗೆ ಮನೆಯವರಿಗೆ ತಿಳಿಸಿ, ಒಪ್ಪಿಸಿ ಪ್ರೀತಿಸಿದ ಆ ಯುವತಿಯೊಂದಿಗೆ ಇದೇ ಮಾ.2ರಂದು ಮೈಸೂರಿನ ರೆಸಾರ್ಟ್ ಒಂದರಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು.
ವಿವಾಹದ ದಿನವೇ ಶಶಾಂಕ್ ಜ್ವರದಿಂದ ಬಳಲುತ್ತಿದ್ದ ಬಗ್ಗೆ ಆತನೆ ತನ್ನ ಸ್ನೇಹಿತ ಜತೆ ಹೇಳಿಕೊಂಡಿದ್ದ. ಈ ನಡುವೆಯೂ ಕುಟುಂಬ ಸಹಿತ ಬೆಂಗಳೂರಿಗೆ ಬಂದಿದ್ದ ಅವರಿಗೆ ಮಂಗಳವಾರ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ಆತನನ್ನು ಕೂಡಲೇ ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮಧ್ಯೆಯೇ ಅಸುನೀಗಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಪತ್ನಿ, ಪತ್ನಿಯ ಅಪ್ಪ- ಅಮ್ಮ ಸೇರಿದಂತೆ ಬಂಧು ಬಳಗದವರ ಆಕ್ರಂದನ ಮುಗಿಲು ಮುಟ್ಟಿದೆ.